*ಧರ್ಮಸ್ಥಳ ರಕ್ಷಣೆಗೆ ಯಾರೂ ಹಿಂದೇಟು ಹಾಕುವ ಪ್ರಶ್ನೆಯಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ರಕ್ಷಣೆ ವಿಚಾರದಲ್ಲಿ ನಾವು ಸದಾ ಬೆಂಬಲವಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಧರ್ಮಸ್ಥಳ ರಕ್ಷಣೆ ವಿಚಾರ ಬಂದಾಗ ಹಿಂದೇಟು ಹಾಕುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕಾಂಗ್ರೆಸ್ ಮೇಲೆ ಹಿಂದೂ ವಿರೋಧಿ ಎಂದು ಗೂಬೆ ಕುರಿಸುವ ಪ್ರಯತ್ನ ನಡೆಸುತ್ತಿದೆ. ಸೌಜನ್ಯ ಪ್ರಕರಣ ಇದ್ದಿದ್ದು ಬಿಜೆಪಿ ಅಧಿಕಾರದ ಅವಧಿಯಲ್ಲಿ. ದುರುದ್ದೇಶಪೂರ್ವಕವಾಗಿ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ನಡೆಸಿದವರು ಯಾರು ಸಫಲರಾಗಲು ಸಾಧ್ಯವಿಲ್ಲ. SIT ತನಿಖೆಯಲ್ಲಿ ಎಲ್ಲವು ಸ್ಪಸ್ಟವಾಗಿ ಹೊರಬರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
SIT ತನಿಖಾ ರಿಪೋರ್ಟ್ ಬರಬೇಕಿದೆ. ಅನಾಮಿಕ ಕೊಟ್ಟ ದೂರು, ಅದರ ಮೇಲೆ ಉತ್ಖನನ ಮಾಡಿ ಸಿಕ್ಕ ವಸ್ತುಗಳ FSL ಕಳಿಸಲಾಗಿದೆ. ಇವರೆಲ್ಲಾ ಯಾವ ರೀತಿ ನೂರಾರು ಶವಗಳಿವೆ ಅಂತ ದೊಡ್ಡ ಮಟ್ಟದಲ್ಲಿ ಬಿಂಬಿಸಿದ್ರು. ಇದು ಪೂರ್ವ ನಿಯೋಜಿತವಾಗಿತ್ತಾ ಎಂಬುದರ ಬಗ್ಗೆಯೂ ಎಸ್.ಐ.ಟಿ ತನಿಖೆ ಮಾಡ್ತಿದ್ದಾರೆ. ಬಿಜೆಪಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ತಿದೆ. ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ರಾಜಕೀಯ ಲೇಪ ಹಚ್ಚುವ ಪ್ರಯತ್ನ ಮಾಡಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ನಮ್ಮ ಮೇಲೆ ಆರೋಪ ಮಾಡಿ ಕಾಂಗ್ರೆಸ್ ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಬೇಕಿದೆ. ಹಿಂದೂ ಆಗಲು ಬಿಜೆಪಿ ಮೆಂಬರ್ ಶಿಪ್ ಪಡೆಯಬೇಕಿಲ್ಲ. ಕಾಂಗ್ರೆಸ್ ನಲ್ಲಿ ನಾವೆಲ್ಲ ಹಿಂದೂಗಳಿಲ್ಲವೇ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಕೂಡ ಅಪ್ಪಟ ಹಿಂದೂ ಎಂದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಬಗ್ಗೆ ಬಿಜೆಪಿ ವಿರೋಧ ಏಕೆ
ಬಾನು ಮುಷ್ತಾಕ್ ಅವರ ಬಗ್ಗೆ ಬಿಜೆಪಿಗೆ ಏನು ಸಮಸ್ಯೆ.? ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ಯಾಕೆ ವಿರೋಧ ಮಾಡ್ತಿದ್ದಾರೆ. ನಮ್ಮ ರಾಜ್ಯದ ಮಹಿಳೆ, ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಅಂದು ನಿಸಾರ್ ಅಹ್ಮದ್ ಅವರನ್ನು ಒಪ್ಪಿದವರು ಇಂದು ಬಾನು ಮುಸ್ತಾಕ್ ಅವರಿಗೆ ಏಕೆ ವಿರೋಧ. ಇದು ಬಿಜೆಪಿಯವರ ಸಂಕುಚಿತ ಮನೋಭಾವ ತೋರಿಸುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.