Vikalachetanara Day
Cancer Hospital 2
Bottom Add. 3

ಫಲಿಸಲಿಲ್ಲ ಕೋಟಿ ಕೋಟಿ ಅಭಿಮಾನಿಗಳ ಪೂಜೆ, ಫೈನಲ್ ನಲ್ಲಿ ಎಡವಿದ ಭಾರತ 

 

 *ರಘುನಾಥ್ ಡಿ.ಪಿ* , ಬೆಂಗಳೂರು : ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಮರೆದಿದ್ದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ನಿರಾಸೆ ಕಂಡಿತು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಸೋಲು ಕಂಡಿತು. ಈ ಮೂಲಕ ತವರು ಪ್ರೇಕ್ಷಕರ ಎದುರು ಪ್ರಶಸ್ತಿ ಎತ್ತಿ ಹಿಡಿಯುವ ಕನಸಿನಲ್ಲಿದ್ದ ಬ್ಲೂ ಬಾಯ್ಸ್ ನಿರಾಸೆ ಅನುಭವಿಸಿದರೆ, ಬಲಿಷ್ಠ ಆಸ್ಟ್ರೇಲಿಯಾ ತಂಡ ದಾಖಲೆಯ 6ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಟ್ರಾವಿಡ್ ಹೆಡ್(137ರನ್, 120 ಎಸೆತ, 15 ಬೌಂಡರಿ, 4 ಸಿಕ್ಸರ್) ಹಾಗೂ ಮಾರ್ನಸ್ ಲಬುಶೇನ್ (58*ರನ್, 110 ಎಸೆತ, 4 ಬೌಂಡರಿ) ಜೋಡಿಯ ಅದ್ಭುತ ಬ್ಯಾಟಿಂಗ್ ನೆರವಿನಿಂದ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸಿ ಗೆಲುವಿನ ನಗೆ ಬೀರಿತು.  ಇದರೊಂದಿಗೆ ಆಸ್ಟ್ರೇಲಿಯಾ ಎದುರೇ ಟೀಮ್ ಇಂಡಿಯಾ 2ನೇ ಭಾರಿಗೆ ಫೈನಲ್‌ನಲ್ಲಿ ಎಡವಿತು. 2003ರಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ವಿಫಲವಾಯಿತು.

*ಭಾರತ ತಂಡಕ್ಕೆ ಕೈಕೊಟ್ಟ ಬ್ಯಾಟಿಂಗ್

ಟೂರ್ನಿಯುದ್ದಕ್ಕೂ ಪ್ರಭುತ್ವ ಮೆರೆದಿದ್ದ ಟೀಮ್ ಇಂಡಿಯಾಗೆ ಇಂದು ಬ್ಯಾಟರ್‌ಗಳು ಕೈಕೊಟ್ಟರು. ಆಸ್ಟ್ರೇಲಿಯಾ ವೇಗಿಗಳ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ಯುವ ಬ್ಯಾಟರ್ ಶುಭಮಾನ್ ಗಿಲ್ (4) ನಿರಾಸೆ ಕಂಡರೆ, ಕೆಲಕಾಲ ಅಬ್ಬರಿಸಿದ ರೋಹಿತ್ ಶರ್ಮ (47) ಮ್ಯಾಕ್ಸ್ವೆಲ್ ಎಸೆತದಲ್ಲಿ ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಶ್ರೇಯಸ್ ಅಯ್ಯರ್ (4) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರಿಂದ 81 ರನ್‌ಗಳಿಗೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು.

ಬಳಿಕ ಜೊತೆಯಾದ ವಿರಾಟ್ ಕೊಹ್ಲಿ (54ರನ್, 63 ಎಸೆತ, 4  ಬೌಂಡರಿ) ಹಾಗೂ ಕೆಎಲ್ ರಾಹುಲ್ (66ರನ್, 107 ಎಸೆತ, 1 ಬೌಂಡರಿ) ಜೋಡಿ 4ನೇ ವಿಕೆಟ್‌ಗೆ 67 ರನ್ ಜೊತೆಯಾಟವಾಡಿತು. ಉತ್ತಮ ಲಯದಲ್ಲಿರುವಾಗಲೇ ಕಮ್ಮಿನ್ಸ್ ಎಸೆತವನ್ನು ಎದುರಿಸಲು ವಿಫಲರಾದ ಕೊಹ್ಲಿ ಬೌಲ್ಡ್ ಆದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ  ಪಡೆದು ಕ್ರೀಸ್‌ಗಿಳಿದ ರವೀಂದ್ರ  ಜಡೇಜಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ರಾಹುಲ್ ನಿರ್ಗಮನದೊಂದಿಗೆ ಟೀಮ್ ಇಂಡಿಯಾದ ಬೃಹತ್ ಮೊತ್ತದ ಕನಸು ಕೂಡ ಛಿದ್ರಗೊಂಡಿತು. ಕೆಳಕ್ರಮಾಂಕದ ಬ್ಯಾಟರ್‌ಗಳು ತಂಡದ ಮೊತ್ತವನ್ನು 240 ರನ್ ಗಡಿ ಮುಟ್ಟಿಸಿದರು.

* ಟೀಮ್ ಇಂಡಿಯಾಗೆ ತಲೆ ನೋವಾದ ಟ್ರಾವಿಡ್ ಹೆಡ್

ಆಸೀಸ್ ತಂಡಕ್ಕೆ ಮೊಹಮದ್ ಶಮಿ ಆರಂಭದಲ್ಲೆ ಆಘಾತ ನೀಡಿದರು. ಡೇವಿಡ್ ವಾರ್ನರ್ (7), ಮಿಚೆಲ್ ಮಾರ್ಷ್ (15) ಹಾಗೂ ಸ್ಟೀವನ್ ಸ್ಮಿತ್ (4) ನಿರ್ಗಮನದಿಂದ ಟೀಮ್ ಇಂಡಿಯಾದಲ್ಲಿ ಗೆಲುವಿನ ಆಸೆ ಚಿಗುರಿತು. 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆಸೀಸ್ ತಂಡಕ್ಕೆ ಆರಂಭಿಕ ಟ್ರಾವಿಡ್ ಹೆಡ್ ಹಾಗೂ ಮಾರ್ನಸ್ ಲಬುಶೇನ್ ಜೋಡಿ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸಲು ನಾಯಕ ರೋಹಿತ್ ಶರ್ಮ ಮಾಡಿದ ಪ್ರಯೋಗಗಳು ಕೈಗೂಡಲಿಲ್ಲ. ಇನಿಂಗ್ಸ್ ಕಳೆದಂತೆ ಆಸೀಸ್ ತಂಡದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಈ ಜೋಡಿಯ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆಸೀಸ್ ಗೆಲುವಿನ ನಗೆ ಬೀರಿತು.

 *ಸಂಕ್ಷೀಪ್ತ ಸ್ಕೋರ್* 

 *ಭಾರತ: 50 ಓವರ್‌ಗಳಲ್ಲಿ 240* (ರೋಹಿತ್ ಶರ್ಮ 47, ವಿರಾಟ್ ಕೊಹ್ಲಿ 54, ಕೆಎಲ್ ರಾಹುಲ್ 66, ಮಿಚೆಲ್ ಸ್ಟಾರ್ಕ್ 55ಕ್ಕೆ 3, ಹ್ಯಾಸಲ್‌ವುಡ್ 60ಕ್ಕೆ 2, ಕಮ್ಮಿನ್ಸ್ 34ಕ್ಕೆ 2, ಜಂಪಾ 44ಕ್ಕೆ 1), *ಆಸ್ಟೇಲಿಯಾ: 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241* (ಟ್ರಾವಿಡ್ ಹೆಡ್ 137, ಲಬುಶೇನ್ 58, ಬುಮ್ರಾ 43ಕ್ಕೆ 2, ಸಿರಾಜ್ 45ಕ್ಕೆ 1, ಶಮಿ 47ಕ್ಕೆ1). 

* 10: ಆಸ್ಟ್ರೇಲಿಯಾ ತಂಡ ಕಡೇ 10 ಟೂರ್ನಿಗಳಲ್ಲಿ 6ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. 13ನೇ ಏಕದಿನ ವಿಶ್ವಕಪ್ ಇದಾಗಿತ್ತು.

* 2: ಭಾರತ ತಂಡ ಆಸ್ಟ್ರೇಲಿಯಾ ಎದುರು 6 ತಿಂಗಳ ಅಂತರದಲ್ಲಿ 2ನೇ ಬಾರಿಗೆ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡಿತು. ಇದಕ್ಕೂ ಮೊದಲು ಕಳೆದ ಜೂನ್ ತಿಂಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲೂ ಆಸೀಸ್ ಎದುರು ಭಾರತ ಸೋಲು ಕಂಡಿತು.

* 10: ಭಾರತ ತಂಡಕ್ಕೆ ಸತತ 10ನೇ ವರ್ಷವೂ ಐಸಿಸಿ ಟ್ರೋಫಿ ಬರ ಮುಂದುವರಿಯಿತು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಆಡಿರುವ ಎಲ್ಲಾ ಐಸಿಸಿ ಟ್ರೋಫಿಗಳಲ್ಲಿ ಭಾರತ ಮುಗ್ಗರಿಸಿದೆ.

* ಟೂರ್ನಿಯಲ್ಲಿ ಆಕ್ಟೋಬರ್ 8 ರಂದು‌ ಆಸೀಸ್ ವಿರುದ್ಧವೇ ಗೆಲುವಿನ ಅಭಿಯಾನ ಆರಂಭಿಸಿದ್ದ ಭಾರತ, ಸತತ 10 ಗೆಲುವಿನ ಬಳಿಕ ಪೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಮುಗ್ಗರಿಸಿತು.

Bottom Add3
Bottom Ad 2

You cannot copy content of this page