ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಅಭಿವೃದ್ಧಿ ಬಗ್ಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ್ದ ಅವರು ಬೆಳಗಾವಿ ನಗರದ ಅಭಿವೃದ್ಧಿ ಯೋಜನೆಗಳ ವಿವರ ಪಡೆದರು. ಈ ವೇಳೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ನಗರ ಅಭಿವೃದ್ಧಿ ಕ್ರಿಯಾ ಯೋಜನೆ ಪಡೆದರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಈಚೆಗೆ ಅಕ್ರಮ ಬಡಾವಣೆಗಳ ವಿರುದ್ಧ ನಡೆಸಿದ ಕಾರ್ಯಾಚರಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ಗೂಳಪ್ಪ ಹೊಸಮನಿ ಬೆಳಗಾವಿ ನಗರ ಇತ್ತೀಚಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು. ಬುಡಾ ಆಯುಕ್ತ ಪ್ರೀತಮ್ ನಸ್ಲಾಪುರೆ ಸಮಗ್ರ ವಿವರವನ್ನು ಬಳ್ಳಾರಿ ಬುಡಾ ಅಧ್ಯಕ್ಷರಿಗೆ, ಶಾಸಕರಿಗೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಘೂಳಪ್ಪ ಬಿ.ಹೊಸಮನಿ ಇಬ್ಬರನ್ನೂ ಸತ್ಕರಿಸಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ:
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ನೂತನ ಕ್ರಿಯಾ ಯೋಜನೆಗಳಿಗೆ ತ್ವರಿತಗತಿಯಲ್ಲಿ ಹೊಸ ಸ್ಪರ್ಶ ನೀಡಲಾಗುವುದು. ಸಮಗ್ರ ರೂಪುರೇಷೆಗಳನ್ನು ತಯಾರಿಸಿರುವ ಬುಡಾ ಅಧ್ಯಕ್ಷರ ಜೊತೆ ಚರ್ಚಿಸಿದ್ದೇನೆ. ಕೂಡಲೇ ಬೆಳಗಾವಿ ನಗರ ಅಭಿವೃದ್ಧಿ ಪರ್ವ ಕಾಣಲಿದೆ. ಜಿಲ್ಲಾಡಳಿತ ಬುಡಾದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಅ.೧೧ ರಂದು ಸಂಜೆ ಬುಡಾದಲ್ಲಿ ಜರುಗಿದ ಅಭಿವೃದ್ಧಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ೧೫೯ ಎಕರೆಯಲ್ಲಿ ಕಣಬರ್ಗಿಯ ನೂತನ ಯೋಜನೆಯ ಪ್ರಸ್ತಾವನೆ ಸಿದ್ಧವಾಗಿದೆ.
ಕಣಬರ್ಗಿ ಯೋಜನೆ ಜೊತೆಯಲ್ಲೇ ಸದ್ಯ ಕುಮಾರಸ್ವಾಮಿ ಲೇಔಟ್ ಹಾಗೂ ರಾಮತೀರ್ಥ ನಗರಗಳನ್ನು ಕೂಡ ಸಮಗ್ರ ಅಭಿವೃದ್ಧಿಗೊಳಿಸಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ಸಿದ್ಧಪಡಿಸಲಾಗಿದೆ. ಆದ್ಯತೆ ಮೇರೆಗೆ ಅಲ್ಲಿ ಸಂಬಂಧಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಸಭೆಯಲ್ಲಿ ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳು ಬುಡಾ ಅಧ್ಯಕ್ಷ, ಆಯುಕ್ತ ಪ್ರಿತಂ ನಸ್ಲಾಪೂರ ಹಾಗೂ ಅಭಿಯಂತರರ ಕಮಿಟಿಯೊಂದಿಗೆ ಚರ್ಚಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ