Belagavi NewsBelgaum NewsCrimeKannada NewsKarnataka News

*ಸಂತೆಯಲ್ಲಿ ಬಂಗಾರದ ಸರ ಕಳ್ಳತನ*:  *ಮಹಿಳೆಯನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾರೂಗೇರಿ ಸಂತೆಯಲ್ಲಿ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ ಅಂದಾಜು ₹3.50 ಲಕ್ಷ ಮೌಲ್ಯದ ಬಂಗಾರದ ಸರ ಕಳ್ಳತನ ಮಾಡಿದ ಆರೋಪದ ಮೇಲೆ ಕಾಗವಾಡದ ಮಹಿಳೆಯೊಬ್ಬರನ್ನು ಹಾರೂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಬಂಗಾರದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಗವಾಡ ನಿವಾಸಿ ಸುಲೋಚನಾ ಸಿದ್ದಪ್ಪ ಲೋಂಡೆ ಬಂಧಿತ ಆರೋಪಿತೆ. ರಾಯಬಾಗ ತಾಲೂಕಿನ ಹಾರೂಗೇರಿ ಜನತಾ ಪ್ಲಾಟ್ ನಿವಾಸಿ ಶಾಂತವ್ವ ಅಪ್ಪಾಸಾಬ ಮೋರೆ (45) ಅವರು ಅಕ್ಟೋಬರ್ 7ರಂದು ಹಾರೂಗೇರಿ ಸಂತೆಗೆ ತೆರಳಿದ್ದರು. ಈ ವೇಳೆ ಸುಮಾರು ₹3.50 ಲಕ್ಷ ಮೌಲ್ಯದ ಬಂಗಾರದ ಅವಲಕ್ಕಿ ಸರ ಹಾಗೂ ₹1,000 ಹಣವನ್ನು ಚಾಕಲೇಟ್ ಬಣ್ಣದ ಪರ್ಸ್‌ನಲ್ಲಿ ಇಟ್ಟುಕೊಂಡು ಕೈಚೀಲದಲ್ಲಿಟ್ಟಿದ್ದರು.

ಸಂಜೆ 5ರಿಂದ 5.30ರ ನಡುವಿನ ಅವಧಿಯಲ್ಲಿ ಸಂತೆಯಲ್ಲಿ ಬಾಳೆಹಣ್ಣು ಖರೀದಿಸಲು ಪರ್ಸ್ ನೋಡಿದಾಗ ಅದು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಪರ್ಸ್‌ನಲ್ಲಿದ್ದ ಬಂಗಾರದ ಸರ ಹಾಗೂ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 352/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 303(2)ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನವೆಂಬರ್ 4ರಂದು ಕಾಗವಾಡದ ಸುಲೋಚನಾ ಸಿದ್ದಪ್ಪ ಲೋಂಡೆ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿತೆಯಿಂದ ಅಂದಾಜು ₹3.50 ಲಕ್ಷ ಮೌಲ್ಯದ ಬಂಗಾರದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಅಥಣಿ ಡಿಎಸ್‌ಪಿ ಪಿ. ವೀರೇಂದ್ರಕುಮಾರ ಹಾಗೂ ಹಾರೂಗೇರಿ ಸಿಪಿಐ ರತನಕುಮಾರ ಜಿರಗ್ಯಾಳ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಾಳಪ್ಪ ಪೂಜಾರಿ ಹಾಗೂ ಸಿಬ್ಬಂದಿಗಳಾದ ರಮೇಶ ಮುಂದಿನಮನಿ, ಸಿದಗೌಡ ಪಾಟೀಲ, ಸೋಮು ಹಲಕಿ ಮತ್ತು ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related Articles

Back to top button