Kannada NewsKarnataka News

ಪರಿಹಾರ ಕ್ರಮ ಕೈಕೊಳ್ಳುವುದು ರಾಜ್ಯ ಸರಕಾರದ ಹೊಣೆಗಾರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ಕೈಕೊಳ್ಳುವುದು ಸಂಬಂಧಿಸಿದ ರಾಜ್ಯ ಸರಕಾರದ ಮುಖ್ಯ ಹೊಣೆಗಾರಿಕೆಯಾಗಿದೆಯೆಂದು ಪ್ರಧಾನಿ ಕಾರ್ಯಾಲಯವು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಗೆ ಬರೆದ ಪತ್ರದಲ್ಲಿ ಸ್ಪಷ್ಟ ಪಡಿಸಿದೆ.

ಎಲ್ಲಿ ಅವಶ್ಯಕವಿದೆಯೋ ಅಲ್ಲಿ ಸರಕು ಸಾಮಗ್ರಿಗಳನ್ನು ಹಾಗೂ ಹಣಕಾಸು ಬೆಂಬಲವನ್ನು ರಾಜ್ಯ ಸರಕಾರಗಳಿಗೆ ಪೂರಕವಾಗಿ ಕೇಂದ್ರವು ಒದಗಿಸುತ್ತದೆ. ರಾಜ್ಯ ಸರಕಾರದ ಮನವಿಯ ಮೇರೆಗೆ ಕೇಂದ್ರ ಸರಕಾರವು ಭೂಸೇನೆ, ನೌಕಾಪಡೆ, ಭಾರತೀಯ ಕರಾವಳಿ ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್.) ಹಾಗೂ ಭಾರತೀಯ ವಾಯುದಳದ ಹೆಲಿಕಾಪ್ಟರ್ ಸೇವೆಯನ್ನು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಕಾರ್ಯಾಚರಣೆಗೆ ಒದಗಿಸಿದೆಯೆಂದು ಪ್ರಧಾನಿ ಕಾರ್ಯಾಲಯದ ಜಂಟೀ ಕಾರ್ಯದರ್ಶಿ ಸಂಜೀವ ಕುಮಾರ ಜಿಂದಾಲ ಅವರು ತಿಳಿಸಿದ್ದಾರೆ.

ನೆರೆ ಪೀಡಿತ ಪ್ರದೇಶಗಳ ಸಂತ್ರಸ್ಥರ ನೆರೆವಿಗೆ ಕೇಂದ್ರ ಸರಕಾರ ತುರ್ತಾಗಿ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಬೇಕೆಂದು ಕೋರಿ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರ ಪದಾಧಿಕಾರಿಗಳು ಕಳೆದ ಸೆಪ್ಟಂಬರ್ ೧೪ ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರಕ್ಕೆ ಉತ್ತರವಾಗಿ ದಿ. ೨೬-೦೯-೨೦೧೯ ರಂದು ಈ ಪತ್ರ ಬರೆಯಲಾಗಿದೆ.

೨೦೧೯-೨೦ ರ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ಅಡಿಯಲ್ಲಿ (ಎಸ್.ಡಿ.ಆರ್.ಎಫ್.) ತುರ್ತು ಪರಿಹಾರವಾಗಿ ೩೩೬ ಕೋ.ರೂ. ಗಳನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ರಾಜ್ಯ ಸರಕಾರವು ಸಂತ್ರಸ್ಥರಿಗೆ ಸಾಮಗ್ರಿಗಳ ರೂಪದಲ್ಲಿ ಪರಿಹಾರ ಒದಗಿಸಲು ಈ ಹಣವನ್ನು ಬಳಸಬಹುದಾಗಿದೆ. ಆದಾಗ್ಯೂ ರಾಜ್ಯ ಸರಕಾರವು ತನ್ನ ಅಂತಿಮ ಮನವಿಯನ್ನು ಸಲ್ಲಿಸಿದ ನಂತರ ಎನ್.ಡಿ.ಆರ್.ಎಫ್. ಅಡಿ ಹೆಚ್ಚುವರಿ ಹಣಕಾಸು ನೆರವನ್ನು ಒದಗಿಲಾಗುವುದೆಂದು ಕೇಂದ್ರ ಸರಕಾರದ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button