
ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಕ್ವಾಟ್ರಸ್ ಗೆ ನುಗ್ಗಿದ ಕಳ್ಳರು ಪೊಲೀಸ್ ಸಿಬ್ಬಂದಿಯ ಮನೆಯಲ್ಲಿ ಲಾಕರ್ ಮೂರಿದು ಲಕ್ಷಾಂತರ ಮೌಲದ್ಯ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಬೆಂಗಳೂರು ನಗರದ ಜಾಲಹಳ್ಳಿ ಹೆಚ್‌ಎಟಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಶ್ರೀಧರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಶ್ರೀಧರ್ ಎಂಬುವವರು ಕಾನ್‌ಸ್ಟೇಬಲ್ ಆಗಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಧರ್ ಅವರ ಪತ್ನಿಯ ಕುಟುಂಬಸ್ಥರು ಮುರುಗೇಶ್ ಪಾಳ್ಯದಲ್ಲಿ ವಾಸವಾಗಿದ್ದರು. ಈ ಹಿನ್ನೆಲೆ ಶ್ರೀಧರ್ ಹಾಗೂ ಅವರ ಪತ್ನಿ ಅಲ್ಲಿಗೆ ತೆರಳಿದ್ದರು. ಈ ವೇಳೆ ಜಾಲಹಳ್ಳಿಯಲ್ಲಿರುವ ಕ್ವಾಟರ್ಸ್ನಲ್ಲಿ ಕಳ್ಳತನ ನಡೆದಿದೆ.
ಮನೆಯಲ್ಲಿದ್ದ ನೆಕ್ಲೆಸ್, ಕಿವಿ ಓಲೆ, ಬೆಳ್ಳಿ ಹಾಗೂ ರೇಷ್ಮೆ ಸೀರೆ ಕಳ್ಳತನವಾಗಿದ್ದು, ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


