ಜಾರಕಿಹೊಳಿ ಬ್ರದರ್ಸ್ ಸಮರಕ್ಕೆ ಮತ್ತೊಂದು ತಿರುವು
ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಗೋಕಾಕದಲ್ಲಿ ಜಾರಕಿಹೊಳಿ ಸಹೋದರರ ಜಗಳ ಮತ್ತ1ೊಂದು ತಿರುವು ಪಡೆದಿದೆ. ರಮೇಶ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಕದನ ಈಗ ವಿಕೋಪಕ್ಕೆ ಹೋಗುವ ಲಕ್ಷಣ ಕಾಣುತ್ತಿದೆ. ಇದರಲ್ಲಿ ಅಧಿಕಾರಿಗಳು ಹೈರಾಣಾಗುವಂತಾಗಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಗೋಕಾಕ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳ ಸಭೆ ಕರೆದು ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ತಮ್ಮ ಅಳಿಯ ಅಂಬಿರಾವ್ ಪಾಟೀಲ್ ಒಪ್ಪಿಗೆ ಪಡೆದು ನಿರ್ಣಯ ತಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಒಂದು ವೇಳೆ ಅಧಿಕಾರಿಗಳು ಕಾನೂನು ಬಾಹಿರವಾಗಿ ನಡೆದುಕೊಂಡರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, ಇತ್ತೀಚಿಗೆ ಅಧಿಕಾರಿಗಳ ಸಭೆ ಕರೆದು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ತಮ್ಮ ಅಳಿಯನ ಬಳಿ ಒಪ್ಪಿಗೆ ಪಡೆಯುವಂತೆ ಸೂಚಿಸಿದ್ದಾರೆ. ಕಾನೂನು ಬದ್ದವಾಗಿ ಮತ್ತು ಸಾರ್ವಜನಿಕವಾಗಿ ನಡೆದುಕೊಳ್ಳುವುದು ಸರಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಒಂದು ವೇಳೆ ಅಧಿಕಾರಿಗಳು ಕಾನೂನು ಬಾಹಿರ ನಡೆದುಕೊಂಡರೆ ನಾವು ಮತ್ತು, ಸಾರ್ವಜನಿಕರು ಉಗ್ರವಾಗಿ ಪ್ರತಿಭಟನೆ ಮಾಡುವುದಾಗಿ ಶಾಸಕ ಸತೀಶ ಜಾರಕಿಹೊಳಿ ಎಚ್ಚರಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಅಂಬಿರಾವ್ ಪಾಟೀಲ್ ವಿರುದ್ದ ಗುಡುಗಿದ್ದ ಶಾಸಕ ಸತೀಶ, ಗೋಕಾಕ್ ನಲ್ಲಿ ಬರುವ ಉಪ ಚುನಾವಣೆಯಲ್ಲಿ ಅಂಬಿರಾವ್ ಪಾಟೀಲ್ ಸಾಮ್ರಾಜ್ಯ ಪ್ರವಾಹದಂತೆ ಕೊಚ್ಚಿ ಹೋಗಲಿದೆ. ಅಂಬಿರಾವ್ ಅಂದಾ ದರ್ಬಾರ್ ಗೆ ಬ್ರೇಕ್ ಹಾಕುತ್ತೇವೆ ಎಂದು ವಾಗ್ದಾಳಿ ನಡೆಸಿದ್ದರು.
ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಬಹಿರಂಗ ಸಭೆಯಲ್ಲೇ ಸತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ