ಲಲಿತ ಪ್ರಬಂಧ
ನೀತಾ ರಾವ್
ಇಂದು ಬೆಳಗಾವಿಯಂಥ ಮಧ್ಯಮ ಗಾತ್ರದ ಜಿಲ್ಲಾಕೇಂದ್ರದಲ್ಲೂ ಬಿಗ್ ಬಝಾರ್, ರಿಲಾಯನ್ಸ್ ಫ್ರೆಶ್, ಡಿ ಮಾರ್ಟ್, ಆದಿತ್ಯ ಬಿರ್ಲಾ ಮೋರ್ ದಂಥ ದೊಡ್ಡ ದೊಡ್ಡ ಮಳಿಗೆಗಳಾಗಿ ಜನರು ಅವಕ್ಕೆಲ್ಲ ಒಗ್ಗಿ ಹೋಗಿ ಸುಮಾರು ವರ್ಷಗಳೇ ಕಳೆದು ಹೋದವು. ಅಂಥ ದೊಡ್ಡ ಮಳಿಗೆಗಳಲ್ಲಿ ತರಕಾರಿಗಳನ್ನು ಕೂಡಾ ಮಾರಲು ಶುರು ಮಾಡಿ, ರಸ್ತೆಬದಿಯ ಸಣ್ಣ ಪುಟ್ಟ ವ್ಯಾಪಾರಿಗಳ ಹೊಟ್ಟೆಗೆ ಹೊಡೆದಂತಾಯಿತು ಎಂದು ಕೂಡ ಭಾವಿಸಿ ಬಹಳಷ್ಟು ಜನ ಸಂಕಟವನ್ನನುಭವಿಸುತ್ತಾರೆ.
ಆದರೆ ಅಸಲಿ ವಿಷಯ ಏನಪ್ಪಾ ಅಂದ್ರೆ ಇವತ್ತು ಬೆಳಿಗ್ಗೆ ಬೆಳಿಗ್ಗೆ ಒಮ್ಮಿಲೇ ನನಗೆರಡು ನಿಂಬೆಹಣ್ಣು, ನಾಲ್ಕು ಟೊಮ್ಯಾಟೋ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬೇಕು ಅಂತಾದರೆ, ನಾನು ಇಂಥ ದೊಡ್ಡ ವ್ಯಾಪಾರಿ ಮಳಿಗೆಯ ಎರಡನೆಯ ಮಹಡಿಗೆ ಹೋಗಿ ಆ ವಿಸ್ತಾರವಾದ ಜಾಗದಲ್ಲಿ ಅಲ್ಲೆಲ್ಲೋ ಜೋಡಿಸಿಟ್ಟ ತರಕಾರಿಯ ವಿಭಾಗಕ್ಕೆ ಹೋಗಿ, ನನಗೆ ಬೇಕಾದ ತರಕಾರಿಗಳನ್ನೆಲ್ಲ ಆರಿಸಿ ನಾನೇ ಅಲ್ಲಿಟ್ಟ ಚೀಲವನ್ನು ಎಳೆದು ಹರಿದುಕೊಂಡು ಅದರಲ್ಲಿ ಆಯ್ದುಕೊಂಡ ತರಕಾರಿಗಳನ್ನೆಲ್ಲ ಒಂದೊಂದಾಗಿ ಹಾಕಿ, ಕೆಲವೊಮ್ಮೆ ತೂಕ ಕೂಡ ನಾನೇ ಮಾಡಿಕೊಂಡು ನಂತರ ಅವರಿಂದ ಬೆಲೆಯ ಸ್ಟಿಕರನ್ನು ಅಂಟಿಸಿಕೊಂಡು, ನಂತರ ಬಿಲ್ಲಿಂಗ್ ಕೌಂಟರಿಗೆ ಹೋಗಿ ದುಡ್ಡನ್ನು ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡಿನಿಂದ ಪಾವತಿಸಿ ಹೊರಬರುವ ಹೊತ್ತಿಗೆ ಇಲ್ಲಿ ಮನೆಯಲ್ಲಿ ಅಡುಗೆಯಾಗಿ ಹೋಗುವಷ್ಟು ಟೈಮು ಹಾಳಾಗಿ ಹೋಗಿರುತ್ತೆ.
ಅದಕ್ಕಿಂತ ಬೀದಿಬದಿಯಲ್ಲಿ ಅಥವಾ ಸಣ್ಣ ಗೂಡಂಗಡಿಗಳಲ್ಲಿ, ಪುಟ್ಟ ಕಿರಾಣಿ ಅಂಗಡಿಗಳಲ್ಲಿ ಅಥವಾ ಅದಕ್ಕಾಗೇ ಇರುವ ಪಕ್ಕಾ ಇಂಡಿಯನ್ ತರಕಾರಿ ಮಾರ್ಕೆಟ್ಟಿಗೆ ಹೋಗಿಬಿಟ್ಟರೆ ಹತ್ತಿಪ್ಪತ್ತು ನಿಮಿಷದಲ್ಲಿ ನನ್ನ ಕೆಲಸವಾಗುತ್ತದೆ.
ಆದರೆ ವಿಷಯ ಅದಲ್ಲ. ದೊಡ್ಡ ದೊಡ್ಡ ಮಳಿಗೆಗಳಿಗೆ ಹೋಗಿ ಯಾವ ಮಾತು-ಕತೆಯಿಲ್ಲದೇ, ಚೌಕಾಶಿ ಮಾಡದೇ ಅವರು ಹೇಳಿದಷ್ಟು ದುಡ್ಡು ಕೊಟ್ಟು ಬಾಯಿ ಮುಚ್ಚಿಕೊಂಡು ಬರುವುದು ನನ್ನಂಥವರಿಗೆ ಆಗಿಬರುವುದಿಲ್ಲ. ನಮಗೇನಿದ್ದರೂ ನಮ್ಮ ಲೋಕಲ್ ಇಂಡಿಯನ್, ರಸ್ತೆ ಬದಿಯ ತರಕಾರಿ ಮಾರ್ಕೆಟ್ಟುಗಳೆಂದರೆ ಪ್ರಾಣ.
ಯಾಕೆಂದರೆ ಈ ನೆಲದ ಮಣ್ಣಿನ ವಾಸನೆಯ ಹಸಿ ಹಸಿ ತರಕಾರಿ ಸಿಗುವುದು ಅಲ್ಲಿ ಮಾತ್ರ. ಈ ಮಣ್ಣಿನ ವಾಸನೆಯ ಪಕ್ಕಾ ಇಂಡಿಯನ್ ಮೆಂಟ್ಯಾಲಿಟಿಯ ಜನ ಬರುವುದೂ ಅಲ್ಲಿ ಮಾತ್ರ. ಹೀಗಾಗಿ ಅಲ್ಲೊಂದು ಜೀವ-ಭಾವ ರಸಸಂಚಾರವಿದೆ. ನಗು-ಸಿಟ್ಟು, ಬೈದಾಟ, ಹೊಡೆದಾಟಗಳಿವೆ. ಮಾಲ್‌ನ ಹವಾನಿಯಂತ್ರಿತ ನಾಲ್ಕು ಗೋಡೆಗಳ ಒಳಗಿರದ ಅನೇಕ ಅನೇಕ ಸಂಗತಿಗಳಿವೆ ಇಲ್ಲಿ.
ಬೆಳಗಾವಿಯ ಹಳೆಯ ತರಕಾರಿ ಮಾರ್ಕೆಟ್ ಊರ ಮಧ್ಯಭಾಗದಲ್ಲಿದ್ದರೂ ಇದೀಗ ಆಯಾ ಭಾಗದ ಜನರಿಗೆ ಬೇಕಾಗುವ ತರಕಾರಿಗಳು ಅಲ್ಲಲ್ಲೇ ಸಿಗುವ ವ್ಯವಸ್ಥೆ ಇದ್ದೇ ಇದೆ. ಆದರೂ ಹಳೆಯ ಪೇಟೆಗೇ ಹೋಗಬೇಕೆಂದು ನಿಮಗೆ ಮನಸ್ಸಾದರೆ ಒಂದೆರಡು ಕಿರಿದಾದ ಓಣಿಗಳಲ್ಲಿ ವಾಹನಗಳು ಓಡಾಡಲು ಆಸ್ಪದವಿಲ್ಲದಂತೆ ಅಡ್ಡ ಹಾಕಿ ನಿಲ್ಲಿಸಿದ ಕಲ್ಲುಗಳನ್ನು ದಾಟಿಕೊಂಡು ಒಳಗೆ ಹೋದರೆ ಇಕ್ಕೆಲಗಳಲ್ಲಿ ನಿಮಗೆ ಹಳ್ಳಿಯಿಂದ ತರಕಾರಿ ಮಾರಲಿಕ್ಕಾಗಿಯೇ ಬಂದ ಹೆಂಗಸರು, ಗಂಡಸರು ಅವರವರ ಟಿಪಿಕಲ್ ಹಳ್ಳಿಯ ಉಡುಗೆಗಳಲ್ಲಿಯೇ ಅಂದರೆ ಅಂಚು-ಸೆರಗಿರುವ ಇಚಲಕರಂಜಿ ಸೀರೆಗಳಲ್ಲೋ, ಸಿಂಥೆಟಿಕ್ ಸೀರೆಗಳಲ್ಲೋ ಕಾಣಸಿಗುತ್ತಾರೆ.
ಜೆಬ್ಬಾ-ಪೈಜಾಮ್, ಜುಬ್ಬಾ-ಧೋತರ, ಅಪರೂಪಕ್ಕೆ ಪ್ಯಾಂಟ್-ಶರ್ಟು ಹಾಕಿದ ಗಂಡಸರು ಒಬ್ಬರಿಗೊಬ್ಬರು ಒತ್ತೊತ್ತಾಗಿ ಕುಳಿತಿರುತ್ತಾರೆ. ಪ್ರತೀ ವ್ಯಾಪಾರಿಯೂ ಒಂಥರಾ ಸ್ಪೆಷಲಿಸ್ಟ್ ಇದ್ದಂತೆ. ಒಂದೋ, ಎರಡೋ ತರಕಾರಿಗಳನ್ನು ಮಾತ್ರ ಇಟ್ಟುಕೊಂಡಿರುತ್ತಾರೆ. ಒಬ್ಬಳು ಬರೀ ಬದನೆಕಾಯಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ, ಇನ್ನೊಬ್ಬಳು ಬರೀ ಗಜ್ಜರಿಯನ್ನು ಮಾರುತ್ತಿರುತ್ತಾಳೆ.
ಹೆಚ್ಚಿನವರೆಲ್ಲ ತಮ್ಮ ಹೊಲದಲ್ಲಿ ಬೆಳೆದ ತರಕಾರಿಗಳನ್ನೇ ತರುವುದರಿಂದ ಒಂದು ಅಥವಾ ಎರೆಡು ತರಕಾರಿಗಳನ್ನಷ್ಟೇ ಮಾರುತ್ತಿರುತ್ತಾರೆ. ಇನ್ನು ಅನೇಕರು ದಿನಾಲೂ ಬೆಳಿಗ್ಗೆ ಬಂದು, ಮಾರ್ಕೆಟ್ ಯಾರ್ಡಿಗೆ ಹೋಗಿ ಠೋಕ ವ್ಯಾಪಾರ ಮಾಡಿಕೊಂಡು ಬಂದು ಮಾರಲು ಕುಳಿತಿರುತ್ತಾರೆ. ಅಂಥವರೂ ಕೇವಲ ಕೆಲವೇ ತರಕಾರಿಗಳ ಸ್ಪೆಷಲಿಸ್ಟ್ ಥರಾ ಒಂದೇ ಬಗೆಯ ತರಕಾರಿಗಳನ್ನು ಇಟ್ಟುಕೊಂಡು ಮಾರುತ್ತಾರೆ. ಅದೇ ಬೆಳಗಾವಿಯ ಸ್ಪೆಷಾಲಿಟಿ.
ಬೆಳಗಾವಿಯ ಜನರೂ ಒಂಥರಾ ಸ್ಪೆಷಲ್ಲೇ! ಕೃಷ್ಣಾ ತೀರದ ಬದನೆಕಾಯಿ ಭಾಳ ರುಚಿ, ಡಿಸೆಂಬರ್ ತಿಂಗಳಲ್ಲಿ ಬರುವ ವಠಾಣೆ ಕಾಯಿ ಬಲು ಸ್ವಾದ, ಜವಾರಿ ಗಜ್ಜರಿಯೇ ಹೆಚ್ಚು ರುಚಿ, ಬೆಂಗಳೂರಿನ ಕೆಂಪು ಕ್ಯಾರೆಟ್ ನೋಡಲಿಕ್ಕಷ್ಟೇ ಛಂದ, ಬರಿ ಬಾಯಲ್ಲಿ ತಿನ್ನಲಿಕ್ಕೆ ನಮ್ಮ ಬೆಳಗಾವಿಯ ಗಜ್ಜರಿಯೇ ಒಳ್ಳೆಯದು, ಹೀಗೆ ಎಲ್ಲ ಕಾಯಿಪಲ್ಯಗಳಿಗೂ ಲೇಬಲ್ ಹಾಕಿಟ್ಟು ಬಿಟ್ಟಿದ್ದಾರೆ.
ಹಾಗಾಗಿ ಕೊಳ್ಳುವಾಗ ಬಲೇ ಚೌಕಾಶಿ ಇವರದು. ಕೆಲ ವ್ಯಾಪಾರಿಗಳು ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿ ಮೆಣ್ಸಿನಕಾಯಿ, ಹಸಿ ಶುಂಠಿ, ಬೆಳ್ಳುಳ್ಳಿ ಇವಿಷ್ಟೇ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ವರ್ಷಾನುಗಟ್ಟಲೇ ಇದೇ ವ್ಯಾಪಾರ ಅವರದು. ಆದರೆ ಇವುಗಳನ್ನೆಲ್ಲಾ ಸ್ವಲ್ಪಸ್ವಲ್ಪವೇ ಸೇರಿಸಿ ಒಂದು ಕಾಂಬಿನೇಷನ್ ಮಾಡಿ ಮಸಾಲಾ ಸಾಮಾನು ಎಂದು ಮಾರುವ ಮುಂಬೈ ವ್ಯಾಪಾರಿಗಳ ಸೂಕ್ಷ್ಮ ಇನ್ನೂ ಯಾಕೋ ಬೆಳಗಾವಿಗೆ ಬಂದಿಳಿದಿಲ್ಲವಾದ್ದರಿಂದ ಇವುಗಳನ್ನೆಲ್ಲ ಸಪರೇಟಾಗಿಯೇ ಮಾರಾಟ ಮಾಡುತ್ತಾರೆ.
ಇನ್ನೊಬ್ಬ ಬರಿ ಉಳ್ಳಾಗಡ್ಡಿ ಮತ್ತು ಬಟಾಟಿಗಳನ್ನಷ್ಟೇ ಮಾರುತ್ತಿರುತ್ತಾನೆ. ಮತ್ತೊಬ್ಬನು ಕೇಸರಿ ಕಲರಿನ ಫ್ರೆಶ್ ಆದ ಗಜ್ಜರಿಗಳನ್ನೂ, ಹಸಿರಸಿರಾದ ಹಸಿ ಹಸಿ ಮಿಂಚುವ ಎಳೆ ಸೌತೆಕಾಯಿಗಳನ್ನಷ್ಟೇ ಅಂದವಾಗಿ ಜೋಡಿಸಿಟ್ಟುಕೊಂಡಿರುತ್ತಾನೆ. ಹಾಗೇ ಮುಂದುವರೆದರೆ ಅವಳೊಬ್ಬಳು ದಿನಾಲೂ ಮನೆಯಲ್ಲಿ ನೆನಿಸಿ ಮೊಳಕೆ ಬರಿಸಿದ ಐದಾರು ನಮೂನೆಯ ಮೊಳಕೆಕಾಳುಗಳನ್ನಿಟ್ಟುಕೊಂಡಿರುತ್ತಾಳೆ.
ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ಏಳೆಂಟು ತರಕಾರಿಗಳ ದೊಡ್ಡ ಸಾಮ್ರಾಜ್ಯದ ಅದಿಪತಿಗಳಂತೆ ಸ್ಟೂಲೊಂದರ ಮೇಲೆ ವಿರಾಜಮಾನರಾಗಿರುತ್ತಾರೆ. ಅಲ್ಲೊಬ್ಬಳು ಸೇವಂತಿಗೆ ಹೂ, ಗುಲಾಬಿ ಹೂ, ಚೆಂಡು ಹೂಗಳ ಹತ್ತು ರೂಪಾಯಿ, ಇಪ್ಪತ್ತು ರೂಪಾಯಿಗಳ ಗುಂಪಿಗಳನ್ನು ಮಾಡಿಟ್ಟುಕೊಂಡಿದ್ದಾಳೆ. ಅವುಗಳ ಜೊತೆಗೆ ಇಪ್ಪತ್ತು, ಮೂವತ್ತು ರೂಪಾಯಿಗಳ ಹೂವಿನ ಮಾಲೆಗಳನ್ನೂ ಪಕ್ಕದಲ್ಲೇ ನೇತಾಡಿಸಿಕೊಂಡಿದ್ದಾಳೆ.
ಅವಳ ಪಕ್ಕದಲ್ಲೇ ತಳ್ಳು ಗಾಡಿಯೊಂದರಲ್ಲಿ ಹಳೇ ಟೇಪ್ ರೆಕಾರ್ಡರಿನಲ್ಲಿ ದೇವರ ಹಾಡುಗಳನ್ನು ಕೇಳಿಸಿ ವಾತಾವರಣವನ್ನೆಲ್ಲ ಭಕ್ತಿಯಿಂದ ಕಟ್ಟಿಹಾಕಲು ಪ್ರಯತ್ನಿಸುತ್ತ ತನ್ನಲ್ಲಿರುವ ಗಂಧ, ಕರ್ಪೂರ, ಊದಬತ್ತಿ, ರಂಗೋಲಿಯ ಸ್ಟಿಕರ್, ಅರಿಸಿಣ-ಕುಂಕುಮಗಳನ್ನು ಮಾರುವ ಕಾಯಕದಲ್ಲಿ ತೊಡಗಿದ್ದಾನೆ ಇನ್ನೊಬ್ಬ. ಅಲ್ಲೊಬ್ಬನು ದೊಡ್ಡ ಹಲಸಿನ ಹಣ್ಣನ್ನು ಸೀಳಿ ತೊಳೆಗಳನ್ನು ಬಿಡಿಸಿ ಬಿಡಿಸಿ ಇಡುತ್ತಿದ್ದಾನೆ.
ನಾಜೂಕಿನ ಜನ ಈಗ ದೊಡ್ಡ ಹಲಸಿನ ಹಣ್ಣಿನ ಸಹವಾಸಕ್ಕೆ ಹೋಗುವುದಿಲ್ಲ. ಅವನಿಗೆ ಗೊತ್ತು, ದೊಡ್ಡ ಹಣ್ಣನ್ನು ತಂದು, ತುಂಬಾ ಟೈಮಿಟ್ಟುಕೊಂಡು ಕುಳಿತು, ಕೈಗೆಲ್ಲಾ ಒಳ್ಳೆಣ್ಣೆಯನ್ನೋ, ತೆಂಗಿನೆಣ್ಣೆಯನ್ನೋ ಸವರಿಕೊಂಡು ಒಂದು ಕತ್ತಿ, ಒಂದು ಈಳಿಗೆಮಣೆ ಇಟ್ಟುಕೊಂಡು ಅಡ್ಡಡ್ಡ ಕತ್ತರಿಸಿ ನಂತರ ಒಂದಕ್ಕೊಂದು ಅಪ್ಪಿಕೊಂಡು ಒತ್ತೊತ್ತಾಗಿ ಕುಳಿತಿರುವ ತೊಳೆಗಳನ್ನು ಬಿಡಿಸುವುದೆಂದರೆ ಈಗಿನವರಿಗೆ ಆಗುವುದಿಲ್ಲ.
ಈಗೇನಿದ್ದರೂ ಹತ್ತೋ ಇಪ್ಪತ್ತೋ ತೊಳೆಗಳನ್ನು ಕಟ್ಟಿಸಿಕೊಂಡು ಹೋಗಿ ತಿಂದು ಕೈತೊಳೆದುಕೊಂಡುಬಿಡುವ ಧಾವಂತದ ಬದುಕು. ವಿವಿಧ ನಮೂನೆಯ ಬಾಳೆಹಣ್ಣುಗಳನ್ನಿಟ್ಟುಕೊಂಡವ ಅವನ ಪಕ್ಕದ್ದಲ್ಲಿ. ಜವಾರಿ, ವಸಯಿ (ಚಿಕ್ಕಿ ಬಾಳೆಹಣ್ಣು), ಏಲಕ್ಕಿ ಬಾಳೆಹಣ್ಣು ಹೀಗೆ ಅವುಗಳಲ್ಲೂ ನಾನಾ ವಿಧ. ಆದರೆ ಬೆಂಗಳೂರು, ಮೈಸೂರು, ಶಿವಮೊಗ್ಗಾ ಮುಂತಾದೆಡೆ ಕಾಣಸಿಗುವ ಶಿಸ್ತಾಗಿ ಜೋಡಿಸಿಟ್ಟ ತರಕಾರಿ ಮಳಿಗೆಗಳಲ್ಲ ಇವು.
ಪುಟ್ಟ ಗಾಡಿಯಲ್ಲಿ ಸ್ವೀಟ್ ಕಾರ್ನ್ ಮಾರುವವನ ಮುಂದೆ ಸಣ್ಣ ಮಕ್ಕಳು ಮುಖ ಅಗಲಿಸಿ ಮೂಗನರಳಿಸಿ ವಾಸನೆಯನ್ನು ಆಘ್ರಾಣಿಸುತ್ತಿವೆ. ಅವನ ಎದುರುಗಡೆಯೇ ನಾಲ್ಕೈದು ತಳ್ಳು ಗಾಡಿಗಳಲ್ಲಿ ಪಾನಿ-ಪೂರಿ, ಪಾವ-ಭಾಜಿ, ಭೇಲ್-ಪೂರಿ, ಶೇವ್-ಪೂರಿ ಮಾಡುತ್ತ, ಕಚಕಚನೆ ಉಳ್ಳಾಗಡ್ಡಿ, ಟೊಮೆಟೋ, ಕೊತ್ತಂಬರಿ ಸೊಪ್ಪು ಹೆಚ್ಚುತ್ತ, ಕಡು ವಾಸನೆಗಳನ್ನು ಬೀರುತ್ತ ಎದುರಿನಿಂದ ಹಾಯ್ದು ಹೋಗುವವರ ನಾಸಿಕವನ್ನು ಅರಳಿಸಿ, ರುಚಿ-ಗ್ರಂಥಿಗಳನ್ನು ಕೆರಳಿಸಿ ಕರೆಯುವ ವ್ಯಾಪಾರಿಗಳು.
ಹಬ್ಬ-ಹರಿದಿನಗಳು ಬಂದರಂತೂ ಈ ಪೇಟೆಗಳು ನವವಧುವಿನಂತೆ ಶೃಂಗಾರಗೊಳ್ಳುತ್ತವೆ. ಲಲನೆಯರ ಗಲಗಲ ಮಾತು, ಕುಲುಕುಲು ನಗುವಿನಿಂದ ರಂಗೇರುತ್ತವೆ. ಯುಗಾದಿ ಹಬ್ಬಕ್ಕೆ ಆಗಷ್ಟೇ ಚಿಗುರಿದ ಮಾವಿನ ತಳಿರು, ಬೇವಿನ ಸೊಪ್ಪು, ಬೇವು-ಬೆಲ್ಲದ ಸಾಮಗ್ರಿಗಳು ಪೇಟೆಯನ್ನು ಪ್ರವೇಶಿಸುತ್ತವೆ. ಗಣೇಶನ ಹಬ್ಬದಲ್ಲಂತೂ ನಾನಾವಿಧದ ಹೂಗಳ ಜೊತೆಗೆ ಕಮಲ ಪುಷ್ಪಗಳೂ ಕೆರೆಗಳನ್ನು ತೊರೆದು ಗಣೇಶನ ಮುಡಿಯೇರಲು ಪೇಟೆಗೆ ಬಂದಿರುತ್ತವೆ.
ನವರಾತ್ರಿಯಲ್ಲಿ ಕಬ್ಬಿನ ಜಲ್ಲೆಗಳು ಎಲ್ಲೆಲ್ಲೂ ತಲೆದೂಗುತ್ತಿರುತ್ತವೆ. ದೀಪಾವಳಿಗೆ ಮಣ್ಣಿನ ಬಣ್ಣಬಣ್ಣದ ಸುಂದರ ಆಕೃತಿಯ ಹಣತೆಗಳು, ಬಣ್ಣಬಣ್ಣದ ರಂಗೋಲಿಗಳು, ಸುವಾಸನೆಯ ಎಣ್ಣೆಗಳು, ಸೋಪುಗಳು, ಆಕಾಶಬುಟ್ಟಿಗಳು ಹೊಸದಾಗಿ ಇಲ್ಲಿಗೆ ಪ್ರವೇಶ ಪಡೆಯುತ್ತವೆ. ಓಹ್! ಹೇಳಿ ದಣಿದರೂ ಮುಗಿಯದಷ್ಟು ವೈವಿಧ್ಯಮಯ ಈ ನಮ್ಮ ಸಂದಿಗೊಂದಿಗಳ ಸಾದಾ ಪೇಟೆ. ಇಂಥ ಪ್ರಪಂಚ ನಮಗೆ ಮಾಲ್ ನಲ್ಲಿ ಸಿಕ್ಕೀತೇ?
ಇನ್ನು ದಿನದ ತರಕಾರಿ ಖರೀದಿಯ ಗಮ್ಮತ್ತೂ ಬೇರೆಯೇ! ಒಮ್ಮೊಮ್ಮೆ ಬೆಲೆಗಳು ವಿಪರೀತ ಏರಿ ಗ್ರಾಹಕರನ್ನು ಕಂಗೆಡಿಸಿದರೆ ಇನ್ನೊಮ್ಮೆ ಅವು ಪಾತಾಳಕ್ಕಿಳಿದು ವ್ಯಾಪಾರಿಗಳನ್ನು ಹೈರಾಣಾಗಿಸುತ್ತವೆ. ಕಾಯಿ-ಪಲ್ಯೆ ತುಟ್ಟಿಯಾದಾಗ ಪಾವ ಕಿಲೋಕ್ಕೆ (ಕಾಲು ಕೇಜಿ) ಇಪ್ಪತ್ತು ರುಪಾಯಿ ಎಂದು ಟೊಮೇಟೊ ಬೆಲೆಯನ್ನು ದಿಮಾಕಿನಿಂದ ಹೇಳುವ ಅದೇ ಮಹಿಳೆಯರು ಅವು ನೆಲಕಚ್ಚಿದ ಕೂಡಲೇ ಕಿಲೋಗೆ ಹತ್ತು ರುಪಾಯಿ ಎಂದು ಮೆಲ್ಲಗೆ ಉಸುರಿದಾಗ ನಾನೇ ಎಲ್ಲಿ ತಪ್ಪು ಕೇಳಿಸಿಕೊಂಡೆನೋ ಎಂದು ಅನುಮಾನ ಬಂದು ಇನ್ನೊಮ್ಮೆ “ಆಂ?” ಎಂದು ಕೇಳಿ ಖಾತ್ರಿ ಮಾಡಿಕೊಳ್ಳುತ್ತೇನೆ.
ಹತ್ತು ರುಪಾಯಿಗೆ ಟೊಮೆಟೊ ಎಂದಾಗ ಕರಳು ಚುರ್ರೆನ್ನುತ್ತದೆ. ಅರ್ಧ ಕೇಜಿ ಹಾಕು ಎಂದರೆ ಅವರಿಗೆ ಕಿರಿಕಿರಿ. “ಒಂದು ಕಿಲೋ ತೊಗೊಂಡುಬಿಡ್ರಿ ಅಕ್ಕಾ, ರೇಟು ಬರೇ ಹತ್ತು ರುಪಾಯಿ ಆಗೇದ” ಎಂದಾಗ ನಾನೂ ಅನಿವಾರ್ಯವಾಗಿ ಹೂಂಗುಟ್ಟುತ್ತೇನೆ. ಅವಳು ಒಂದೆರಡು ಟೊಮೇಟೊ ಕಡಿಮೆ ಹಾಕಿದರೂ ನಡೆದೀತು ಎನ್ನುವ ಮನೋಭಾವ ನನ್ನದು. ಆದರೆ ಅವಳು ಹಾಗೆಲ್ಲಾ ತೂಕದಲ್ಲಿ ಮೋಸ ಮಾಡುವ ಗಿರಾಕಿಯೇ ಅಲ್ಲ. ಇನ್ನೆರೆಡು ಹೆಚ್ಚಿಗೆಯೇ ಹಾಕುತ್ತಾಳೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಚೌಕಾಶಿ ಮಾಡುವ ಜುಗ್ಗರಿರುತ್ತಾರೆ.
ಒಂದು ದಿನ ನಾನು ಹೀಗೇ ಒಂದು ಕಿಲೋ ಟೊಮೇಟೊವನ್ನು ನನ್ನ ಚೀಲಕ್ಕೆ ತುಂಬಿಸಿಕೊಳ್ಳುವಷ್ಟರಲ್ಲಿ ಇನ್ನೊಬ್ಬ ಹೆಣ್ಣುಮಗಳು ಬಂದು “ಟೊಮೇಟೊ ಹೆಂಗ ಕೊಟ್ಟಿ?” ಎಂದು ಕೇಳಿದಳು. ಹತ್ತು ರೂಪಾಯಿ ಎಂದೊಡನೆ “ಆಕಡೆ ಕೂತಾಕಿ ಹತ್ತ ರೂಪಾಯಿಗೆ ದೀಡ (ಒಂದೂವರೆ ) ಕಿಲೋ ಕೊಡಾಕತ್ತಾಳ!” ಎಂದಳು. ಸರಿಯಾಗಿ ನಿಂತು ನಾನು ಅವಳನ್ನೇ ಒಮ್ಮೆ ನೋಡಿ ನಿಟ್ಟುಸಿರಿಟ್ಟು ಮುಂದೆ ಸಾಗಿದೆ.
ಇನ್ನೊಬ್ಬ ಒಂದು ದಿನ ಹಸಿ ಹಸಿಯಾದ ಎಳೆ ಸೌತೇಕಾಯಿ ಮಾರುತ್ತಿದ್ದ. ನಾನು ಹೋಗುವುದಕ್ಕೂ ಇನ್ನೊಬ್ಬ ಗಿರಾಕಿ ಆಗಲೇ ತನ್ನ ಕಿರಿಕಿರಿ ಶುರುವಿಟ್ಟುಕೊಂಡಿದ್ದ. “ಪಾವ (ಕಾಲು ಕೇಜಿ) ಕಿಲೋಕ್ಕ ಹದಿನೈದು ರುಪಾಯಿ ಹೇಳ್ತಿ! ಮನಿಗೆ ಒಯ್ದಮ್ಯಾಲೆ ಇವೇನಾದ್ರೂ ಕಹಿ ಬಂದ್ರ ವಾಪಸ್ ಬಂದು ಪರತ ಮಾಡ್ತೇನಿ” ಎಂದು ಜೋರು ಮಾಡುತ್ತಿದ್ದ.
ಈ ವ್ಯಾಪಾರಿ ಯಾಕೋ ಸಂಭಾವಿತನಿದ್ದ ಎನಿಸುತ್ತೆ. ಜಾಸ್ತಿ ಮಾತನಾಡದೇ ಸುಮ್ಮನೇ ನಿಂತಿದ್ದ. ಗಿರಾಕಿಯ ರಗಳೆ ಇನ್ನೂ ಹೆಚ್ಚಾಯ್ತು. “ಇವೇನಾದ್ರೂ ಕಹಿ ಬಂದ್ರ ನನ್ನ ರೊಕ್ಕ ಹಾಳು, ಈ ಸೌತೀಕಾಯಿನೂ ಹಾಳು, ನಾನು ವಾಪಸ್ ಬಂದು ಕಹಿ ಸೌತಿಕಾಯಿ ನಿನ್ನ ಬಾಯೊಳಗ ಹಾಕ್ತೇನಿ” ಎಂದು ಇನ್ನೊಮ್ಮೆ ಹೇಳಿದ. ಅವನ ಮಾತಿನ ಧಾಟಿಗೆ ನನಗೆ ನಿಜಕ್ಕೂ ರೇಗಿತು. ಇನ್ನೊಬ್ಬರ ವಿಷಯದಲ್ಲಿ ತಲೆ ಹಾಕಬೇಡವೆಂದು ನನ್ನ ಮಕ್ಕಳು ಮಾಡಿರುವ ತಾಕೀತನ್ನು ಮರೆತು ನಾನು ಅವರ ಮಧ್ಯೆ ಮೂಗು ತೂರಿಸಿಯೇಬಿಟ್ಟೆ. “ಅವನೇನು ಪಾಪ ಸೌತೀಕಯಿಯೊಳಗೆ ಹೊಕ್ಕು ನೋಡಿರ್ತಾನೇನು? ಅಷ್ಟು ತಿಳೀತಿದ್ರ ಕಹಿ ಇಲ್ಲದಿರೋ ಸೌತೀಕಾಯಿ ನೀನ ನೋಡಿ ಆರಿಸಿಕೊಂಡು ಹೋಗು, ಇಲ್ಲಾ ಬಿಟ್ಟು ಹೋಗು” ಎಂದು ದಬಾಯಿಸಿದೆ.
ಅಸಲಿ ವಿಷಯವೇನೆಂದರೆ ಅವನಿಗೆ ಸೌತೇಕಾಯಿ ಬಿಡಲು ಮನಸ್ಸಿಲ್ಲ, ಆದರೆ ಹದಿನೈದು ರೂಪಾಯಿಗೆ ಕಾಲು ಕೇಜಿ ಎಂದರೆ ನಾಲ್ಕು ಸೌತೇಕಾಯಿ ಏರುವುದೇ ಕಷ್ಟ, ಅಂಥದ್ದರಲ್ಲಿ ಒಂದೆರೆಡು ಕಹಿ ಬಂದುಬಿಟ್ಟರೆ! ಎನ್ನುವ ಸಂಕಟವೂ ಇದೆ. ಹಾಗಾಗಿ ಈ ಎಲ್ಲ ಡ್ರಾಮಾ! ಇಂಥ ಆಟಗಳೆಲ್ಲ ಮಾಲಿನಲ್ಲಿ ನಡೆಯುವುದಿಲ್ಲ. ಹಾಗಾಗಿ ಈ ಪುಕ್ಕಟೆ ಮನೋರಂಜನೆ, ನಮ್ಮಿಂದ ಉದುರುವ ಪುಕ್ಕಟೆ ಸಲಹೆ, ಉಪದೇಶಾಮೃತಗಳಿಗೂ ಇಂಥ ಪೇಟೆಗಳೇ ಹೇಳಿ ಮಾಡಿಸಿದ ಜಾಗಗಳು.
ಒಮ್ಮೊಮ್ಮೆ ಈ ಮಾರಾಟಗಾರರೂ ಜೋರಿರುತ್ತಾರೆ. ತರಕಾರಿಗಳು ತುಟ್ಟಿಯಾದ ಕಾಲದಲ್ಲಿ ಅವರ ಜೋರು, ದಿಮಾಕು ನಡೆಯುತ್ತವೆ. ಮತ್ತು ಗ್ರಾಹಕರು ಅಸಹಾಯಕತೆಯಿಂದ ಜೋಲಾಡುತ್ತಿರುತ್ತಾರೆ. ಯಾವ ತರಕಾರಿ ಕೇಳಿದರೂ ಎಂಬತ್ತು ರುಪಾಯಿ, ನೂರು ರೂಪಾಯಿ ಕೇಜಿಗೆ. ಜನರಿಗೆ ತಿನ್ನುವ ಚಪಲ, ಆದರೆ ಪರ್ಸಿನ ಚಿಂತೆ, ಹಾಗಾಗಿ ಅವರು ಕಾಲು ಕೇಜಿ ರೇಟು ಹೇಳಿದರೆ, ನಾವು ನೂರು ಗ್ರಾಂನ ಲೆಕ್ಕ ಕೇಳುತ್ತೇವೆ. ತರಕಾರಿ ಮಾರುವವಳೂ ಯಾವ ಮುಲಾಜೂ ಇಟ್ಟುಕೊಳ್ಳದೇ “ನೀ ಎಂದ ಕೊಂಡಿದ್ದಿ ಹೋಗ ನನ ಮಗಳ!” ಎಂದು ನಿರ್ದಾಕ್ಷಿಣ್ಯವಾಗಿ ತುಚ್ಛೀಕರಿಸಿ, ಇನ್ನೊಬ್ಬ ಗಿರಾಕಿಯತ್ತ ಗಮನ ಹರಿಸುತ್ತಾಳೆ.
ಅಪಮಾನಿತರಾದ ನಾವೂ ತೆಪ್ಪಗೆ ಅಲ್ಲಿಂದ ಕಾಲು ಕಿತ್ತುತ್ತೇವೆ. ಮನೆಗೆ ಬಂದ ಮೇಲೂ ಅಪಮಾನದ ಕಿಡಿ ನಿಗಿನಿಗಿ ಕೆಂಡವಾಗಿ ಮನಸ್ಸನ್ನು ಸುಡುತ್ತಿರುತ್ತದೆ. “ಏನು ತುಟ್ಟಿ ಆತು ಕಾಯಿಪಲ್ಯೆ? ಹಿಂಗಾದ್ರೆ ಸಾಮಾನ್ಯ ಜನಾ ಹೆಂಗ ಊಟಾ ಮಾಡ್ಬೇಕು?” ಎಂದು ನಮ್ಮ ಸಂಕಟವನ್ನು ಜನರಲೈಸ್ ಮಾಡುತ್ತ ನಮ್ಮ ಸ್ಥಿತಿಯ ಬಗ್ಗೆ ನಾವೇ ಕನಿಕರ ಪಟ್ಟುಕೊಳ್ಳುತ್ತೇವೆ. “ಹಿಂಗ ತುಟ್ಟಿ ಮಾಡಿದ್ರ ಸರಕಾರನ ಬಿದ್ದು ಹೋಗ್ತದ” ಎಂದು ರಾಜಕೀಯ ಭವಿಷ್ಯವನ್ನೂ ನುಡಿಯುತ್ತೇವೆ. ಏಕೆಂದರೆ ಈ ಅತಿಯಾದ ಈರುಳ್ಳಿಯ ರೇಟು ಸರಕಾರಗಳ ಅಸ್ತಿತ್ವವನ್ನೇ ಅಲುಗಾಡಿಸಿದ ನೆನಪು ಸ್ಮೃತಿಪಟಲದ ಮೇಲೆ ಹಾದು ಹೋಗುತ್ತಿರುತ್ತದೆ.
ತುಟ್ಟಿಯಾದಾಗ ಬೈದುಕೊಳ್ಳುತ್ತ, ಸೋವಿ ಆದಾಗ ಜಾಸ್ತಿ ತಿನ್ನಲಾಗದೇ ಅಂತೂ ಒಟ್ಟು ಒದ್ದಾಡುತ್ತಲೇ ಕಳೆಯುವ ನಮಗೆ ಈ ತರಕಾರಿ ಮಾರ್ಕೆಟ್ಟಿನಲ್ಲಿ ಒಂದಿಬ್ಬರಾದರೂ ಕಾಯಂ ವ್ಯಾಪಾರಿಗಳಿರುತ್ತಾರೆ. ನಾವು ಅತ್ಯಂತ ಸಹಜವಾಗಿ ಅವರ ಮುಂದೆಯೇ ಹೋಗಿ ನಿಂತುಬಿಟ್ಟಿರುತ್ತೇವೆ. ಹೀಗಾಗಿ ಅವರಿಗೂ ನಮ್ಮ ಸೀರೆಯ ಸಪ್ಪಳ, ನಮ್ಮ ಉಸಿರಿನ ಶಬ್ದ, ನಮ್ಮ ಪಾಂಡ್ಸ್ ಪೌಡರಿನ ಘಮ, ಎಲ್ಲ ಎಷ್ಟು ಪರಿಚಿತವಾಗಿ ಬಿಟ್ಟಿರುತ್ತವೆಂದರೆ ಇನ್ನೂ ಅಲ್ಲಿ ದೂರದಲ್ಲಿರುವಾಗಲೇ “ಬರ್ರಿ ಅಕ್ಕಾರ, ಗಜ್ಜರಿ ಭಾಳ ಛೊಲೋ ಬಂದಾವ ನೋಡ್ರಿ. ಬೋಣಗಿ ಮಾಡಿಬಿಡ್ರಿ” ಎಂದು ಕರೆದುಬಿಡುತ್ತಾರೆ.
ಹಾಗೆ ಭಿಡೆಗೆ ಇಂಥ ಗುರುತು ಪರಿಚಯವಿರುವರಲ್ಲಿ ಕೊಳ್ಳುವದಿದ್ದರೂ, ನನ್ನ ಕಾಯಂ ಪದ್ಡತಿಯೆಂದರೆ ಇಡೀ ಪೇಟೆಯನ್ನು ಮೊದಲೊಂದು ಸಲ ಸುತ್ತು ಹಾಕಿ ಯಾವ್ಯಾವ ತರಕಾರಿಗಳಿವೆ, ಎಲ್ಲಿ ಹೆಚ್ಚು ಫ್ರೆಶ್ ಆಗಿವೆ ಎಂದೆಲ್ಲ ನಜರಿನಲ್ಲೇ ಒಂದು ಅಂದಾಜು ಹಾಕಿಕೊಳ್ಳುವುದು. ಆ ನಂತರವೇ ನಾನು ನಿಜವಾದ ವ್ಯಾಪಾರಕ್ಕಿಳಿಯುತ್ತೇನೆ. ಹೀಗೆಲ್ಲ ಮಾಡಿದಾಗಲೇ ನನಗೆ ತರಕಾರಿ ಶಾಪಿಂಗ್ ನ ಫೀಲ್ ಬರುವುದು.
ನಾವು ತುಂಬ ಚಿಕ್ಕವರಿದ್ದಾಗ ನಮ್ಮ ಬಾಡಿಗೆ ಮನೆಗೆ ತರಕಾರಿ ಮಾರ್ಕೆಟ್ ಎಷ್ಟು ಹತ್ತಿರದಲ್ಲಿತ್ತೆಂದರೆ ನನ್ನಮ್ಮ ಒಮ್ಮೊಮ್ಮೆ ಒಲೆಯ ಮೇಲೆ ಕುಕ್ಕರ್ ಇಟ್ಟು, “ಸೀಟಿ ಆಗುವುದರೊಳಗೆ ಬಂದುಬಿಡ್ತೇನಿ” ಎಂದು ಕೈಯಲ್ಲೊಂದು ಚೀಲ ಹಿಡಿದು ಹೊರಟುಬಿಡುತ್ತಿದ್ದಳು. ಅಕ್ಷರಷಃ ಹಾಗೆ ಕುಕ್ಕರ್ ಏರಿಸಿ ಸೀಟಿ ಕೂಗುವುದರೊಳಗೆ ವಾಪಸ್ ಬರುವಷ್ಟು ಹತ್ತಿರದಲ್ಲಿತ್ತು ತರಕಾರಿ ಮಾರ್ಕೆಟ್.
ಹೀಗಾಗಿ ದಿನಾಲೂ ತಾಜಾ ತರಕಾರಿಗಳನ್ನು ಆರಿಸಿ ಚೌಕಾಶಿ ಮಾಡಿ ತರುವ ಅಭ್ಯಾಸ ಅವಳಿಗೆ ಬಂದಿತ್ತು. ಅದು ಅವಳಿಂದ ನನಗೂ ಇಳಿಯಿತೇನೋ! ತರಕಾರಿ ಮಾರ್ಕೆಟಿಗೆ ಹೋಗುವ ನನ್ನ ಉತ್ಸಾಹ ಹಾಗೆಂದೂ ಕುಂದಿಲ್ಲ. ಬೇಸರವೂ ಆಗುವುದಿಲ್ಲ. ಅಲ್ಲಿ ನಡೆಯುವ ವಿದ್ಯಮಾನಗಳಿಗೆ ಕಣ್ಣು-ಕಿವಿಗಳನ್ನು ಚುರುಕಾಗಿಟ್ಟುಕೊಂಡು ನಾನು ಸಾಗುತ್ತೇನೆ.
ಇವತ್ತೇನಾದರೂ ಹೊಸ ಕಥೆ ಸಿಕ್ಕಿದರೆ ಊಟದ ಟೇಬಲ್ಲಿನ ಮೇಲೆ ನಂಜಿಕೊಳ್ಳಲೊಂದು ವಸ್ತು ಸಿಗುತ್ತದೆಂಬ ಉತ್ಸಾಹ ನನ್ನಲ್ಲಿ ಯಾವತ್ತೂ ಪುಟಿಯುತ್ತಲೇ ನನ್ನೊಂದಿಗೆ ಪೇಟೆಗೆ ಬರುತ್ತದೆ. ಗ್ರಾಹಕ-ವ್ಯಾಪಾರಿಗಳ ಸರಸ ಸಂಭಾಷಣೆ, ವಿರಸ-ಜಗಳ, ಮಾತು-ಮೂದಲಿಕೆಗಳೆಂದರೆ ಕಣ್ಣರಳಿಸಿ ಕಿವಿಯಗಲಿಸಿ ಅಲ್ಲೇ ನಿಂತುಬಿಡುತ್ತದೆ. ಮತ್ತೆ ಕಥೆಯ ಸಾಮಗ್ರಿಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳುತ್ತದೆ. ಅಲ್ಲಿ ಕೇಳಿದ ಸಂಭಾಷಣೆಗಳನ್ನು ಹಾವಭಾವದ ಮೂಲಕ, ಒಂದಿಷ್ಟು ಉಪ್ಪು-ಖಾರವನ್ನೂ ಸೇರಿಸಿ, ಒಗ್ಗರಣೆಯನ್ನೂ ಹಾಕಿ ಬೆರೆಸಿ ಡೈನಿಂಗ್ ಟೇಬಲ್ ಮೇಲಿಟ್ಟು ಎಲ್ಲರಿಗೂ ಬಡಿಸಿ ಧನ್ಯವಾಗುತ್ತದೆ.
ರೇಟುಗಳ ಹಾವು-ಏಣಿಯಾಟದಲ್ಲಿ ಅವರೊಮ್ಮೆ ಮೇಲೆ, ನಾವು ಕೆಳಗೆ, ಇನ್ನೊಮ್ಮೆ ನಾವು ಮೇಲೆ, ಅವರು ಕೆಳಗೆ ಆಗಿ ನಿತ್ಯ-ನೂತನ ಆಟವಾಡುತ್ತಲೇ ಇರುವುದರಿಂದ ನಮಗೆ ಅವರ ಮುಖ, ಅವರಿಗೆ ನಮ್ಮ ಮುಖ ಬೇಸರವೆನಿಸದೇ ಪರಿಚಯದ ಮುಗುಳುನಗೆಯೊಂದು ಪ್ರತೀಸಲ ವಿನಿಮಯವಾಗುತ್ತಿರುತ್ತದೆ. ಹೀಗಾಗಿ ಹವಾನಿಯಂತ್ರಿತ ಮಾಲ್ ಗಳಿಗಿಂತ ಖುಲಾ ಹವಾದಲ್ಲಿರುವ ಈ ಗ್ರೇಟ್ ಇಂಡಿಯನ್ ಲೋಕಲ್ ಬಝಾರಗಳು ನನ್ನಂಥವರಿಗೆ ಬೆಚ್ಚನೆಯ ಶಾಪಿಂಗ್ ಫೀಲ್ ಕೊಡುತ್ತಾ ಪ್ರಿಯವಾದ ತಾಣಗಳಾಗಿ ಉಳಿಯುತ್ತವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ