Kannada NewsKarnataka News
*ಕಿತ್ತೂರು ಚೆನ್ನಮ್ಮ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ -ಸಚಿವೆ ಶಶಿಕಲಾ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – “ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಬಹಳಷ್ಟು ಜನರು ಹೋರಾಟ ಮಾಡಿ ವೀರ ಮರಣ ಹೊಂದಿದ್ದಾರೆ. ಅಂತವರಲ್ಲಿ ಬೆಳಗಾವಿ ಜಿಲ್ಲೆಯ ಸುಪುತ್ರಿ ಕಿತ್ತೂರ ಚೆನ್ನಮ್ಮ ಕೂಡ ಒಬ್ಬಳು. ಮಹಾರಾಣಿ ಅನ್ನೋ ಪಟ್ಟ ಬದಿಗಿಟ್ಟು ಕೈಯಲ್ಲಿ ಕತ್ತಿ ಹಿಡಿದು ಬ್ರಿಟೀಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ವೀರ ಮಹಿಳೆ ನಮ್ಮ ಜಿಲ್ಲೆಯವಳು. ಇಂತಹ ವೀರರ, ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ” ಎಂದು ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿ ನಗರದ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ ಆವರಣದ ವಿಶಾಲವಾದ ಮೈದಾನದಲ್ಲಿ ಜೊಲ್ಲೆ ಗ್ರುಪ್ ಯಕ್ಸಂಬಾ ಹಾಗೂ ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ಫೆಬ್ರುವರಿ 4 ಮತ್ತು 5 ರಂದು ಆಯೋಜಿಸಿದ ವೀರರಾಣಿ ಚೆನ್ನಮ್ಮ ನಾಟಕದ ಮೊದಲ ದಿನದ ಪ್ರದರ್ಶನವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, “ವೀರರಾಣಿ ಕಿತ್ತೂರು ಚನ್ನಮ್ಮ ಅವರಂತಹ ಮಹನೀಯರ ಆದರ್ಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎರಡು ದಿನಗಳ ಕಾಲ ನಡೆಯುವ ಈ ನಾಟಕವನ್ನು ವೀಕ್ಷಿಸುವಂತೆ” ವಿನಂತಿಸಿಕೊಂಡರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಈಗಾಗಲೇ ನಿಪ್ಪಾಣಿ ನಗರದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ, ಅಂತಾರಾಷ್ಟ್ರೀಯ ಮಟ್ಟದ ಪತಂಗ ಉತ್ಸವ ಸೇರಿದಂತೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಇನ್ನು ಮುಂಬರುವ ದಿನಗಳಲ್ಲಿ ಶಿವ ಘರ್ಜನೆ ನಾಟಕವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಭಾಗದ ಜನರ ಅಭಿವೃದ್ಧಿಗಾಗಿ ಜೊಲ್ಲೆ ಗ್ರುಪ್ ನಿರಂತರವಾಗಿ ಶ್ರಮಿಸುತ್ತದೆ”ಎಂದರು.
ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ ಮಾತನಾಡಿ, ” ಈಗಾಗಲೇ ಧಾರವಾಡ, ಬೀಳಗಿ, ಚಿಕ್ಕೋಡಿ, ಹಾರೂಗೇರಿ, ನಿಪ್ಪಾಣಿಯಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಮೆಗಾ ನಾಟಕವನ್ನು ಪ್ರದರ್ಶನ ಮಾಡಲಾಗಿದ್ದು, ಚಿಕ್ಕೋಡಿ, ನಿಪ್ಪಾಣಿಯಲ್ಲಿ ಜೊಲ್ಲೆ ಗ್ರುಪ್ ಅವರ ಸಹಕಾರದಿಂದ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ ಮಾಡಲಾಗುತ್ತಿದ್ದು, ಆನೆ, ಒಂಟೆ, ಕುದುರೆ ಸೇರಿದಂತೆ 250 ಕಲಾವಿದರನ್ನೊಳಗೊಂಡ ಈ ನಾಟಕದಲ್ಲಿ ಕಿತ್ತೂರು ಚನ್ನಮ್ಮಳ ಇತಿಹಾಸವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದ್ದಾಗಿ ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ” ಕನ್ನಡ ಮತ್ತು ಮರಾಠಿ ಎಂಬ ಬೇಧವಿಲ್ಲದೇ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ನಾಟಕ ವೀಕ್ಷಿಸಲು ಆಗಮಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ನಿಪ್ಪಾಣಿಯ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಪರದೇಶಿ ಮಠದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಎಂ ಪಿ ಪಾಟೀಲ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷತೆ ನೀತಾ ಬಾಗಡೆ, ರಾಜು ಗುಂಡೇಶಾ, ಘೋಡಾವತ್ ಗ್ರೂಫ್ ನ ಬಿಮಲ್ ರುನವಾಲ್, ವಿಭಾವರಿ ಖಾಂಡಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ಮೂರು ಗಂಟೆಗಳ ಕಾಲ ಧಾರವಾಡದ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ ನಿರ್ದೇಶನದಲ್ಲಿ ನಡೆದ ವೀರರಾಣಿ ಚೆನ್ನಮ್ಮ ಮೆಗಾ ನಾಟಕವನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು.
https://pragati.taskdun.com/veerarani-kittoor-chennamma-mega-drama-from-jan-29/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ