ಪ್ರಗತಿವಾಹಿನಿ ಸುದ್ದಿ, ಕೋಲಾರ- : ಲಾಕ್ ಡೌನ್ ಮಧ್ಯೆಯೂ ಗುಂಪಿನಲ್ಲಿ ನಮಾಜ್ ಮಾಡುತ್ತಿದ್ದವರನ್ನು ಕೋಲಾರ ತಹಸೀಲ್ದಾರ್ ಶೋಭಿತ ಅವರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಮಹಿಳಾ ತಹಸಿಲ್ದಾರ್, ಅಲ್ಲಿದ್ದವರನ್ನೆಲ್ಲ ವಶಕ್ಕೆ ಪಡೆದು ದಿಟ್ಟತನ ಪ್ರದರ್ಶಿಸಿದ್ದಾರೆ.
ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು, ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು, ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಪಾಠ ಕಲಿಸಿದ್ದಾರೆ.
ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಜನರು ಸಾಮೂಹಿಕವಾಗಿ ಎಲ್ಲೂ ಭಾಗವಹಿಸಬಾರದು ಮತ್ತು ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಎಲ್ಲೂ ಸಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂದು ನಿರ್ಬಂಧ ಮಾಡಲಾಗಿದೆ. ಆದರೂ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು.
ಮುಸ್ಲಿಂ ನಿಯಮಾವಳಿ ಪ್ರಕಾರ ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧವಿದೆ. ಆದರೆ ಇದಕ್ಕೆ ಬಗ್ಗದ ಶೋಭಿತಾ, ಮಸೀದಿಯೊಳಗೆ ತೆರಳಿ ಲಾಕ್‍ಡೌನ್ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 11 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ