ಅಕ್ಟೋಬರ್ ತಿಂಗಳಿನಲ್ಲಿ 21 ಜನ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರನ್ನು ಭೇಟಿಯಾಗಿದ್ದು, 2 ರೇಕು ಕಲ್ಲಿದ್ದಲು ಹೆಚ್ಚುವರಿ ಸೇರಿ ನಿತ್ಯ ಒಟ್ಟು 10 ರೇಕ್ ಕಲ್ಲಿದ್ದಲು ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಕೇಂದ್ರದಿಂದ ಇನ್ನೂ 3 ರೇಕ್ ಗಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 98,863 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದ್ದು, ತೆಲಂಗಾಣದ ಸಿಂಗರೇಣಿಯಿಂದ ಕಲ್ಲಿದ್ದಲು ತರಿಸುವ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಎಸ್ಕಾಂ ಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ವಿದ್ಯುತ್ ಬಿಲ್ ಪಾವತಿಯಲ್ಲಿ ದಕ್ಷತೆ ಹೆಚ್ಚಳ, Debt equity structure ಅನ್ನು ಸಂಯೋಜಿಸಿ, ಮಾರುಕಟ್ಟೆಯಲ್ಲಿ ಸಾಲ ಪಡೆಯುವುದು, ಎಸ್ಕಾಂಗಳ ಆಸ್ತಿಯಿಂದ ಆದಾಯ ಸೃಜಿಸುವ ಮೂಲಕ ಆದಾಯ ಹೆಚ್ಚಿಸುವ ಕುರಿತು ಕ್ರಮ ಇಂಧನ ಇಲಾಖೆಯು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಿದೆ.
ರಾಜ್ಯದಲ್ಲಿ ವಿದ್ಯುತ್ ಕಡಿತ ಇಲ್ಲ; ಮುಂದೆಯೂ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಶೇ. 50 ರಷ್ಟು ಹೆಚ್ಚು ಮಳೆಯಾಗಿದೆ; ಬಳ್ಳಾರಿ, ಬೀದರ್, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆಯಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 21 ಜನ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಸಿಎಂ ತಿಳಿಸಿದರು.
ಜೂನ್ ತಿಂಗಳಿನಿಂದ 4.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಈಗಾಗಲೇ 1.17 ಲಕ್ಷ ರೈತರಿಗೆ 105 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ; ಜಿಲ್ಲಾಧಿಕಾರಿಗಳ ಬಳಿ ಪ್ರಕೃತಿ ವಿಕೋಪ ಪರಿಹಾರಕ್ಕೆ 738 ಕೋಟಿ ರೂ. ಅನುದಾನ ಲಭ್ಯವಿದೆ.
ಮಳೆ ನಿಂತ ಕೂಡಲೇ ಮನೆ ಹಾನಿ ಸಮೀಕ್ಷೆ ನಡೆಸಿ, ದಾಖಲಿಸಿ, ಕೂಡಲೇ ಮೊದಲ ಕಂತಿನ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ 10,000 ರೂ.ಗಳ ತಕ್ಷಣದ ಪರಿಹಾರ (Ex-gratia) ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸೇತುವೆ, ರಸ್ತೆಗಳು, ಶಾಲಾ ಕಟ್ಟಡ, ವಿದ್ಯುತ್ ಕಂಬಗಳು, ಆರೋಗ್ಯ ಕೇಂದ್ರಗಳು ಮತ್ತಿತರ ಸಾರ್ವಜನಿಕ ಆಸ್ತಿಗೆ ಆಗಿರುವ ಹಾನಿಯನ್ನು ಕೂಡಲೇ ಸಮೀಕ್ಷೆ ನಡೆಸಿ, ಎನ್.ಡಿ.ಆರ್.ಎಫ್ ಮಾರ್ಗಸೂಚಿಯಡಿ ಕೂಡಲೇ ಅನುದಾನ ಬಿಡುಗಡೆ ಮಾಡಿ ದುರಸ್ತಿ ಕಾರ್ಯ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದರು.
ಮುಜರಾಯಿ ಇಲಾಖೆಯ ಅರ್ಚಕರು ಹಾಗೂ ದೇವಾಲಯ ನೌಕರರಿಗೆ ದಸರಾ ಬಂಪರ್ ಕೊಡುಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ