
ಎಂ.ಕೆ.ಹೆಗಡೆ, ಬೆಳಗಾವಿ – ಕೆಲವರಿಗೆ ಕಾನೂನು ಉಲ್ಲಂಘಿಸುವುದೇ ಫ್ಯಾಶನ್. ಪೊಲೀಸರ ಕಣ್ಣು ತಪ್ಪಿಸಿ ಓಡಾಡಿ ಬಂದೆ ಎಂದು ಏನೋ ಸಾಧನೆ ಮಾಡಿದೆ ಎನ್ನುವಂತೆ ಜಂಬ ಕೊಚ್ಚಿಕೊಳ್ಳುತ್ತಾರೆ.
ಎಂತಹ ನಿರ್ಲಕ್ಷ್ಯ, ಎಂತಹ ಬೇಜವಾಬ್ದಾರಿ, ಎಂತಹ ದುರಹಂಕಾರ…
ಈ ಲಾಕ್ ಡೌನ್ ಅರ್ಥವೇ ಆಗಿಲ್ಲ ಎನಿಸುತ್ತಿದೆ ಬಹಳಷ್ಟು ಜನರಿಗೆ. ಬೇರೆ ಸಂದರ್ಭದ ಕರ್ಫ್ಯೂಗಳಂತೆಯೇ ಇದನ್ನೂ ಪರಿಗಣಿಸುತ್ತಿರುವಂತಿದೆ. ಯಾವ ಕಾರಣದಿಂದ ಈಗ ಲಾಕ್ ಡೌನ್ ಮಾಡಲಾಗಿದೆ? ಕೊರೋನಾ ವೈರಸ್ ಯಾವ ರೀತಿ ಬರಬಹುದು? ಒಮ್ಮೆ ಕೈ ಮೀರಿದರೆ ಆಗುವ ಅನಾಹುತ ಎಂತಹುದು ಎನ್ನುವ ಸಾಮಾನ್ಯ ಜ್ಞಾನವೂ ಕೆಲವರಿಗಿಲ್ಲ. ಕೆಲವರೂ ಏನೂ ಕೆಲಸವೇ ಇಲ್ಲದವರೂ ಬೆಳಗ್ಗೆ, ಸಂಜೆ ನಗರ ಸುತ್ತಾಡಿ ಬರುತ್ತಿದ್ದಾರೆ. ಹಾಗಂತ ಇವರೆಲ್ಲ ಅಶಿಕ್ಷಿತರಲ್ಲ. ತುಂಬಾ ಓದಿದವರೇ ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೆ.

ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳ ನೆಪದಲ್ಲಿ ಜನ ಬೇಕಾ ಬಿಟ್ಟಿ ವರ್ತಿಸುತ್ತಿದ್ದಾರೆ. ಇಡೀ ದೇಶವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ.
ಕೆಲವು ವಸ್ತುಗಳನ್ನು ಈಗ ಕೊಳ್ಳದಿದ್ದರೆ ಏನೂ ಆಗುವುದಿಲ್ಲ. ಕೆಲವರು ಸೌಂದರ್ಯವರ್ಧಕಗಳನ್ನೂ ಕೊಳ್ಳಲು ಅಂಗಡಿಗೆ ಹೋಗುತ್ತಿದ್ದಾರೆ. ಮನೆಯಲ್ಲೇ ಇದ್ದರೆ ನಿಮ್ಮ ಸೌಂದರ್ಯ ನೋಡಲು ಯಾರೂ ಬರುವುದಿಲ್ಲ. ಲಾಕ್ ಡೌನ್ ಮುಗಿದು ಎಲ್ಲವೂ ಸರಾಗವಾದ ನಂತರ ಬೇಕಾದಷ್ಟು ಸೌಂದರ್ಯ ಮಾಡಿಕೊಳ್ಳಿ.
ಕೆಲವರು ಮನೆಯಲ್ಲಿ ಬೋರ್ ಆಗುತ್ತಿದೆ, ಒಂದು ರೌಂಡ್ ವಾಕ್ ಹೋಗಿ ಬರುತ್ತೇನೆ ಎಂದು ರಸ್ತೆಗಿಳಿಯುತ್ತಾರೆ. ಈ ಜನ ಹಿಂದೆಂದೂ ವಾಕಿಂಗ್ ಮಾಡಿದವರಲ್ಲ. ಕಾರಣವೇ ಇಲ್ಲದೆ ರಸ್ತೆಗಿಳಿಯುವವರನ್ನು ಕನಿಷ್ಟ ಒಂದೊಂದು ದಿನವಾದರೂ ಕಂಬಿ ಹಿಂದೆ ಹಾಕಬೇಕು.
ಪ್ರತಿ ಬಾರಿ ಮನೆಯಿಂದ ಹೊರಬೀಳುವ ಮುನ್ನ 10 ಬಾರಿ ಯೋಚಿಸಿ, ಯಾವುದೇ ವಸ್ತು ಖರೀದಿಸಬೇಕೆನಿಸಿದರೂ ಖರೀದಿ ಮುಂದೂಡಲು ಪ್ರಯತ್ನಿಸಿ. ಒಂದು ವಸ್ತುವಿಗಾಗಿ ಹೊರಗೆ ಹೋಗುವ ಬದಲು ಪಟ್ಟಿ ಮಾಡಿಟ್ಟುಕೊಂಡು 10 ವಸ್ತುಗಳಾದ ನಂತರ ಒಮ್ಮೆ ಹತ್ತಿರದ ಅಂಗಡಿಗೆ ಹೋಗಿ ಖರೀದಿಸಿ ನೇರವಾಗಿ ವಾಪಸ್ ಬನ್ನಿ. ಯಾರೊಂದಿಗೂ ಹತ್ತಿರ ನಿಂತು ಮಾತನಾಡಬೇಡಿ. ಎದುರು ಸಿಕ್ಕಿದರೂ ನಂತರ ಫೋನ್ ಮಾಡುತ್ತೇನೆ ಎಂದು ಹೇಳಿ ಬನ್ನಿ.
ಕೆಲವರು ಕಾರಿನಲ್ಲಿ 4-5 ಜನ ಹರಟೆ ಹೊಡೆಯತ್ತ ಹೋಗುತ್ತಿದ್ದಾರೆ. ಸಮ್ಮನೆ ಬೈಕ್ ನಲ್ಲಿ ರೌಂಡ್ ಹಾಕುತ್ತಿದ್ದಾರೆ. ಪೊಲೀಸರು ಹಿಡಿದರೆ ಇನ್ ಫ್ಲ್ಯೂಯೆನ್ಸ್ ಮಾಡಲು ಪ್ರಯತ್ನಿಸುತ್ತಾರೆ. ವಾದ ಮಾಡುತ್ತಾರೆ.
ಮಾ.22ರಂದು ಪ್ರಧಾನ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಕರೆ ನೀಡಿದ್ದರು. ದಿನವಿಡೀ ಒಂದಿಷ್ಟು ಯಶಸ್ವಿಯಾಯಿತು. ಆದರೆ ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವುದನ್ನು ಬಿಟ್ಟು ನಮ್ಮ ಜನಪ್ರತಿನಿಧಿಗಳೂ, ಗಣ್ಯರೂ, ಬುದ್ದಿ ಜೀವಿಗಳೂ ಸೇರಿದಂತೆ ಬಹುತೇಕರು ರಸ್ತೆಗಿಳಿದು ಗುಂಪಿನಲ್ಲಿ ಚಪ್ಪಾಳೆ ತಟ್ಟಿ ಮಾಧ್ಯಮಗಳಿಗೆ ಫೋಟೋ ಕಳಿಸಿದರು. ಇಡೀ ದಿನ ಜನತಾ ಕರ್ಫ್ಯೂ ಮಾಡಿ ಏನು ಪ್ರಯೋಜನವಾಯಿತು?
ಪ್ರತಿಯೊಬ್ಬರೂ ಸ್ವಯಂ ನಿರ್ಧಾರಕ್ಕೆ ಬಂದರೆ, ಸ್ವಯಂ ಪ್ರತಿಜ್ಞೆ ಮಾಡಿದರೆ ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಗೆ ಬರಲು ಸಾಧ್ಯ. ಏಪ್ರಿಲ್ 14ರ ವರೆಗೆ, ಅಗತ್ಯವಾದರೆ ಇನ್ನೂ ಒಂದು ವಾರ ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ನಾನು ಮನೆಯಿಂದ ಹೊರಗೆ ಹೋಗುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಿ. ಪ್ರಸ್ತುತ ಸಂಕಷ್ಟದಿಂದ ನೀವೂ ಪಾರಾಗಿ, ದೇಶವನ್ನೂ ಪಾರು ಮಾಡಿ. ಇಷ್ಟೂ ಮಾಡಲಾಗದಿದ್ದರೆ ನಿಮ್ಮಂತವರು ಈ ಸಮಾಜದಲ್ಲಿ ಬದುಕಿರಲಿಕ್ಕೂ ನಾಲಾಯಕ್.
(ಪ್ರಗತಿವಾಹಿನಿ ಸುದ್ದಿಗಳನ್ನು ಹೆಚ್ಚು ಹೆಚ್ಚು ಜನರಿಗೆ, ಬೇರೆ ಬೇರೆ ಗ್ರುಪ್ ಗಳಿಗೆ ಕಳಿಸಿ)
ನಾಳೆಯಿಂದ ಬೆಳಗಾವಿಯಲ್ಲಿ ಇನ್ನಷ್ಟು ಲಾಠಿ -Be careful
ಕರ್ನಾಟಕದಲ್ಲಿ 3ನೇ ಹಂತ ತಲುಪಿದೆಯೇ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ