ರಾಜ್ಯಾದ್ಯಂತ ವಿಕೋಪಕ್ಕೆ ಹೋದ ಹಿಜಾಬ್ ವಿವಾದ ; ಹಲವೆಡೆ ಪ್ರತಿಭಟನೆ; ಹಿಜಾಬ್ ಇಲ್ಲದ ಶಿಕ್ಷಣವೇ ಬೇಡ ಎಂದು ಮುಸ್ಲಿಂ ವಿದ್ಯಾರ್ಥಿನಿಯರು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಾದ್ಯಂತ ಹಿಜಾಬ್ ವಿವಾದ ವಿಕೋಪಕ್ಕೆ ಹೋಗಿದೆ. ಹಿಜಾಬ್ ಇಲ್ಲದಿದ್ದರೆ ಶಿಕ್ಷಣವೇ ಬೇಡ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆಗಿಳಿದಿದ್ದಾರೆ. ಕಾಲೇಜಿನಿಂದಲೇ ವಾಪಸ್ಸಾಗುತ್ತಿದ್ದಾರೆ.
ಹೈಕೊರ್ಟ್ ಅಂತಿಮ ಆದೇಶ ಬರುವವರೆಗೆ ತರಗತಿಗಳಿಗೆ ಯಾವುದೇ ಧರ್ಮದ ಚಿಹ್ನೆ ಬಳಸಿ ಬರಬಾರದೆಂದು ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಕಡೆ ಪ್ರಾಚಾರ್ಯರು, ಶಿಕ್ಷಕರು ಗೇಟ್ ಗಳಲ್ಲಿ ನಿಂತು ಹಿಜಾಬ್ ಧರಿಸಿ ಬಂದವರನ್ನು ತಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಕಾಲೇಜೊಂದರ ಪ್ರಾಚಾರ್ಯರೇ ಗೇಟ್ ನಲ್ಲಿ ನಿಂತು ವಿದ್ಯಾರ್ಥಿನಿಯರಿಗೆ ಕೈ ಮುಗಿದು ಹಿಜಾಬ್ ತೆಗೆದು ಒಳಗೆ ಬರುವಂತೆ ಮನವಿ ಮಾಡುತ್ತಿದ್ದರು.
ಆದರೆ ಪಟ್ಟ ಬಿಡದ ಮುಸ್ಲಿಂ ಹೆಣ್ಣು ಮಕ್ಕಳು ಮತ್ತು ಅವರ ಪಾಲಕರು, ಹಿಜಾಬ್ ಇಲ್ಲದಿದ್ದರೆ ನಮಗೆ ಶಿಕ್ಷಣವೇ ಬೇಡ ಎಂದು ಹೇಳುತ್ತಿದ್ದಾರೆ. ಶಿಕ್ಷಣ ಮತ್ತು ಹಿಜಾಬ್ ಎರಡೂ ನಮ್ಮ ಹಕ್ಕು. ಹಿಜಾಬ್ ತೆಗೆದು ಬರಬೇಕೆಂದರೆ ನಾವು ವಾಪಸ್ ಹೋಗುತ್ತೇವೆ ಎನ್ನುತ್ತಿದ್ದಾರೆ. ಅನೇಕ ಕಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬಹುತೇಕ ಕಾಲೇಜುಗಳಲ್ಲಿ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಗೇಟ್ ನಲ್ಲೇ ನಿಂತು ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ವಿವರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಫಲ ನೀಡುತ್ತಿಲ್ಲ.
ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳೂ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂದು ಅಥವಾ ನಾಳೆ ಈ ಕುರಿತ ಹೈಕೋರ್ಟ್ ತೀರ್ಪು ಹೊರಬೀಳು ಸಾಧ್ಯತೆ ಇದೆ. ಆದರೆ ಎಲ್ಲೆಡೆ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ
ಹಿಜಾಬ್ ವಿವಾದ; ವಿಚಾರಣೆ ಮತ್ತೆ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ