

ಕೌಜಲಗಿಯಲ್ಲಿ ಬೃಹತ್ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿದ ಸಿಎಮ್ ಚವ್ಹಾಣ
ನಮ್ಮ ವ್ಯಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ -ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಸಾಕ್ಷಾತ್ ದೇವರು ಬಂದಿದ್ದು, ರಾಷ್ಟ್ರದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸಂಕಲ್ಪ ಮಾಡಿದ್ದು, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಹೇಳಿದರು.
ಗುರುವಾರದಂದು ತಾಲೂಕಿನ ಕೌಜಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜರುಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ದಿಯು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಚವ್ಹಾಣ, ಎಲ್ಲರಿಗೂ ನಮಸ್ಕಾರಗಳು.. ಎಲ್ಲರೂ ಹೇಗಿದ್ದೀರಾ? ಎಂದು ವಿಚಾರಿಸಿದರು.
ಶಕ್ತಿಶಾಲಿ ಭಾರತ ನಿರ್ಮಾಣ ಮಾಡುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ನರೇಂದ್ರ ಮೋದಿಯವರ ಜಪ ಮಾಡುತ್ತಿದೆ. ಜಗತ್ತಿನಲ್ಲಿಯೇ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಹೊರಟ್ಟಿದ್ದಾರೆ. ನಾವು ಯಾರ ತಂಟೆಗೆ ಹೋಗುವದಿಲ್ಲ, ನಮ್ಮ ತಂಟೆಗೆ ಬಂದರೇ ನಾವು ಸುಮ್ಮನಿರುವದಿಲ್ಲ ಎಂದು ಮೋದಿಯವರು ಶತ್ರು ರಾಷ್ಟ್ರಗಳಿಗೆ ಈಗಾಗಲೇ ಸಂದೇಶವನ್ನು ರವಾನಿಸಿದ್ದಾರೆಂದು ಹೇಳಿದರು.
ರಾಹುಲ್ ಗಾಂಧಿ ಅವರು ಈಗ ಭಾರತ ಜೋಡೋ ಕುರಿತು ಮಾತನಾಡುತ್ತಿದ್ದಾರೆ. ವಿದೇಶಕ್ಕೆ ಹೋದ ಸಂದರ್ಭದಲ್ಲಿ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇಂತಹ ರಾಹುಲ್ ಗಾಂಧಿ ದೇಶ ಭಕ್ತನಾಗಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ದೇಶ ಭಕ್ತಿಯ ಬಗ್ಗೆ ನಮಗೆ ಸಂದೇಹ ಉಂಟಾಗಿದೆ ಎಂದು ರಾಹುಲ್ ಗಾಂಧಿಯವರನ್ನು ಛೇಡಿಸಿದರು.
ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಸಬ್‌ಕಾ ವಿಶ್ವಾಸದ ಜೊತೆಗೆ ನಮ್ಮ ಪಕ್ಷ ನಡೆಯುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೋಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡುವಂತೆ ಕೋರಿಕೊಂಡ ಅವರು, ಕಾಂಗ್ರೇಸ್ ಪಕ್ಷದಲ್ಲಿ ಅಧಿಕಾರಕ್ಕೂ ಮುನ್ನವೇ ಈಗಾಗಲೇ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಮಧ್ಯೆ ಜಗಳ ನಡೆಯುತ್ತಿದೆ. ಇನ್ನೂ ಜೆಡಿಎಸ್‌ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ, ಆ ಪಕ್ಷದವರು ಕೊನೆ ಗಳಿಗೆಯಲ್ಲಿ ಕಾಂಗ್ರೇಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡು ಜನರಿಗೆ ಮಂಕುಬುದ್ದಿ ಎರಚುತ್ತಾರೆ ಎಂದು ಕಾಂಗ್ರೇಸ್-ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದಲ್ಲಿ ಕನ್ಯಾಪೂಜೆಯಿಂದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಹೆಣ್ಣು ಮಕ್ಕಳ ಗೌರವ ಸಮ್ಮಾನಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿ ದೇವರು ವಾಸ ಮಾಡುತ್ತಾನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಸರ್ವಾಂಗೀಣ ಅಭ್ಯುದಯ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಆದರೇ ಕಾಂಗ್ರೇಸ್ ಪಕ್ಷ ಮೊದಲಿನಿಂದಲೂ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಹೇಳಿದರು. ಈ ಭಾಗದ ಜನಪ್ರೀಯ ನೇತಾರ ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಶಿವರಾಜಸಿಂಗ್ ಚವ್ಹಾಣ ಅವರು ಮನವಿ ಮಾಡಿದರು.
ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಕಳೆದ ೧೯ ವರ್ಷಗಳಿಂದ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೇ ವಿರೋಧಿ ಪಾಳಯದವರು ಜನರನ್ನು ಯಾಮಾರಿಸುತ್ತಿದ್ದಾರೆ. ಸುಳ್ಳು ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ. ಅಭಿವೃದ್ದಿ ವಿಷಯಗಳಿಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ವಿರೋಧಿಗಳಿಗೆ ಪಂಥಾಹ್ವಾನ ನೀಡಿದರು.
ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮಾಜಗಳು ಬಿಜೆಪಿಗೆ ಶಕ್ತಿಯಾಗಿ ನಿಂತಿದ್ದಾರೆ. ಬರುವ ಚುನಾವಣೆಯಲ್ಲಿ ಬಿಜೆಪಿಯು ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೇ ಅಧಿಕಾರಕ್ಕೆ ಬರಲಿದೆ. ನಮ್ಮಲ್ಲಿನ ಚಿಕ್ಕ-ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ. ಹೆಚ್ಚಿನ ಸ್ಥಾನಗಳನ್ನು ಗಳಿಸಲು ಕಂಕಣ ಬದ್ಧರಾಗಿ ದುಡಿಯೋಣವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ. ವಿಶ್ವನಾಥ ಪಾಟೀಲ, ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ, ಓಬಿಸಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಉಮೇಶ ಪುರಿ, ಓಬಿಸಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಓಬಿಸಿ ಮಂಡಲ ಅಧ್ಯಕ್ಷ ಸಂಗಣ್ಣ ಕಂಟಿಕಾರ ಓಬಿಸಿ ಮೋರ್ಚಾ ಜಿಲ್ಲಾ ಪ್ರಬಾರಿ ಗೋವಿಂದ ಕೊಪ್ಪದ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಭೀಮಶಿ ಮಾಳದವರ, ಜಿ.ಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ರಾಮನಗೌಡ ಪಾಟೀಲ, ಶಂಕರ ಬಿಲಕುಂದಿ, ಪರಮೇಶ್ವರ ಹೊಸಮನಿ, ಪ್ರಭಾ ಶುಗರ ನಿರ್ದೇಶಕರಾದ ಎಮ್.ಆರ್.ಭೋವಿ, ಶಿವಲಿಂಗ ಪೂಜೇರಿ, ಅರಭಾವಿ ಮಂಡಲ ವಿಸ್ತಾರಕ ವೆಂಕಟೇಶ ಲಾಳೆ, ಮುಖಂಡ ರವಿ ಪರುಶೆಟ್ಟಿ, ಮುದಕಪ್ಪ ತಳವಾರ ಸದಾಶಿವ ಹೆಳವರ, ಲಕ್ಷ್ಮಣ ಮಸಗುಪ್ಪಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ ಸ್ವಾಗತಿಸಿದರು, ಪರಸಪ್ಪ ಬಬಲಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ