ಪ್ರಗತಿವಾಹಿನಿ ಸುದ್ದಿ, ಪಣಜಿ: ಗೋವಾ ವಿಧಾನಸಭಾ ವಿಶೇಷ ಅಧಿವೇಶನದ ದಿನ ಮಂಗಳವಾರ ಮಹದಾಯಿ ನದಿ ನೀರು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷಗಳು ಅಧಿವೇಶನದಲ್ಲಿ ಮಹದಾಯಿ ವಿಷಯ ಚರ್ಚೆಗೆ ಅವಕಾಶ ಕಲ್ಪಿಸಿ ಇನ್ನೊಂದು ದಿನ ಅಧಿವೇಶನ ಕಲಾಪ ಮುಂದುವರೆಸುವಂತೆ ತೀವ್ರ ಗದ್ಧಲ ಆರಂಭಿಸಿದ ನಂತರ ಸಭಾಪತಿ ರಾಜೇಶ್ ಪಾಟ್ನೇಕರ್ ಇದಕ್ಕೆ ಅವಕಾಶ ನೀಡದೆ ಅಧಿವೇಶನ ಕಲಾಪವನ್ನು ಫೆಬ್ರುವರಿ ೩ ಕ್ಕೆ ಮುಂದೂಡಿದರು.
ಮಂಗಳವಾರ ೧೧ ಗಂಟೆಗೆ ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರ ಭಾಷಣದ ನಂತರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ ಪರಿಶಿಷ್ಠ ಜಾತಿ / ಪಂಗಡಗಳಿಗೆ ಇನ್ನೂ ಹತ್ತು ವರ್ಷಗಳಿಗೆ ಮೀಸಲಾತಿ ನೀಡುವ ಸಂವಿಧಾನಿಕ ತಿದ್ಧುಪಡಿ ಮಸೂದೆಯನ್ನು ಮಂಡಿಸಿ ಮಸೂದೆಯನ್ನು ಅಂಗೀಕರಿಸಲಾಯಿತು.
ನಂತರ ಮಹದಾಯಿ ನದಿ ನೀರು ವಿಷಯಕ್ಕೆ ಸಂಬಂಧಿಸಿದಂತೆ ಕಲಾಪ ಮುಂದೂಡುವಂತೆ ಪ್ರತಿಪಕ್ಷಗಳು ಗದ್ಧಲ ಆರಂಭಿಸಿದರು. ಆದರೆ ಇದಕ್ಕೆ ಸಭಾಪತಿಗಳು ಸಮ್ಮತಿಸದ ಕಾರಣ ಕಾಂಗ್ರೇಸ್, ಗೋವಾ ಫೊರ್‌ವರ್ಡ ಮತ್ತು ಎಂಜಿಪಿ ಪಕ್ಷದ ಶಾಸಕರು ತೀವ್ರ ಗದ್ಧಲ ಆರಂಭಿಸಿದರು.
ಅಮಚಿ ಮಹದಾಯಿ ಅಮಕಾ ಜಾಯ್ ( ನಮ್ಮ ಮಹದಾಯಿ ನಮಗೆ ಬೇಕು) ಎಂಬ ಪೋಸ್ಟರ್ ಹಿಡಿದು ಅಧಿವೇಶನ ಕಲಾಪದಲ್ಲಿ ಪ್ರತಿಪಕ್ಷಗಳು ಗದ್ದಲವನ್ನುಂಟುಮಾಡಿವು.
ಮಹದಾಯಿ ನದಿ ನೀರು ವಿಷಯವು ರಾಜ್ಯದ ಮಟ್ಟಿಗೆ ಅತ್ಯಂತ ಪ್ರಮುಖ ವಿಷಯವಾಗಿದೆ. ಮಹದಾಯಿ ನದಿ ನೀರನ್ನು ಕರ್ನಾಟಕವು ತಿರುಗಿಸಿಕೊಳ್ಳುವುದನ್ನು ತಡೆಯಬೇಕಿದೆ. ಇದರಿಂದಾಗಿ ಮಹದಾಯಿ ನದಿ ನೀರಿನ ಪ್ರಕರಣ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಗೋವಾ ಫೊರ್‌ವರ್ಡ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಮಹದಾಯಿ ವಿಷಯ ಪ್ರಸ್ತಾಪಿಸಿ-ಮಹದಾಯಿ ನದಿ ನನಗೆ ತಾಯಿಗಿಂತ ಹೆಚ್ಚು ಎಂದು ಹೇಳಿದ ಮುಖ್ಯಮಂತ್ರಿಗಳ ಹೇಳಿಕೆಯನ್ನು ನೆನಪಿಸಿಕೊಂಡರು.
ಮಹದಾಯಿ ವಿಷಯದಲ್ಲಿ ಗೋವಾಕ್ಕೆ ಮೋಸಮಾಡಲಾಗಿದೆ ಎಂದು ನಾವು ಭಾವಿಸಿದ್ದೇವೆ. ರಾಜ್ಯಪಾಲರೇ ಈ ಹೇಳಿಕೆ ನೀಡಿದ್ದಾರೆ. ಈ ವಿಷಯದಲ್ಲಿ ಚರ್ಚೆ ನಡೆಯಬೇಕು ಎಂದು ಆಘ್ರಹಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಹದಾಯಿ ನದಿ ನನಗೆ ತಾಯಿಗಿಂತ ಹೆಚ್ಚು ಎಂದು ಪುನರುಚ್ಛರಿಸಿ- ಮಹದಾಯಿ ನದಿ ಉಳಿವಿಗಾಗಿ ನಾನು ಏನುಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದರು.
ಇದು ಕೇಂದ್ರ ಸರ್ಕಾರದ ತಿದ್ಧುಪಡಿ ಮಸೂದೆ ಅಂಗೀಕರಿಸಲು ಕರೆದ ವಿಶೇಷ ಅಧಿವೇಶನವಾಗಿರುವುದರಿಂದ ಅಧಿವೇಶನ ಕಲಾಪವನ್ನು ಇನ್ನೊಂದು ದಿನ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿದ ಸಭಾಪತಿ ರಾಜೇಶ್ ಪಾಟ್ನೇಕರ್ ಅಧಿವೇಶನವನ್ನು ಫೆಬ್ರುವರಿ ೩ ಕ್ಕೆ ಮುಂದೂಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ