Latest

ಸರಕಾರ ರೈತರಿಗೆ ದೊಡ್ಡ ಮೋಸ, ವಂಚನೆ ಮಾಡುವ ಕಾಯ್ದೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಈ ತಿದ್ದುಪಡಿ ರೈತರಿಗೆ ದೊಡ್ಡ ಆಘಾತವನ್ನುಂಟುಮಾಡಿದ್ದು, ಶ್ರೀಮಂತು ವಾಮಮಾರ್ಗದಿಂದ ರೈತರಿಗೆ ಆಮಿಷವೊಡ್ಡಿ ಜಮೀನು ಖರೀದಿಸಿ, ರೈತರನ್ನು ನಿರ್ಗತಿಕರನ್ನಾಗಿ ಮಾಡಲು ಅವಕಾಶವಾಗುತ್ತದೆ ಎಂದು ಹೊರಟ್ಟಿ ತಿಳಿಸಿದ್ದಾರೆ. ಹೊರಟ್ಟಿ ಬರೆದ ಪತ್ರದ ಪೂರ್ಣ ವಿವರ ಹೀಗಿದೆ –

Related Articles

ಈ ಮೊದಲು ಕೃಷಿಕನಲ್ಲದವನು ಯಾವದೇ ವ್ಯಕ್ತಿ ಕೃಷಿ ಜಮೀನು ಖರೀದಿಸಲು ಅವಕಾಶವಿರಲಿಲ್ಲ. ಇದನ್ನು ಸರಳೀಕರಿಸಿ ಉಚ್ಛ ನ್ಯಾಯಾಲಯದ ನೆಪವೊಡ್ಡಿ ಈ ತಿದ್ದುಪಡಿ ನಮ್ಮ ರಾಜ್ಯಕ್ಕೆ ಅದರಲ್ಲಿಯೂ ರೈತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ರೀತಿ ಕಾನೂನಿನಿಂದ ಶ್ರೀಮಂತರು ವಾಮ ಮಾರ್ಗದಿಂದ ಗಳಿಸಿದ ಹಣವನ್ನು ರೈತರಿಗೆ ಆಮಿಶವೊಡ್ಡಿ ಎಷ್ಟು ಬೇಕಾದಷ್ಟು ಭೂಮಿ ಖರೀದಿಸುತ್ತಾರೆ. ಸಣ್ಣ ಸಣ್ಣ ರೈತರು ಹಣದಾಸೆಗಾಗಿ ತಮ್ಮ ಜಮೀನನ್ನು ಮಾರಿಕೊಂಡು ನಂತರ ನಿರ್ಗತಿಕರಾಗುತ್ತಾರೆ. ಈ ಮೊದಲು ಇಂತಹ ಅನೇಕ ಸಂದರ್ಭಗಳು ಬಂದಾಗ ನಾನು ಹಾಗೂ ಕೆಲವರು ಇದನ್ನು ವಿರೋಧಿಸಿದ್ದೆವು. ದೇಶದ ಯಾವ ರಾಜ್ಯದಲ್ಲಿಯೂ ನನಗೆ ತಿಳಿದಂತೆ ಈ ತರಹದ ಕಾನೂನು ಅಸ್ತಿತ್ವದಲ್ಲಿಲ್ಲ. ಅದು ನಿಮ್ಮ ತಿದ್ದುಪಡಿಯಲ್ಲಿಯೇ ವ್ಯಾಖ್ಯಾನಿಸುತ್ತದೆ. ಯಾವ ರಾಜ್ಯದಲ್ಲಿಯೂ ಅಸ್ತಿತ್ವದಲ್ಲಿ ಇಲ್ಲದ ಕಾನೂನನ್ನು ನಮ್ಮ ರಾಜ್ಯದಲ್ಲಿ ತಂದು ಈಗ ಕೃಷಿ ಭೂಮಿಯು ಕೃಷಿಕರನ್ನು ಬಿಟ್ಟು ಉಳ್ಳವರ ಸೊತ್ತಾಗುತ್ತದೆ. ಈಗ ರೈತರಿಗೆ ಹೆಚ್ಚು ಹಣದ ಆಸೆ ಹುಟ್ಟಿಸಿ ಹೆಚ್ಚಿಗೆ ಬೆಲೆ ಬಂದರೂ ನಿಧಾನವಾಗಿ ರೈತನು ಸಂಪೂರ್ಣವಾಗಿ ಹಾಳಾಗಿ ನಿರ್ಗತಿಕನಾಗುತ್ತಾನೆ. ಅಲ್ಲದೇ ರೀಯಲ್ ಎಸ್ಟೇಟ್ ಮಾಡುವವರು ಕಪ್ಪು ಹಣ ಇದ್ದವರು ಕೃಷಿ ಭೂಮಿಯನ್ನು ಪಡೆದು ಸೈಟ್ ಮಾಡುವದು ಮತ್ತಿತರ ಕೆಲಸಕ್ಕೆ ಉಪಯೋಗ ಮಾಡಿ ಬರಬರುತ್ತಾ ರೈತನು ಸಂಕಷ್ಟಕ್ಕೆ ಸಿಲುಕಿ ಮುಂದೆ ದವಸಧಾನ್ಯ ತರಲು ಬೇರೆ ರಾಜ್ಯಗಳ ಮೇಲೆ ಅವಲಂಬಿಸಬೇಕಾಗುತ್ತದೆ. ಸರಕಾರ ರೈತರಿಗೆ ದೊಡ್ಡದಾದಂತಹ ಮೋಸ, ವಂಚನೆ ಮಾಡುವ ಕಾಯ್ದೆಯಾಗಿದೆ. ಯಾರು ಬೇಕಾದರೂ ಜಮೀನು ಖರೀದಿಸಿದರೆ ಅವರಿಗೆ ಕೃಷಿ ಮಾಡಲು ಸಾಧ್ಯವೆಂಬುದನ್ನು ನೀವು ತಿಳಿದುಕೊಂಡಿದ್ದೀರಾ?

ಈ ಕಾಯ್ದೆಯಿಂದ ಒಂದು ಕುಟುಂಬದಲ್ಲಿ ೫ ಜನ ಇದ್ದರೆ ೧೦೮ ಎಕರೆ ಜಮೀನು ಖರೀದಿಸಬಹುದಾಗಿದೆ. ಅಂದರೆ ಎಲ್ಲ ವ್ಯಾಪಾರಸ್ಥರು ಭೂಮಿಯನ್ನು ಖರೀದಿ ಮಾಡಿ ಹೆಚ್ಚಿಗೆ ವ್ಯಾಪಾರ ಮಾಡಿ ಹಣ ಗಳಿಸುವ ದಂಧೆಯಾಗುತ್ತದೆ. ಯಾರು ವ್ಯವಸಾಯ ಮಾಡುತ್ತಾರೋ ಅವರ ಬಳಿ ಭೂಮಿ ಇರಬಾರದೆಂದೂ ಹಣ ಇದ್ದವರ ಕೈಯಲ್ಲಿ ಕೃಷಿ ಭೂಮಿ ಇರಬೇಕೆಂದು ಸರಕಾರದ ನಿಲುವು ಮೂರ್ಖತನದಿಂದ ಕೂಡಿದ್ದು. ಈ ಕಾನೂನು ತರುವುದಕ್ಕಿಂತ ಮೊದಲು ಎಲ್ಲ ರೈತ ಸಂಘದ ಮುಖ್ಯಸ್ಥರನ್ನು ಹಾಗೂ ರೈತರನ್ನು ಕರೆದು ಚರ್ಚೆ ಮಾಡಬಹುದಾಗಿತ್ತು. ಈ ಕಾನೂನನ್ನು ಜಾರಿಗೆ ತಂದೇ ತೀರುತ್ತೇವೆಂದು ನಿಮ್ಮ ವಾದವಾಗಿದ್ದರೆ ರಾಜ್ಯದ ತುಂಬ ಎಲ್ಲ ರೈತರು ಬಂಡಾಯ ಏಳುವ ಕಾಲ ಸನ್ನಿಹಿತವಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.

ಯಡಿಯೂರಪ್ಪನವರೆ, ತಾವು ರೈತ ನಾಯಕರು. ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಆದರೆ ಈಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ. ನಿಮ್ಮಂಥವರು ಮುಖ್ಯ ಮಂತ್ರಿಗಳಾದ ಸಂದರ್ಭದಲ್ಲಿ ಇಂತಹ ಕರಾಳ ಶಾಸನವನ್ನು ತರುವುದು ಅವಿವೇಕದ ಪರಮಾವಧಿ.

ಈ ಮೊದಲು ಉದ್ಯಮಿಗಳಿಗೆ ಕಾರಖಾನೆ ಮುಂತಾದವುಗಳಿಗೆ ಕೃಷಿ ಜಮೀನು ಬೇಕಾದಲ್ಲಿ ಕೆ.ಐ.ಎ.ಡಿ.ಬಿ. ಗೆ ಅನುಮತಿ ಕೊಡಲು ಕಾನೂನಿನಲ್ಲಿ ಅವಕಾಶವಿತ್ತು. ಈ ಪರಿಸ್ಥಿತಿ ಮುಂದುವರೆದಲ್ಲಿ ಯಾರು ಬೇಕಾದರೂ ಎಷ್ಟು ಬೇಕಾದಷ್ಟು ಭೂಮಿಯನ್ನು ಖರೀದಿಸಿ ಅದನ್ನು ಕೃಷಿಯೇತರ ಚಟುವಟಿಕೆಗೆ ಉಪಯೋಗಿಸದೆ ಹಾಗೇ ಇಟ್ಟುಕೊಂಡು ಮುಂದೆ ದುಬಾರಿ ಬೆಲೆಗೆ ಮಾರಲೂಬಹುದು. ಈ ರೀತಿ ಕೃಷಿ ಚಟುವಟಿಕೆಯನ್ನು ಮಾಡದೇ ಯಾರು ರೈತರಲ್ಲದವರು ಒಕ್ಕಲುತನದ ಗಂಧ ಗಾಳಿ ಗೊತ್ತಿಲ್ಲದವರು ನಾಡಿನ ಜನರಿಗೆ ಯಾವ ರೀತಿಯಿಂದ ಅನ್ನವನ್ನು ಕೊಡಬಹುದು. ಅನ್ನ ಕೊಡುವ ರೈತನ ಬಾಯಲ್ಲಿ ಮಣ್ಣು ಹಾಕಿ ಇಂತಹ ಕೆಟ್ಟ ಕಾನೂನನ್ನು ತರುವುದು ಸೂಕ್ತವಲ್ಲ. ಉಳಿಮೆಗಾಗಿ ಗೇಣಿ ದಾರನಿಗೆ ನೀಡಿರುವ ಜಮೀನಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ಒಂದುಗೂಡಿಸಿ ಭೂ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಅದರಲ್ಲಿ ಸ್ವತಃ ಯಾರು ದುಡಿಮೆ ಮಾಡುತ್ತಾರೋ ಅವರಿಗೆ ರಕ್ಷಣೆ ಕೊಡುವಂತಹದು ಕಾನೂನಿನಲ್ಲಿತ್ತು ಹಾಗೂ ಉಳುಮೆ ಮಾಡದೇ ಕೇವಲ ಕಂದಾಯ ದಾಖಲೆಗಳಲ್ಲಿ ಜಮೀನು ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಉಳುಮೆ ಮಾಡುವವರಿಗೆ ಆ ಜಮೀನನ್ನು ಮಂಜೂರು ಮಾಡಲಾಗುತ್ತಿತ್ತು. ಆದರೆ ಇದರಿಂದ ಆಯ್.ಟಿ., ಬಿ.ಟಿ. ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭವಾಗುತ್ತದೆ. ಕೃಷಿಯನ್ನು ನಂಬಿಕೊಂಡ ರೈತನು ಇನ್ನಷ್ಟು ಆತ್ಮಹತ್ಯೆ ಮಾಡಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡುತ್ತಿದ್ದೀರಿ. ನಾನು ಅನೇಕ ಕಡೆಗಳಲ್ಲಿ ಮುಳುಗಡೆ ಪ್ರದೇಶವನ್ನು ನೋಡಿದ್ದೇನೆ. ಅಲ್ಲಿ ಮುಳುಗಡೆ ಆದಂತಹ ಜಮೀನಿಗೆ ಹಣ ಪಡೆದ ರೈತರು ೪-೫ ವರ್ಷಗಳಲ್ಲಿ ಆ ಹಣವನ್ನು ದುಂದು ವೆಚ್ಚ ಮಾಡಿ ಕೂಲಿ ಕೆಲಸಕ್ಕೆ ಹೋದಂತಹ ಉದಾಹರಣೆಗಳು ನನ್ನ ಕಣ್ಣ ಮುಂದೆ ಇವೆ. ಇದೊಂದು ಅಪಾಯಕಾರಿ ಕಾಯ್ದೆ ತಿದ್ದುಪಡಿ ಆದರೆ ರೈತರ ಜಮೀನನ್ನು ಹೆಚ್ಚು ಹಣ ಕೊಟ್ಟು ಆಮಿಷವೊಡ್ಡಿ ರೈತರನ್ನು ನಿರ್ಗತಿಕರನ್ನಾಗಿ ಮಾಡಲಾಗುತ್ತದೆ. ಈ ಪರಿಸ್ಥಿತಿ ಮುಂದೆ ಭೂರಹಿತ ಕಾರ್ಮಿಕರನ್ನು ಹುಟ್ಟಿಸುವಂತಹ ಫ್ಯಾಕ್ಟರಿಗಳಾಗುತ್ತವೆ. ಈ ಕೃಷಿ ಭೂಮಿಯನ್ನು ನಗರ ಪ್ರದೇಶದಲ್ಲಿಯ ಬಂಡವಾಳಶಾಹಿಗಳಿಗೆ ರೆಡ್ ಕಾರ್ಪೆಟ್ ಹಾಸಿದಂತಾಗುತ್ತದೆ. ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ಜನರು ಅನ್ನದ ಬದಲು ಮಣ್ಣನ್ನು ತಿನ್ನಬೇಕಾಗುತ್ತದೆ. ಇದರಿಂದ ಎಲ್ಲಿ ಬೇಕಾದಲ್ಲಿ ರಿಸಾರ್ಟ್‌ಗಳು ಹಾಗೂ ೫ ಸ್ಟಾರ್ ಹೋಟೆಲ್‌ಗಳ ಕಲ್ಚರಗಳು ಜಾಸ್ತಿಯಾಗುತ್ತವೆ.

ಯಡಿಯೂರಪ್ಪನವರೆ, ತಾವು ರೈತ ನಾಯಕರು. ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಆದರೆ ಈಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ. ಅನೇಕ ರೈತರು ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇದ್ದ ಬಿದ್ದ ಜಮೀನನ್ನು ಮಾರಿ ದುಡ್ಡಿಗೆ ಆಕರ್ಷಿತರಾಗಿ ಇನ್ನಷ್ಟು ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ದಯಮಾಡಿ ರೈತರ ಮುಖವನ್ನು ಒಂದು ಸಾರಿ ತಮ್ಮ ಎದುರಿಗೆ ತಂದುಕೊಂಡು ಅವನ ಮತ್ತು ಅವನ ಕುಟುಂಬದ ನಿಜವಾದ ಪರಿಸ್ಥಿತಿಯನ್ನು ಒಮ್ಮೆ ನೋಡಿರಿ. ದಯಮಾಡಿ ಇದನ್ನು ಸುಗ್ರೀವಾಜ್ಞೆ ಮೂಲಕ ತರುವ ಪ್ರಯತ್ನ ಮಾಡಬೇಡಿರೆಂದು ನಿಮಗೆ ಈ ಮೂಲಕ ಒತ್ತಾಯಿಸುತ್ತೇನೆ. ಸರಕಾರದಲ್ಲಿರುವ ನಿಮ್ಮ ಕೆಲವು ಸಚಿವರು ಈ ಕಾಯ್ದೆಯಿಂದ ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಲೆಂದೆ ತಿದ್ದುಪಡಿ ತಂದಿರುತ್ತೇವೆನ್ನುತ್ತಾರೆ. ಐ.ಟಿ. ಬಿ.ಟಿ. ಯವರು ಕೃಷಿ ಮಾಡುತ್ತಾರೆಂದು ಕೆಲವರು ಹೇಳುತ್ತಾರೆ. ಕೃಷಿ ಮಾಡುವದು ಕಂಪ್ಯೂಟರ್ ನಲ್ಲಿ ಮಾಡುವ ಕೆಲಸವಲ್ಲ. ಅಂತಹವರು ಕೃಷಿ ಮಾಡುವದು ಪುಸ್ತಕ ಓದಿ ಅಡುಗೆ ಮಾಡಿದಂತೆ. ನಿಮ್ಮಂಥವರು ಮುಖ್ಯ ಮಂತ್ರಿಗಳಾದ ಸಂದರ್ಭದಲ್ಲಿ ಇಂತಹ ಕರಾಳ ಶಾಸನವನ್ನು ತರುವದು ಅವಿವೇಕದ ಪರಮಾವಧಿ. ಕೇಂದ್ರ ಸರಕಾರ ಮತ್ತು ನೀವು ಉದ್ದಿಮೆದಾರರ ಕೈಗೊಂಬೆಯಾಗಿ ವರ್ತಿಸುತ್ತೀರಿ ಎಂಬ ಮಾತು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದ್ದರಿಂದ ತಕ್ಷಣ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ. ಅಧಿವೇಶನ ಬರುವವರೆಗೆ ನೀವು ಸುಗ್ರೀವಾಜ್ಞೆ ಹೊರಡಿಸಬಾರದೆಂದು ಈ ಮೂಲಕ ವಿನಂತಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button