ಪ್ರಗತಿವಾಹಿನಿ ಸುದ್ದಿ, ರಾಯಪುರ: ಕಳೆದುಕೊಂಡ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ಏನನ್ನೂ ಮಾಡಿಸಬಹುದು ಎಂಬುದಕ್ಕೆ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ.
ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಖೇರ್ಕಟ್ಟಾ ಅಣೆಕಟ್ಟೆಯಲ್ಲಿ ನಡೆದಾಡುತ್ತಿದ್ದಾಗ ಕೈಯ್ಯಲ್ಲಿದ್ದ ಮೊಬೈಲ್ ಫೋನ್ ತಪ್ಪಿ ಜಲಾಶಯದಲ್ಲಿ ಬಿದ್ದಿದ್ದಕ್ಕೆ ಜಲಾಶಯವನ್ನೇ ಖಾಲಿ ಮಾಡಿಸಿರುವ ಅಧಿಕಾರಿ ಈಗ ಅಮಾನತುಗೊಂಡಿದ್ದಷ್ಟೇ ಅಲ್ಲ, ಆ ಭಾಗರ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ಎಂಬುವವರು ಖೇರ್ಕಟ್ಟಾ ಅಣೆಕಟ್ಟೆ ಮೇಲೆ ಭಾನುವಾರ ಸಂಜೆ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಅವರ ಕೈಯ್ಯಲ್ಲಿದ್ದ 1 ಲಕ್ಷ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಜಾರಿ ನೀರಿಗೆ ಬಿತ್ತು. ಮೊದಲಿಗೆ ನೀರಿನಲ್ಲಿ ಎಷ್ಟೇ ಜಾಲಾಡಿದರೂ ಮೊಬೈಲ್ ಫೋನ್ ಸಿಗಲಿಲ್ಲ. ಹೀಗಾಗಿ ರಾಜೇಶ ವಿಶ್ವಾಸ್ ಅವರು ಜಲಾಶಯವನ್ನೇ ಖಾಲಿ ಮಾಡಿಸಲು ಕೆಳ ಹಂತದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅವರ ಆದೇಶ ಪಾಲನೆಗೆ ಮುಂದಾದ ಅಧಿಕಾರಿಗಳು ಪಂಪ್ ಗಳನ್ನು ತಂದು 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಿ ಸುಮಾರು 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ. ಸೋಮವಾರದಿಂದ-ಗುರುವಾರದ ವರೆಗೆ 21 ಲಕ್ಷ ನೀರು ಪೋಲಾಗಿದ್ದು ಇದನ್ನು 1500 ಸಾವಿರ ಎಕರೆ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.
ಇದರಿಂದ ಕೆಂಡಾಮಂಡಲವಾಗಿರುವ ರೈತರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು ಸದ್ಯ ರಾಜೇಶ ವಿಶ್ವಾಸ್ ಅವರನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆಯೂ ರಾಜೇಶ ವಿಶ್ವಾಸ್ ಅವರು ತಮ್ಮ ನಡೆ ಸಮರ್ಥಿಸಿಕೊಂಡಿದ್ದು, ಜಲಾಶಯದ ನೀರು ನಿರುಪಯುಕ್ತ ಹಾಗೂ ಕಲುಶಿತವಾಗಿತ್ತು. ಅದರಿಂದ ನಷ್ಟವೇನೂ ಇಲ್ಲ, ಎಂದಿದ್ದಾರಲ್ಲದೆ ನನ್ನ ಮೊಬೈಲ್ ನಲ್ಲಿ ಇದ್ದ ಸಂಪರ್ಕ ಸಂಖ್ಯೆಗಳು ಮಹತ್ವದ್ದಾಗಿದ್ದು ಅದಕ್ಕಾಗಿ ನೀರು ಖಾಲಿ ಮಾಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ