ಮತ್ತಷ್ಟು ಹದಗೆಟ್ಟ ಡಿ.ಕೆ.ಶಿವಕುಮಾರ ಆರೋಗ್ಯ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಅನಾರೋಗ್ಯದಿಂದಾಗಿ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಆದರೆ ಆರೋಗ್ಯ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಅವರನ್ನು ಹಾಜರುಪಡಿಸುವುದು ಅನುಮಾನವಾಗಿದೆ.
ಜಾರಿ ನಿರ್ದೇಶನಾಲಯದ ವಿಚಾರಣೆಯಲ್ಲಿರುವ ಡಿ.ಕೆ.ಶಿವಕುಮಾರ ಅವರು ಜ್ವರ, ಅಇಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಸಿಜಿ ಮಾಡಿರುವ ವೈದ್ಯರು ಹೃದಯ ಸಂಬಂಧಿ ಕಾಯಿಲೆಗೂ ಚಿಕಿತ್ಸೆ ನೀಡುತ್ತಿದ್ದಾರೆ. ಶಿವಕುಮಾರ ಪರ ವೈದ್ಯ ಡಾ.ರಂಗನಾಥ ಕೂಡ ಶಿವಕುಮಾರ ಜೊತೆಗಿದ್ದು, ದಿನವಿಡೀ ನಿಗವಹಿಸಿದ್ದಾರೆ.
ಅನಾರೋಗ್ಯ ಮತ್ತು ಕಳೆದ ಸುಮಾರು 20 ದಿನದಿಂದ ಸತತ ವಿಚಾರಣೆಯಿಂದಾಗಿ ಡಿ.ಕೆ.ಶಿವಕುಮಾರ ನಿತ್ರಾಣರಾಗಿದ್ದಾರೆ. ಹಾಗಾಗಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಕಷ್ಟವಾಗಿದೆ. ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಬೇಕಿದೆ.
ಮಂಗಳವಾರ ಅವರ ಇಡಿ ಕಸ್ಟಡಿ ಅಂತ್ಯವಾಗುವುದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಂತರ ನಾಳೆ ಅವರನ್ನು ಬಿಡುಗಡೆ ಮಾಡುವುದೋ ಅಥವಾ ಕಸ್ಟಡಿ ಮುಂದುವರಿಸುವುದೋ ಎನ್ನುವ ತೀರ್ಮಾನವನ್ನು ನ್ಯಾಯಾಲಯ ಪ್ರಕಟಿಸಲಿದೆ.
ಅನಾರೋಗ್ಯ ಕಾರಣದಿಂದ ಡಿ.ಕೆ.ಶಿವಕುಮಾರ ಅವರನ್ನು ಬಿಡುಗಡೆ ಮಾಡಬೇಕು. ಆರೋಗ್ಯ ಸುಧಾರಿಸಿದ ನಂತರ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಅವರ ಪರ ವಕೀಲರು ಕೋರಿದ್ದಾರೆ. ಇದಕ್ಕೆ ಇಡಿ ಪರ ವಕೀಲರು ಇಂದು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಒಂದೊಮ್ಮೆ ಜಾಮೀನು ನಿರಾಕರಿಸಲ್ಪಟ್ಟರೆ ಮತ್ತೆ ಇಡಿ ಕಸ್ಟಡಿ ಅಥವಾ ನ್ಯಾಯಾಂಗ ಬಂಧನಕ್ಕೆ ಅವರನ್ನು ಕಳಿಸಬಹುದು.
ಎಚ್ ಡಿಕೆ ವಿರುದ್ದ ಆಕ್ರೋಶ
ಈ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಡಿ.ಕೆ.ಶಿವಕುಮಾರ ಪರ ಗಟ್ಟಿಯಾಗಿ ಯಾವುದೇ ಹೇಳಿಕೆ ನೀಡದಿರುವುದು ಮತ್ತು ಪ್ರತಿಭಟನೆಯನ್ನೂ ಮಾಡದಿರುವುದು ಡಿ.ಕೆ.ಶಿವಕುಮಾರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರ ರಚನೆಗೆ, ಸರಕಾರ ಉಳಿಸಿಕೊಳ್ಳಲು ಶಿವಕುಮಾರ ಬೇಕು. ಆದರೆ ಇಂತಹ ಸಂದರ್ಭದಲ್ಲಿ ಅವರ ಪರವಾಗಿ ನಿಲ್ಲುತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲ ನಾಯಕರೇ ತಮ್ಮ ಪಕ್ಷದ ಮುಖಂಡರ ವಿರುದ್ಧ ಹರಿಹಾಯುತ್ತಿದ್ದಾರೆ.
ಮಾಜಿ ಸಚಿವ ಚಲುವರಾಯಸ್ವಾಮಿ ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಸ್ಪೀಕರ್ ಬಸವರಾಜ ಹೊರಟ್ಟಿ ಕೂಡ ಕುಮಾರಸ್ವಾಮಿ ಶಿವಕುಮಾರ ಅವರನ್ನು ಭೇಟಿಯಾಗದಿರುವುದು, ಅವರ ಪರವಾಗಿ ನಿಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಹ ಡಿ.ಕೆ.ಶಿವಕುಮಾರ ಪರವಾಗಿ ಪ್ರತಿಭಟಿಸುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಪ್ರವಾಹ ವಿಷಯಕ್ಕೆ ಒತ್ತು ಕೋಡಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಇವುಗಳನ್ನೂ ಓದಿ –
ಡಿ.ಕೆ.ಶಿವಕುಮಾರ ಸೆ.17ರ ವರೆಗೆ ಇಡಿ ಕಸ್ಟಡಿಗೆ
ಅಮಿತ್ ಶಾಗೆ ಮತ್ತಷ್ಟು ಹತ್ತಿರವಾದರೇ ಲಕ್ಷ್ಮಣ ಸವದಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ