ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಹುಣಶ್ಯಾಳ ಪಿಜಿ ಕೀರ್ತಿಯನ್ನು ಹೂವಿನ ಸುಗಂಧದಂತೆ ಎಲ್ಲೆಡೆ ಪಸರಿಸಿದ ಕೀರ್ತಿ ನಿಜಗುಣ ದೇವರಿಗೆ ಸಲ್ಲುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ ೨೧ನೇ ಸತ್ಸಂಗ ಮಹೋತ್ಸವ ಮತ್ತು ಸಿದ್ಧಲಿಂಗ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮೀಜಿಗಳಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಿಜಗುಣ ದೇವರು ಶೈಕ್ಷಣಿಕ ಹಾಗೂ ಧಾರ್ಮಿಕ ವಾತಾವರಣ ನಿರ್ಮಿಸಿದ್ದಾರೆ. ಭಕ್ತಾಧಿಗಳಿಗೆ ಧರ್ಮದ ಕುರಿತು ಬೋಧನೆ ಮಾಡುತ್ತ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇಯಾದ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ ಕೈವಲ್ಯಾಶ್ರಮದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಮಠದ ಪ್ರಗತಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆಂದು ಶ್ಲಾಘಿಸಿದರು.
ಹುಣಶ್ಯಾಳ ಪಿಜಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಜನೋಪಯೋಗಿ ಕಾಮಗಾರಿಗಳನ್ನು ನೆರವೇರಿಸಿದ್ದು, ಗ್ರಾಮಸ್ಥರ ಒಗ್ಗಟ್ಟಿನ ಸ್ಪೂರ್ತಿಯಿಂದಾಗಿ ಗ್ರಾಮ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಅವರನ್ನು ನಿಜಗುಣ ದೇವರು ಹಾಗೂ ಕವಲಗುಡ್ಡ ಅಮರೇಶ್ವರ ದೇವರು ಜಂಟಿಯಾಗಿ ಸತ್ಕರಿಸಿದರು.
ಹುಣಶ್ಯಾಳ ಪಿಜಿ ಮಠದ ನಿಜಗುಣ ದೇವರು ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರಂತಹ ಶಾಸಕರನ್ನು ಪಡೆದಿರುವುದು ನಮ್ಮೆಲ್ಲರ ಸುದೈವ. ಇಂತಹ ಶಾಸಕರು ಬೇರೆ ಎಲ್ಲಿಯೂ ಸಿಗುವುದಿಲ್ಲ. ಇವರೊಬ್ಬ ಅಪರೂಪದ ಮಾಣಿಕ್ಯವೆಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ರಾಮನಾಯ್ಕ ನಾಯ್ಕ, ಶಬ್ಬೀರ ತಾಂಬಿಟಗಾರ, ಬಸಪ್ಪ ಕಾಡಾಪೂರ, ಪ್ರಕಾಶ ತಳವಾರ, ಸಲೀಂ ಜಮಾದಾರ, ಶೆಕ್ಕಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ : ಘಟಪ್ರಭಾ ೧ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಹುಣಶ್ಯಾಳ ಪಿಜಿ ನಿಜಗುಣ ದೇವರು ಸತ್ಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ