ಈ ಮಠದಲ್ಲಿರುವ ತಂಬೂರಿ 52 ವರ್ಷಗಳಿಂದ ನೆಲ ಮುಟ್ಟಿಲ್ಲ; ಹಚ್ಚಿದ ದೀಪ ನಂದಿಲ್ಲ 

ಪ್ರಗತಿವಾಹಿನಿ ಸುದ್ದಿ, ಬಾದಾಮಿ;  ಈ ಮಠದಲ್ಲಿರುವ ತಂಬೂರಿ ಸುಮಾರು 52 ವರ್ಷಗಳಿಂದ ನೆಲ ಮುಟ್ಟಿಲ್ಲ. ಇಲ್ಲಿ 52 ವರ್ಷಗಳ ಹಿಂದೆ ಹಚ್ಚಿದ ದೀಪ ಇಂದು ಸಹ ಪ್ರಜ್ವಲಿಸುತ್ತಿದೆ.
ಬಾದಾಮಿ ತಾಲೂಕಿನ ಸುಕ್ಷೇತ್ರ ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ ಶ್ರೀಗಳೊಬ್ಬರ ಮಾತಿಗೆ ಶಿವನಾಮ ಮಾಡಲು ಬದ್ದರಾದ ಗ್ರಾಮದ ಭಕ್ತರು 52 ವರ್ಷಗಳಿಂದ ವಾದ್ಯ ಸಮೇತ ನಿರಂತರವಾಗಿ ಶಿವನಾಮ ಜಪ ಮಾಡುತ್ತಿದ್ದಾರೆ. ನಿಂತಲ್ಲೇ ನಿಂತು ಓಂ.. ನಮಃ ಶಿವಾಯ… ಎಂದು 24 ಗಂಟೆ ಶಿವಧ್ಯಾನ ಮಾಡುತ್ತಿರುವ ಭಕ್ತರು ಇಲ್ಲಿದ್ದಾರೆ.
1970 ಅಗಸ್ಟ್ 23 ರಂದು ಪೂರ್ಣಾನಂದ ಸ್ವಾಮಿಜಿ ಅಣತೆಯಂತೆ ಹಗಲು ರಾತ್ರಿ ನಿರಂತರ ಭಜನೆಯನ್ನ ಯಾವ ಗ್ರಾಮದವರು ಹೆಚ್ಚುಕಾಲ ಮಾಡುತ್ತಿರೋ ಆ ಗ್ರಾಮಕ್ಕೆ ಬರುತ್ತೇನೆ ಬಂದು ನೆಲೆಸುತ್ತೇನೆ ಎಂದಿದ್ದರಂತೆ. ಶ್ರೀಗಳ ವಾಣಿಗೆ ಬದ್ದರಾದ ಸೋಮನಕೊಪ್ಪ ಗ್ರಾಮದ ಭಕ್ತರು 36 ವರ್ಷಗಳ ಕಾಲ ಶಿವನಾಮ ಸಪ್ತಾಹಕ್ಕೆ ಒಪ್ಪಿಕೊಂಡು ಆರಂಭಿಸಿದರು. ಶ್ರೀಗಳ ಮಾತಿಗೆ ಒಪ್ಪಿದ ಭಕ್ತರು 36 ವರ್ಷದ ನಂತರವೂ ಬಿಡದೇ ಶಿವನಾಮ ಜಪವನ್ನ ಮುಂದುವರೆಸಿದ್ದಾರೆ.
ಈ ಮಠದಲ್ಲಿ ಜಾತಿ-ಮತ-ಬೇಧ ಇಲ್ಲ… ಹಿಂದೂ ಮುಸ್ಲಿಮ್ ಸೇರಿದಂತೆ ಎಲ್ಲ ಜಾತಿಯವರು ಜಾತ್ಯತೀತ ಮನೋಭಾವನೆಯಿಂದ ಸೇವೆ ಸಲ್ಲಿಸುತ್ತಾರೆ.
ಪ್ರತಿ ದಿನವೂ ಮೂರ್ನಾಲ್ಕು ಮನೆತನಗಳಂತೆ ಒಂದು ಕುಟುಂಬಕ್ಕೆ ಮೂರು ಗಂಟೆಗಳಂತೆ ಸಮಯ ಹೊಂದಿಸಿಕೊಂಡು ಶಿವನಾಮ ಜಪ ಭಕ್ತಿಯಿಂದ ಮಾಡಲಾಗುತ್ತಿದೆ. ಪಾಳೆ ಹಾಕಿಕೊಂಡು ಬರುವ ಭಕ್ತರು ತಂಬೂರಿ ನೆಲಕ್ಕಿಡದೆ ಒಬ್ಬರಿಗೊಬ್ಬರು ವರ್ಗಾಯಿಸಿಕೊಂಡು ಶಿವನಾಮ ಜಪಿಸುತ್ತಾರೆ.
ಅಂದು ಅಂಧಕಾರ ಹೋಗಲಾಡಿಸಲು ಶ್ರೀಗಳು ಹಚ್ಚಿದ ದೀಪ  ಇಂದಿಗೂ ಜ್ಯೋತಿಯಾಗಿ ಪ್ರಜ್ವಲಿಸುತ್ತಿದೆ. ಆ ದೀಪವನ್ನ ಭಕ್ತರು ಎಣ್ಣೆ-ಬತ್ತಿ ಹಾಕಿ ಕಾಯ್ದುಕೊಂಡು ಬಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button