Kannada NewsKarnataka NewsLatest

ಜಾರಕಿಹೊಳಿ ರಹಸ್ಯ: ಏನದು ದೇವರಲ್ಲಿನ ಪ್ರಾರ್ಥನೆ, ಆ ಒಂದು ವಸ್ತು?

ಜಾರಕಿಹೊಳಿ ರಹಸ್ಯ:

ಏನದು ದೇವರಲ್ಲಿನ ಪ್ರಾರ್ಥನೆ, ಆ ಒಂದು ವಸ್ತು?

ಎಂ.ಕೆ.ಹೆಗಡೆ, ಬೆಳಗಾವಿ –

ರಾಜ್ಯದಲ್ಲಿ ಕಳೆದ ಸುಮಾರು 25 ದಿನದಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕೇಂದ್ರ ಬಿಂಧು ಬೆಳಗಾವಿ ಜಿಲ್ಲೆಯ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ.

ಮೈತ್ರಿ ಸರಕಾರ ಪತನಕ್ಕೂ, ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಅವರ ಹೋರಾಟ ಸಾಕಷ್ಟಿದೆ. ಸುಮಾರು 10-11 ತಿಂಗಳ ಕಾಲ ಅವರು ಅವಿಶ್ರಾಂತವಾಗಿ ಭಿನ್ನಮತೀಯ ಕೆಲಸ ಮಾಡಿದ್ದಾರೆ. ಅವರ ಈ ಭಿನ್ನಮತಕ್ಕೆ ಕಾರಣವನ್ನು ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಮಂತ್ರಿಸ್ಥಾನದಲ್ಲಿದ್ದಾಗಲೇ ಅವರು ಸರಕಾರದ ವಿರುದ್ಧ ಸಿಡಿದೆದ್ದಿದ್ದರಿಂದ ಅಧಿಕಾರಕ್ಕಿಗಿಯಂತೂ ಅಲ್ಲ ಎನ್ನುವುದು ಸ್ಪಷ್ಟ.

ಈ ನಡುವೆ ಏನೆಲ್ಲ ತಿರುವು ಪಡೆದುಕೊಂಡರೂ ಮೈತ್ರಿ ಸರಕಾರದಲ್ಲಿ ಹುಟ್ಟಿಕೊಂಡಿರುವ ಭಿನ್ನಮತದ ಮೂಲ ಮಾತ್ರ ರಮೇಶ ಜಾರಕಿಹೊಳಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರಂಭದಲ್ಲಿ ಸತೀಶ್ ಜಾರಕಿಹೊಳಿ ಕೂಡ ಕೆಲವು ವಿಷಯದಲ್ಲಿ ರಮೇಶ್ ಬೆನ್ನಿಗೆ ನಿಂತಿದ್ದರು. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ವಿಷಯದಲ್ಲಿ ಸಹೋದರರಿಬ್ಬರೂ ಒಟ್ಟಾಗಿಯೇ ಹೋರಾಟ ಮಾಡಿದ್ದಾರೆ.

ಆದರೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು ಸತೀಶ್ ಜಾರಕಿಹೊಳಿಯನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆಗ ರಮೇಶ್ ಒಂಟಿಯಾದರು. ಆಗಲೇ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.

ಅಲ್ಲಿಂದ ಮೈತ್ರಿ ಸರಕಾರದ ವಿರುದ್ಧ ಭಿನ್ನಮತೀಯ ಚಟುವಟಿಕೆಯನ್ನು ಇನ್ನಷ್ಟು ತೀವ್ರಗೊಳಿಸಿದರು. ಮಧ್ಯದಲ್ಲಿ ಹಲವರು ಸೇರಿ ಕೈಕೊಟ್ಟರೂ ರಮೇಶ್ ಮಾತ್ರ ತಮ್ಮ ಅವಿಶ್ರಾಂತ ಹೋರಾಟ ಬಿಟ್ಟಿರಲಿಲ್ಲ. ಆದರೆ ಅದು ಈ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ದೇವರಲ್ಲಿ ಬೇಡಿಕೊಂಡಿದ್ದೇನೆ

ರಮೇಶ ಜಾರಕಿಹೊಳಿ ಸಚಿವರಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಗಳಿಗೆ ಹೋಗುತ್ತಿರಲಿಲ್ಲ. ಅನೇಕ ಕ್ಯಾಬಿನೆಟ್ ಮೀಟಿಂಗ್ ಗಳಿಗೆ ಗೈರಾಗಿದ್ದರು. ಸಮ್ಮಿಶ್ರ ಸರಕಾರದ ವಿರುದ್ದ ಒಳಗೊಳಗೇ ಕುದಿಯುತ್ತಿದ್ದರು. ಆ ಸಂದರ್ಭದಲ್ಲಿ ಕಾರಣ ಕೇಳಿದಾಗ ಒಂದು ಮಾತು ಹೇಳಿದ್ದರು.

“ನಾನು ದೇವರಲ್ಲಿ ಏನನ್ನೋ ಬೇಡಿಕೊಂಡಿದ್ದೇನೆ. ಅದು ಈಡೇರುವವರೆಗೂ ಸಚಿವಸಂಪುಟ ಸಭೆಗೆ ಹೋಗುವುದಿಲ್ಲ. ದೇವರಲ್ಲಿ ನನಗೆ ನಂಬಿಕೆ ಇದೆ. ನನ್ನ ಬೇಡಿಕೆಯನ್ನು ಈಡೇರಿಸುತ್ತಾನೆ ಎನ್ನುವ ವಿಶ್ವಾಸವಿದೆ. ಈಡೇರಿದ ಮೇಲೆ ಬಹಿರಂಗಪಡಿಸುತ್ತೇನೆ” ಎಂದು ಅವರು ಹೇಳಿದ್ದರು.

ಆ ಮಾತು ಇಂದಿಗೂ ಗುಟ್ಟಾಗಿಯೇ ಉಳಿದಿದೆ. ಯಾವಅರ್ಥದಲ್ಲಿ ಆ ಮಾತನ್ನು ಹೇಳಿದ್ದರು?  ಯಾವ ಉದ್ದೇಶದಿಂದ ಹೇಳಿದ್ದರು? ದೇವರಲ್ಲಿ ಬೇಡಿಕೊಂಡ ಆ ಪ್ರಾರ್ಥನೆ ಏನು? ಅದು ಈಡೇರಿದೆಯೇ? ಅಥವಾ ಇನ್ನೂ ಬಾಕಿ ಇದೆಯೇ? ಎನ್ನುವ  ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಮೈತ್ರಿ ಸರಕಾರದ ಪತನ ಅವರ ಬೇಡಿಕೆಯಾಗಿತ್ತೇ? ತಾವು ಉಪಮುಖ್ಯಮಂತ್ರಿ ಪದವಿಗೇರಬೇಕೆನ್ನುವುದು ಅವರ ಬೇಡಿಕೆಯಾಗಿತ್ತೇ? ತಮ್ಮ ವಿರೋಧಿಗಳ ಪದವಿ ಕಿತ್ತುಕೊಳ್ಳುವುದು ಅವರ ಬೇಡಿಕೆಯಾಗಿತ್ತೇ? ಇವೆಲ್ಲವನ್ನೂ ಹೊರತುಪಡಿಸಿ ಇನ್ನೇನಾದರೂ ಬೇಡಿಕೊಂಡಿದ್ದಾರೆಯೇ? ಯಾವುದೂ ಇನ್ನೂ ಬಹಿರಂಗವಾಗಿಲ್ಲ.

ಸಮ್ಮಿಶ್ರ ಸರಕಾರ ಪತನಗೊಳಿಸಲು ಅವರು ಯಶಸ್ವಿಯಾದರೂ ಇನ್ನೇನು ಮಂತ್ರಿಯಾಗಲಿದ್ದಾರೆ ಎನ್ನುವ ಹೊತ್ತಿಗೆ ಅನರ್ಹಗೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಈಗ ಅನರ್ಹತೆಯ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರೂ ತೂರ್ಪು ಬರುವವರೆಗೂ ಕಾಯಲೇಬೇಕು. ಹಾಗಾಗಿ ಪಟ್ಟ ಶ್ರಮಕ್ಕೆ ತಕ್ಷಣ ಪ್ರತಿಫಲ ಸಿಗುವಂತೆ ಕಾಣುತ್ತಿಲ್ಲ.

 ಒಂದು ವಸ್ತು ಕಾರಣ

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸತೀಶ್ ಜಾರಕಿಹೊಳಿ ಮತ್ತೊಂದು ಕುತೂಹಲಕರ ಹೇಳಿಕೆ ನೀಡಿದ್ದಾರೆ. ಮೈತ್ರಿ ಸರಕಾರ ಪತನವಾಗುತ್ತಿದ್ದಂತೆ ಅವರು ಹೇಳಿದ ಆ ಮಾತಿನ ರಹಸ್ಯವೇನು ಎನ್ನುವ ಕುತೂಹಲ ರಾಜ್ಯಾದ್ಯಂತ ಮನೆಮಾಡಿದೆ.

“ಸಮ್ಮಿಶ್ರ ಸರಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣವಲ್ಲ. ಅದಕ್ಕೆ ಒಂದು ವಸ್ತು ಕಾರಣ. ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ. ಅದನ್ನು ಮುಚ್ಚಿಡುವುದಿಲ್ಲ. ಅದು ಇತಿಹಾಸದಲ್ಲಿ ದಾಖಲಾಗಬೇಕು” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸತೀಶ್ ಅವರ ಈ ಮಾತು ರಾಜ್ಯರಾಜಕಾರಣದಲ್ಲೇ ಸಂಚಲನ ಮೂಡಿಸಿದೆ. ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಈವರೆಗಿನ ಎಲ್ಲ ನಂಬಿಕೆಗಳನ್ನೂ ತಲೆಕೆಳಗೆ ಮಾಡುವಂತೆ ಮಾಡಿದೆ. ಯಾವುದು ಆ ವಸ್ತು ಎನ್ನುವುದನ್ನು ಅವರು ಬಹಿರಂಗಪಡಿಸುವುದನ್ನೇ ಎಲ್ಲರೂ ಕಾಯುವಂತೆ ಮಾಡಿದೆ.

ಹಾಗಾದರೆ, ರಮೇಶ ಜಾರಕಿಹೊಳಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನು? ಸತೀಶ್ ಜಾರಕಿಹೊಳಿ ಹೇಳಿದ ಸರಕಾರವನ್ನೇ ಉರುಳಿಸಲು ಕಾರಣವಾದ ವಸ್ತು ಯಾವುದು? ಉತ್ತರಕ್ಕೆ ಕಾಯಲೇಬೇಕಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button