ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಇಡೀ ದೇಶವನ್ನೇ ತುದಿಗಾಲ ಮೇಲೆ ನಿಲ್ಲಿಸಿದ್ದ ಅಯೋಧ್ಯಾ ರಾಮಜನ್ಮಭೂಮಿ -ಬಾಬರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. ರಂಜನ್ ಗೋಗೊಯ್ ನೇತೃತ್ವದ ಪಂಚ ಸದಸ್ಯರ ನ್ಯಾಯಾಧೀಶರ ಸಮಿತಿ ಸರ್ವಸಮ್ಮತ ತೀರ್ಪು ಪ್ರಕಟಿಸಿದೆ.
ಅಯೋಧ್ಯಾ ವಿವಾದಿತ ಭೂಮಿಯನ್ನು ರಾಮಲಲ್ಲಾಗೆ ನೀಡಿರುವ ಸರ್ವೋಚ್ಛ ನ್ಯಾಯಾಲಯ, ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಸರಕಾರಕ್ಕೆ ನೀಡಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ, ಸುನ್ನಿ ಬೋರ್ಡ್ ಗೆ ಪ್ರತ್ಯೇಕ 5 ಎಕರೆ ಜಾಗ ನೀಡಿ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ.
ಹಿಂದೂಗಳ ಭಾವನೆಗೆ ಅನುಗುಣವಾಗಿ ವಿವಾದಿತ ಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಲಿ ಎಂದು ಕೋರ್ಟ್ ತಿಳಿಸಿದೆ.
ತೀರ್ಪಿಗೆ ಮೊದಲು ಪ್ರಸ್ತಾಪಿಸಿದ ವಿಷಯಗಳು
ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ಕಂದಾಯ ದಾಖಲೆ ಪ್ರಕಾರ ವಿವಾದಿತ ಜಮೀನು ಸರಕಾರಿ ಜಮೀನು. ಮಸೀದಿ ಅಡಿಪಾಯದ ಕೆಳಗೆ ವಿಶಾಲವಾದ ವಿನ್ಯಾಸ ಇತ್ತು. ಆದರೆ ಅದು ಇಸ್ಲಾಮಿಕ್ ರಚನೆ ಆಗಿರಲಿಲ್ಲ. ಉತ್ಖನನದ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಮಿಕ್ ರಚನೆ ಅಲ್ಲ. ಹಾಗಂತ ಹಿಂದೂ ರಚನೆ ಎಂದೂ ಹೇಳಲು ಸಾಧ್ಯವಿಲ್ಲ ಎಂದೂ ಕೋರ್ಟ್ ಹೇಳಿದೆ.
ಮಸೀದಿಯನ್ನು ಧರ್ಮದ ಪ್ರಕಾರ ಮಸೀದಿ ಕಟ್ಟಿರಲಿಲ್ಲ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನು ಉಲ್ಲಂಘನೆ. ಸಂವಿಧಾನದ ಮುಂದೆ ಎಲ್ಲ ಧರ್ಮಗಳೂ ಒಂದೇ. ಹಾಗಂತ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡುವುದು ಸಹ ತಪ್ಪು ಎಂದು ನ್ಯಾಯಮೂರ್ತಿಗಳು ಹೇಳಿದರು.
ಹಿಂದೂಗಳಲ್ಲಿ ಈ ಭೂಮಿಯನ್ನು ರಾಮಜನ್ಮ ಭೂಮಿ ಎಂದು ನಂಬಿದ್ದಾರೆ. ಚಬೂತರ್, ಸಿತಾ ರಸೋಯಿ, ಭಂಡಾರಗಳೆಲ್ಲ ರಾಮನ ಹುಟ್ಟಿಗೆ ಪುಷ್ಠಿ ನೀಡುತ್ತದೆ. ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಎನ್ನುವುದರಲ್ಲಿ ವಿವಾದವಿಲ್ಲ. ಮಸೀದಿಯ ಮುಖ್ಯದ್ವಾರದ ಬಳಿಯೇ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಇದೆ. ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಸಾಕ್ಷ್ಯದ ಮೇಲೆ ಹಕ್ಕನ್ನು ನಿರ್ಧರಿಸಲಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
1856ಕ್ಕೆ ಮುನ್ನ ಮುಸ್ಲಿಮರು ನಮಾಜು ಮಾಡುತ್ತಿದ್ದರೆನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ 1957ರವರೆಗೂ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಯ ಇದೆ. ಇತಿಹಾಸಕಾರರ ವಿವರಣೆ, ಪುರತತ್ವ ಇಲಾಖೆ ಸಾಕ್ಷ್ಯ ಹಿಂದೂಗಳ ಪರವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ, ಸುನ್ನಿ ಬೋರ್ಡ್ ಗೆ ಪ್ರತ್ಯೇಕವಾಗಿ ಭೂಮಿಯನ್ನು ಕೊಡುವ ಪ್ರಸ್ತಾವನೆಯನ್ನೂ ನ್ಯಾಯಾಲಯ ಆರಂಭದಲ್ಲೇ ಇಟ್ಟಿತ್ತು.
ಇದಕ್ಕೂ ಮುನ್ನ ಶಿಯಾ ಸಲ್ಲಿಸಿರುವ ಅರ್ಜಿಯನ್ನು ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತು. ನಿರ್ಮೋಹಿ ಅಖಾಡಕ್ಕೆ ಪೂಜೆಯ ಅಧಿಕಾರ ಇಲ್ಲ ಎಂದೂ ಕೋರ್ಟ್ ಹೇಳಿದೆ. ಪುರಾತತ್ವ ಇಲಾಖೆಯ ಸಾಕ್ಷ್ಯಗಳನ್ನೆಲ್ಲ ನ್ಯಾಯಾಲಯ ತೀರ್ಪು ನೀಡುವ ಮುನ್ನ ಪರಿಶೀಲಿಸಿದ್ದಾಗಿ ಹೇಳಲಾಗಿದೆ.
ಅಯೋಧ್ಯಾ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಚೋದನಾತ್ಮಕ ಸಂದೇಶ, ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಲಾಗಿದೆ. ರಾಜಕೀಯ ಪಕ್ಷಗಳು ಕೂಡ ಹೇಳಿಕೆಗಳನ್ನು ನೀಡದಂತೆ ತನ್ನ ನಾಯಕರಿಗೆ ಸೂಚನೆ ನೀಡಿದೆ.
ಅಯೋಧ್ಯಾ ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ 1 ಗಂಟೆಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಅಯೋಧ್ಯೆ ಪ್ರಕರಣದ ಸಂಪೂರ್ಣ ಇತಿಹಾಸ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ