Kannada NewsKarnataka NewsLatest

ಮೂಡಲಗಿಗೆ ಬಂತು ಸಬ್ ರಜಿಸ್ಟ್ರಾರ್ ಕಛೇರಿ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ –  : ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದಾಗಿ ಮೂಡಲಗಿ ತಾಲೂಕಿಗೆ ಹೊಸ ಉಪ ನೋಂದಣಿ ಕಛೇರಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.

ಶೀಘ್ರದಲ್ಲಿಯೇ  ಉಪ ನೋಂದಣಿ ಕಛೇರಿ ಆರಂಭಗೊಳ್ಳಲಿದೆ. ಸಬ್ ರಜಿಸ್ಟ್ರಾರ್ ಕಚೇರಿಯಿಂದಾಗಿ ತಾಲೂಕಿನ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಹೊಸದಾಗಿ ಈ ಉಪ ನೋಂದಣಿ ಕಛೇರಿ  ಆರಂಭವಾಗುವುದರಿಂದ ಮೂಡಲಗಿ, ಅರಭಾವಿ ಸೇರಿದಂತೆ ಸುತ್ತಮುತ್ತಲಿನ ಹೋಬಳಿ ಮತ್ತು ಗ್ರಾಮಗಳಲ್ಲಿರುವ ಸಾರ್ವಜನಿಕರಿಗೆ  ಅನುಕೂಲವಾಗಲಿದೆ. ಈ ಮೊದಲು ಗೋಕಾಕ ತಾಲೂಕು ವ್ಯಾಪ್ತಿಗೆ ಇದು ಒಳಪಟ್ಟಿದ್ದರಿಂದ ಸಾರ್ವಜನಿಕರು ಆಸ್ತಿ ನೋಂದಣಿಗಾಗಿ ಗೋಕಾಕಕ್ಕೆ ಅಲೆದಾಡಬೇಕಿತ್ತು. ಮೂಡಲಗಿಯಲ್ಲಿಯೇ ಉಪ ನೋಂದಣಿ ಕಛೇರಿ ಆರಂಭಗೊಳ್ಳುತ್ತಿರುವುದರಿoದ ಸಾರ್ವಜನಿಕರು ಗೋಕಾಕ ನಗರಕ್ಕೆ ಅಲೆದಾಡುವುದು ತಪ್ಪಲಿದೆ.

ಮೂಡಲಗಿ ತಾಲೂಕಾಗಿ ಘೋಷಣೆಯಾದ ಬಳಿಕ ತಾಲೂಕಿಗೆ ಒಂದೊಂದೇ ಕಛೇರಿಗಳು ಬರುತ್ತಿವೆ.    ಈಗ ಉಪ ನೋಂದಣಿ ಕಛೇರಿ ಪೂರ್ಣ ಪ್ರಮಾಣದಲ್ಲಿ ಮೂಡಲಗಿ ತಾಲೂಕಿನ ಜನತೆಗೆ ಲಭ್ಯವಾಗಿದೆ.  ಉಪ ನೋಂದಣಾಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ಗ್ರುಪ್ ಡಿ ತಲಾ ಒಂದೊಂದು ಹುದ್ದೆಯನ್ನು ಕೂಡಾ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬಹು ದಿನಗಳ ಬೇಡಿಕೆ : ಮೂಡಲಗಿ ತಾಲೂಕು ಕೇಂದ್ರವಾಗುವ ಮೊದಲು ಗೋಕಾಕ ತಾಲೂಕಿಗೆ ಒಳಪಟ್ಟಿತ್ತು. ನಂತರ ಮೂಡಲಗಿ ತಾಲೂಕು ಮಾನ್ಯತೆ ಪಡೆದ ನಂತರ ಇಲ್ಲಿಯೇ ಉಪ ನೋಂದಣಿ ಕಛೇರಿಯನ್ನು ಆರಂಭಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬಳಿ ಜನರು ಮನವಿ ಮಾಡಿದ್ದರು.

ಗೋಕಾಕ ಉಪ ನೋಂದಣಿ ಕಛೇರಿಯ ಆದಾಯದ ದೃಷ್ಟಿಯಿಂದ ಮೂಡಲಗಿ ತಾಲೂಕಿನಲ್ಲಿಯೇ ಆದಾಯವು ಹೆಚ್ಚಿತ್ತು. ಈ ಎಲ್ಲ ವಿಚಾರಗಳನ್ನು ಮನಗಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಆಸಕ್ತಿವಹಿಸಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿದ ಪರಿಣಾಮವಾಗಿ ಈಗ ಮೂಡಲಗಿಯಲ್ಲಿಯೇ ತಾಲೂಕು ಉಪ ನೋಂದಣಿ ಕಛೇರಿಯನ್ನು ಆರಂಭಿಸಿದೆ.

ಈಗಾಗಲೇ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜನೇವರಿ 24, 2022 ರಂದು ಮೂಡಲಗಿಯಲ್ಲಿ ಉಪ ನೋಂದಣಿ ಕಛೇರಿಯನ್ನು ಆರಂಭಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ.

 ಮೂಡಲಗಿ ತಾಲೂಕು ಕೇಂದ್ರವಾದ ನಂತರ ಉಪ ನೋಂದಣಿ ಕಛೇರಿ ಆರಂಭಿಸುವಂತೆ ಜನರು  ಮನವಿ ಮಾಡಿಕೊಂಡಿದ್ದರು. ಅಲ್ಲದೇ ಉಪ ನೋಂದಣಿ ಕಛೇರಿ ಆಗಲು ಇರುವ ಅರ್ಹತೆ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಉಪ ನೋಂದಣಿ ಕಛೇರಿಯನ್ನು ಮೂಡಲಗಿಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಬಹು ದಿನಗಳ ಬೇಡಿಕೆಯಾಗಿದ್ದ ಉಪ ನೋಂದಣಿ ಕಛೇರಿ ಈಗ ಮೂಡಲಗಿಗೆ ದೊರೆತಿರುವುದಿರಿಂದ ಜನತೆಗೆ ತುಂಬ ಅನುಕೂಲವಾಗಲಿದೆ. ಜನರ ಸಮಯ, ಹಣ ಕೂಡ ಉಳಿತಾಯವಾಗಲಿದ್ದು, ಸುತ್ತಾಟ ಕೂಡ ಕಡಿಮೆಯಾಗಲಿದೆ. ಮೂಡಲಗಿಗೆ ಉಪ ನೋಂದಣಿ ಕಛೇರಿಗೆ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button