ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮೋದಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೊಮ್ಮಾಯಿಯವರ ನೇತೃತ್ವದ ರಾಜ್ಯ ಮತ್ತು ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಗಳು ಸೇರಿಕೊಂಡು ಕಳೆದ 6 ತಿಂಗಳಲ್ಲಿ ನೂರಾರು ಕೋಟಿಯ ಜಾಹಿರಾತುಗಳನ್ನು ಬಿಡುಗಡೆ ಮಾಡಿವೆ.
ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕ ಸ್ವರ್ಗ ಸಮಾನವಾಗಿ ಬಿಡುತ್ತದೆ ಎಂದು ನಂಬಿಸಲು ಭಾಷಣಗಳು ಮತ್ತು ಜಾಹಿರಾತುಗಳ ಆಶ್ರಯ ಪಡೆದಿದ್ದ ಬಿಜೆಪಿಗರು ಎಲ್ಲ ರಂಗದಲ್ಲೂ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ.
ಆದರೂ ಸಹ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ.
ಬೊಮ್ಮಾಯಿಯವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 2022-23 ರಲ್ಲಿ ಬಜೆಟ್‍ನಲ್ಲಿ ಘೋಷಿಸಿದ್ದನ್ನು ಸಾಧಿಸಲು ಇದ್ದ ಅವಕಾಶ ಇದೇ ಮಾರ್ಚ್ 31 ಕ್ಕೆ ಮುಗಿಯಿತು.
ರಾಜ್ಯ ಸರ್ಕಾರದ ಸಾಧನೆಗಳೇನು ಎಂಬುದನ್ನು ಈಗ ಸರ್ಕಾರದ ದಾಖಲೆಗಳೇ ಹೇಳುತ್ತಿವೆ. ಅದರಲ್ಲೂ ಮುಖ್ಯವಾಗಿ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಸೇರಿ ಅನುಷ್ಠಾನ ಮಾಡುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಡಬಲ್ ಎಂಜಿನ್ ಸರ್ಕಾರ ದಯನೀಯವಾಗಿ ಮಣ್ಣುಪಾಲು ಮಾಡಿದೆ.
ಮೋದಿಯವರಾಗಲಿ ಅಥವಾ ಬಿಜೆಪಿಯ ಬೇರೆ ಯಾರೆ ನಾಯಕರಾಗಲಿ ಏನು ಹೇಳುತ್ತಾರೊ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸತ್ಯ ಅಡಗಿರುತ್ತದೆ ಎಂದು ನಾನು ಪದೇ ಪದೇ ಹೇಳಿದ್ದೇನೆ. ಈ ವಿಚಾರವನ್ನು ನಾಡಿನ ಯಾವ ನಾಗರಿಕರು ಬೇಕಿದ್ದರೂ ಸಾವಧಾನದಿಂದ ಪರೀಕ್ಷಿಸಬಹುದಾಗಿದೆ.
ಬಿಜೆಪಿ ಸರ್ಕಾರಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ದ್ರೋಹ ಬಗೆದಿವೆ ಎಂಬುದಕ್ಕೆ ಮಾರ್ಚ್ 31 ರವರೆಗೆ ಬಿಡುಗಡೆ ಮಾಡಿ ಖರ್ಚು ಮಾಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಕುರಿತ ದಾಖಲೆಗಳೆ ಹೇಳತ್ತಿವೆ. ಎರಡೂ ಸರ್ಕಾರಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಖರ್ಚುಮಾಡುತ್ತೇವೆ ಎಂದು ಹೇಳಿದ್ದ ಮೊತ್ತ 47557 ಕೋಟಿ [ಇದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9041 ಕೋಟಿ ರೂಗಳು ಸೇರಿವೆ].
ಇದರಲ್ಲಿ ಮಾರ್ಚ್ 31 ರ ಅಂತ್ಯಕ್ಕೆ ಖರ್ಚು ಮಾಡಿದ್ದ ಮೊತ್ತ 23735 ಕೋಟಿ ರೂ ಮಾತ್ರ. ಹಾಗಾಗಿ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಶೇ.49.9 ರಷ್ಟು ಮಾತ್ರ. ಮಾತಿಗೆ ಮೊದಲು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಅಮಿತ್ ಶಾ ಮತ್ತು ಮೋದಿಯವರನ್ನು ನಾನು ಕರ್ನಾಟಕದ ಜನರ ಪರವಾಗಿ ಕೇಳುತ್ತೇನೆ, ಕಳೆದ ವರ್ಷದ ಬಜೆಟ್‍ನಲ್ಲಿ ರಾಜ್ಯಕ್ಕೆ 21435 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾರ್ಚ್ 31 ಕ್ಕೆ ಬಿಡುಗಡೆ ಮಾಡಿದ ಒಟ್ಟು ಮೊತ್ತ 13339 ಕೋಟಿ.ರೂ ಮಾತ್ರ. ಮೊದಲನೆಯದಾಗಿ ಬಿಡುಗಡೆ ಮಾಡುತ್ತೇವೆಂದು ಹೇಳುವುದೆ ಕಡಿಮೆ. ಹೇಳಿದ ಮೇಲೆ ಬಿಡುಗಡೆ ಮಾಡುವುದು ಇನ್ನೂ ಕಡಿಮೆ. ನಿಮ್ಮ ಈ ಅವಮಾನ ಮತ್ತು ದ್ರೋಹವನ್ನು ಕರ್ನಾಟಕದ ಜನ ಯಾಕೆ ಸಹಿಸಬೇಕು? 4.75 ಲಕ್ಷ ಕೋಟಿ ರೂಗಳಿಗೂ ಹೆಚ್ಚು ತೆರಿಗೆ ಮತ್ತು ಸುಂಕಗಳನ್ನು ನಮ್ಮ ರಾಜ್ಯದ ಜನರಿಂದ ಲೂಟಿ ಹೊಡೆಯುವ ನೀವು ನಮಗೆ ವಾಪಸ್ಸು ಕೊಡುತ್ತಿರುವುದು ಬರೀ ಭಾಷಣ ಮತ್ತು ಸುಳ್ಳು ಜಾಹಿರಾತುಗಳು ಮಾತ್ರ.
ಮನಮೋಹನಸಿಂಗರಿದ್ದಾಗ ಕೇಂದ್ರ ಪುರಸ್ಕøತ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.75 ರಷ್ಟು ಅನುದಾನವನ್ನು ಕೊಡುತ್ತಿತ್ತು. ರಾಜ್ಯ ಸರ್ಕಾರ ಶೇ.25 ರಷ್ಟು ಮ್ಯಾಚಿಂಗ್ ಗ್ರ್ಯಾಂಟ್ ಕೊಡುತ್ತಿತ್ತು ಹಾಗಾಗಿಯೆ ಈ ಯೋಜನೆಗಳಿಗೆ ಕೇಂದ್ರ ಪುರಸ್ಕøತ ಯೋಜನೆಗಳು ಎಂದು ಕರೆಯುವುದು. ಆದರೆ ಮೋದಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ಕೊಡುತ್ತಿದೆ ಕೇಂದ್ರ ಸರ್ಕಾರ ಶೇ.45 ರಷ್ಟು ಕೊಟ್ಟು ಮೋಸ ಮಾಡುತ್ತಿದೆ. ದುಡ್ಡು ರಾಜ್ಯದ ಜನರದ್ದು ಹೆಸರು ಮಾತ್ರ ಮೋದಿ ಸರ್ಕಾರದ್ದು. ಇದಕ್ಕಿಂತ ಬೇರೆ ಮೋಸ ಯಾವುದಾದರೂ ಇದೆಯೆ?
ಕೇಂದ್ರ ಪುರಸ್ಕøತ ಯೋಜನೆಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡುವ ಜವಾಬ್ಧಾರಿ ಹೊತ್ತಿರುವ ಕೇಂದ್ರ ಸಚಿವರುಗಳು ನಮ್ಮ ರಾಜ್ಯದವರೂ ಇಬ್ಬರಿದ್ದಾರೆ. ಒಬ್ಬರು ಸಮಾಜ ಕಲ್ಯಾಣ ಇಲಾಖೆಯನ್ನು ನಿಭಾಯಿಸುವ ಎ.ನಾರಾಯಣಸ್ವಾಮಿಯವರು ಮತ್ತು ಕೃಷಿ ಇಲಾಖೆಯನ್ನು ನೋಡಿಕೊಳ್ಳುವ ಶೋಭಾಕರಂದ್ಲಾಜೆಯವರು. ಈ ಇಬ್ಬರ ಇಲಾಖೆಗಳಲ್ಲಾದರೂ ಗಣನೀಯ ಸಾಧನೆಯೇನಾದರೂ ಆಗಿದೆಯೇ ಎಂದು ನೋಡಿದರೆ ಅದೂ ಇಲ್ಲ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಜನರ ಕಲ್ಯಾಣಗಳ ಬಗ್ಗೆ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿ ಪ್ರಚಾರ ಪಡೆಯುತ್ತದೆ, ಆದರೆ ವಾಸ್ತವಾಂಶ ಹೀಗಿದೆ. ಕೇಂದ್ರ ಸರ್ಕಾರ 2022-23 ಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ ರೂ.597 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾರ್ಚ್ 2023 ರ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ ರೂ.121 ಕೋಟಿ ಮಾತ್ರ. ಅದರಲ್ಲಿ ಪ್ರಧಾನ ಮಂತ್ರಿ ಅಭ್ಯುದಯ ಯೋಜನೆಗೆ (ಪಿ.ಎಂ.ಅಜಯ್) ರೂ.200 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಲಿಲ್ಲ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ರೂ.121 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ಕೇವಲ ರೂ.49 ಕೋಟಿ ಮಾತ್ರ. ಪರಿಶಿಷ್ಟ ಪಂಗಡದ ಪ್ರೀ-ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.16 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಲಿಲ್ಲ. ಅಸ್ಪøಶ್ಯತೆ ನಿವಾರಣೆಗಾಗಿ ರೂ.35 ಕೋಟಿ ಬಿಡುಗಡೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಬಿಡುಗಡೆ ಮಾಡಿದ್ದು ರೂ.8.75 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.32 ರಷ್ಟು ಪ್ರಗತಿಯಾಗಿದೆ.
ಹೀಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣವನ್ನು ಕೇವಲ ಭಾಷಣ ಮತ್ತು ಜಾಹಿರಾತುಗಳ ಮಟ್ಟಕ್ಕೆ ಇಳಿಸಿ, ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬೊಮ್ಮಾಯಿ ಮತ್ತು ಮೋದಿ ಸರ್ಕಾರ ಜನರಿಗೆ ದ್ರೋಹ ಮಾಡಿವೆ.
ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ರೂ.19.25 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.9.38 ಕೋಟಿ ಮಾತ್ರ. ವರ್ಷದ ಕೊನೆಗೆ ಶೇ.13 ರಷ್ಟು ಪ್ರಗತಿಯಾಗಿದೆ.
ಕೃಷಿ ಇಲಾಖೆಯಲ್ಲಿ ರೂ.613 ಕೋಟಿ ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.426 ಕೋಟಿ. ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರೂ.105 ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.73 ಕೋಟಿ ಮಾತ್ರ ಕೊಟ್ಟಿದೆ. ಆದರೆ ಮಾತಿನಲ್ಲಿ ಮಾತ್ರ ಮೀನುಗಾರರು ಮತ್ತು ಪಶು ಸಂಗೋಪನೆ ¨ಗ್ಗೆ ಇನ್ನಿಲ್ಲದಂತೆ ಮಂತ್ರದಲ್ಲೆ ಮಾವಿನಕಾಯಿ ಉದುರಿಸುತ್ತಿದೆ.
ಯುವಕರಿಗೆ ಉದ್ಯೋಗ ನೀಡುವ ಕೌಶಲ್ಯಾಭಿವೃದ್ಧಿ ಇಲಾಖೆಗೆ ರೂ.472 ಕೊಡುತ್ತೇವೆಂದು ಮೋದಿ ಸರ್ಕಾರ ಹೇಳಿತ್ತು. ಆದರೆ ಮಾರ್ಚ್ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಮಾತ್ರ ರೂ.227 ಕೋಟಿ ಮಾತ್ರ.
ಅರಣ್ಯ ಮತ್ತು ಪರಿಸರ ಇಲಾಖೆಗೆ ರೂ.80 ಕೋಟಿ ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ ರೂ.25 ಕೋಟಿ ಮಾತ್ರ. ಆದರೆ ಇದೆ ಏಪ್ರಿಲ್-9 ರಂದು ಬಂಡೀಪುರದ ಸಫಾರಿಗೆ ಬರುತ್ತೇನೆಂದು ಹೇಳಿದ್ದಾರೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಬಂಡೀಪುರದ ಅರಣ್ಯವನ್ನು ಅದಾನಿ-ಅಂಬಾನಿಗಳಿಗೆ ಕೊಡದಿದ್ದರೆ ಸಾಕು. ಆನೆ, ಚಿರತೆಗಳ ಬಗ್ಗೆ ಮತ್ತು ಮರಗಳ ಬಗ್ಗೆ ಕಾಳಜಿ ತೋರಿಸುವ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಸ್ಯಾಂಕಿ ಕೆರೆ ಮೇಲಿನ ಮರಗಳನ್ನು ಕಡಿಯಬಾರದೆಂದು ಪ್ರತಿಭಟನೆ ಮಾಡಿದ್ದ ಪರಿಸರವಾದಿಗಳ ಮೇಲೆ ಕ್ರಿಮಿನಲ್ ಕೇಸ್‍ಗಳನ್ನು ದಾಖಲಿಸಿದ್ದಾರೆ. ಇದನ್ನೆ ನಾನು ಹೇಳುವುದು ಬಿಜೆಪಿ ಸರ್ಕಾರ ಮಾಡುವುದೊಂದು, ಹೇಳುವುದೊಂದು.
ಆರೋಗ್ಯ ಇಲಾಖೆಗೆ ರೂ.2169 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ರೂ.699 ಕೋಟಿಗಳು ಮಾತ್ರ.
ಅಲ್ಪಸಂಖ್ಯಾತರ ಇಲಾಖೆಗೆ ರೂ.300 ಕೋಟಿಗಳನ್ನು ನೀಡುತ್ತೇನೆಂದು ಹೇಳಿತ್ತು. ಆದರೆ ರೂ.75 ಕೋಟಿಗಳನ್ನು ಮಾತ್ರ ನೀಡಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ರೂ.9217 ಕೋಟಿಗಳನ್ನು ಕೊಡುತ್ತೇನೆಂದು ಹೇಳಿತ್ತು. ಆದರೆ ಕೊಟ್ಟಿದ್ದು ರೂ.4709 ಕೋಟಿ ಮಾತ್ರ.
ನಗರಾಭಿವೃದ್ಧಿ ಇಲಾಖೆಗೆ ರೂ.1710.55 ಕೋಟಿಗಳನ್ನು ಕೊಡುವುದಾಗಿ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು ರೂ.692 ಕೋಟಿಗಳನ್ನು ಮಾತ್ರ.
ಬೆಂಗಳೂರು ಒಂದರಿಂದಲೇ ರೂ.10 ಲಕ್ಷ ಕೋಟಿಗೂ ಹೆಚ್ಚು ರಫ್ತು ಮಾಡುವ ಕೇಂದ್ರ ಸರ್ಕಾರ ತನ್ನ ತೆರಿಗೆಯಲ್ಲಿ ಗಣನೀಯ ಸಂಪತ್ತನ್ನು ಬೆಂಗಳೂರಿನಿಂದ ದೋಚಿಕೊಳ್ಳುವ ಮೋದಿ ಸರ್ಕಾರ ನಗರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದೆ ಬೆಂಗಳೂರಿಗರನ್ನು ಮತ್ತು ನಗರಗಳ ಪ್ರಜೆಗಳನ್ನು ಕೇವಲ ಮತ ಹಾಕುವ ಯಂತ್ರಗಳಂತೆ ಭಾವಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಆದ್ದರಿಂದ ಕೇಂದ್ರ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಇನ್ನು ಮುಂದಾದರೂ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿ ರಾಜ್ಯದ ಜನರನ್ನು ಅವಮಾನ ಮಾಡುವುದನ್ನು ಬಿಟ್ಟು ತಾವು ಕರ್ನಾಟಕದ ಜನರಿಗೆ ಮಾಡಿರುವ ದ್ರೋಹಕ್ಕೆ ಕ್ಷಮೆ ಯಾಚಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಹಾಗೆಯೆ ತಮಗೆ ಸಿಕ್ಕ ಅಧಿಕಾರವನ್ನು ಕೇವಲ ಭ್ರಷ್ಟಾಚಾರಕ್ಕೆ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಜನರ ಕಲ್ಯಾಣಕ್ಕೆ ಮಣ್ಣೆರಚಿ ಅವಮಾನ ಮಾಡಿದೆ.
ಆದ್ದರಿಂದ ತಾವು ಅಧಿಕಾರ ನಡೆಸಲು ಅಸಮರ್ಥರು ಎಂಬುದನ್ನು ರಾಜ್ಯ ಸರ್ಕಾರದ ಈ ದಾಖಲೆಗಳೆ ಹೇಳುತ್ತಿವೆ. ರಾಜ್ಯದ ಜನರ ಪರವಾಗಿ ಹೋರಾಟ ನಡೆಸದ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರುಗಳು ತಾವು ಯಾವ ರೀತಿಯಲ್ಲೂ ಕೆಲಸಕ್ಕೆ ಬಾರದವರು ಎಂಬುದನ್ನೂ ಸಹ ಈ ಅಂಕಿ-ಅಂಶಗಳು ಸಾರಿ ಸಾರಿ ಹೇಳುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ