ವಚನಗಳು ಬದುಕಿಗೆ ಮಾರ್ಗದರ್ಶಿ: ಡಾ.ಬೂದೆಪ್ಪ ಎಚ್.ಬಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಿವಶರಣರ ವಚನಗಳು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿವೆ. ಅಂತಹ ವಚನಗಳನ್ನು ಮಕ್ಕಳಿಗೆ ಪ್ರತಿನಿತ್ಯವೂ ಪಾಠ ಮಾಡಿಸಿದರೆ ಅವರೂ ಕೂಡ ಹಡಪದ ಅಪ್ಪಣ್ಣರಂತೆ ಉತ್ತಮ ವಚನಕಾರರಾಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತಾರೆಂದು ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಎಚ್.ಬಿ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯಕ್ತಾಶ್ರಯದಲ್ಲಿ ಮಂಗಳವಾರ (ಜುಲೈ.16) ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಜೊತೆ ಕೆಲಸ ಮಾಡಿದ್ದ ಶ್ರೇಷ್ಠ ವಚನಕಾರ ಶಿವಶರಣ ಹಡಪದ ಅಪ್ಪಣ್ಣನವರು ಸಮಾಜದಲ್ಲಿ ಸಮಾನತೆ ತರಲು ತಮ್ಮನ್ನು ತೊಡಗಿಸಿಕೊಂಡಿದ್ದ ನಿಜಶರಣರು ಎಂದರು.
250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣನವರು ಸಮಾಜದ ಪರಿವರ್ತನೆ ಶ್ರಮಿಸಿದವರು ಎಂದು ಹೇಳಿದರು.
ಸಮಾನತೆ ಸಾರುವ ಗ್ರಂಥ ವಚನ ಸಾಹಿತ್ಯವನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯ ಎಂಬುದು ಕೇವಲ ಆಡು ಮಾತಾಗದೆ ಇದು ಅಪೂರ್ವವಾದ ಭಾಷಾ ಸಂಪತ್ತನ್ನು ಹೊಂದಿರು ಸಮಾನತೆಯ ಆಶಯ ಸಾರುವ ಗ್ರಂಥವಾಗಿದೆ.
ವಚನಗಳನ್ನು ಓದಿ ಅರ್ಥ ಮಾಡಿಕೊಂಡು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಬೂದೆಪ್ಪ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ಅವರು, ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಗಳಾಗಿ, ಅನುಭವ ಮಂಟಪದ ಮುಖ್ಯ ಸಚೇತಕರಾಗಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಶ್ರೇಯಸ್ಸು ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದರು.
ಬಸವಣ್ಣನವರು ಪ್ರಾಮಾಣಿಕವಾಗಿ, ನಿರ್ಭಿಡೆಯಿಂದ ಕಾರ್ಯ ಮಾಡಲು ಹಡಪದ ಅಪ್ಪಣ್ಣ ಅವರ ಪಾತ್ರ ಪ್ರಮುಖವಾದದ್ದು ಎಂದರು.
ಸರ್ಕಾರವು ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಇಲಾಖಾ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮಾಜವನ್ನು ಬಲಿಷ್ಠ ಪಡಿಸುವದಕ್ಕೆ ಇವತ್ತಿನ ಯುವ ಪೀಳಿಗೆ ಮುಂದಾಗಬೇಕು ಎಂದು ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ಕರೆ ನೀಡಿದರು.
2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಡಪದ ಸಮಾಜದಲ್ಲಿರುವ ಕುಂದುಕರತೆಗಳನ್ನು ನಿವಾರಿಸುವಂತೆ ಜಿಲ್ಲಾಧ್ಯಕ್ಷರ ನೆತೃದಲ್ಲಿ ಸಮಾಜದ ಎಲ್ಲ ಜನತೆ ಸೇರಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುರೇಶ ಚಂದರಗಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಮಲ್ಲಪ್ಪ ರಾವುತನವರ ಅವರು ಸ್ವಾಗತಿಸಿದರು. ಚಿಂಚಲಿ ಶಾಲಾ ಶಿಕ್ಷಕರಾದ ಎಸ್.ಪಿ ಕಂಕಣವಾಡಿ ಅವರು ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ತಹಶೀಲ್ದಾರ ಮಂಜುಳಾ ನಾಯಕ, ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಬಸವರಾಜ ಹಡಪದ, ಹಡಪದ ಸಮಾಜದ ಬೆಳಗಾವಿ ತಾಲ್ಲೂಕಿನ ಅಧ್ಯಕ್ಷರಾದ ಮಹಾಂತೇಶ ಹಂಪಣ್ಣವರ, ದಲಿತ ಮುಖಂಡರಾದ ಯಲ್ಲಪ್ಪ ಹುದಲಿ, ಶಂಕರ ದರೆಣ್ಣವರ ಹಾಗೂ ಹಡಪದ ಸಮಾಜದ ಮುಖಂಡರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ ಕಾರ್ಯಕ್ರಮ:
ಇದಕ್ಕೂ ಮುನ್ನ ನಗರದ ಅಶೋಕ ವೃತ್ತದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಎಚ್.ಬಿ. ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಮಲ್ಲಪ್ಪ ರಾವುತನವರ, ಹಾಗೂ ಹಡಪದ ಸಮಾಜದ ಎಲ್ಲ ಗಣ್ಯರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ