ಬೇರೆ ಗ್ರಾಮದಿಂದ ಬಂದು ನೆಲೆಸುವವರನ್ನೂ ಗುರುತಿಸಬೇಕು – ಜಿಲ್ಲಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಕಾರವಾರ – ಅನ್‌ಲಾಕ್ ಅವಧಿಯಲ್ಲಿಯೂ ಕೂಡ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ಕೆ., ಅವರು ಸೂಚಿಸಿದರು.

ಮಂಗಳವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿ, ಅನ್‌ಲಾಕ್ ಅವಧಿಯಲ್ಲಿ ಹೊರ ಜಿಲ್ಲೆ, ರಾಜ್ಯ, ದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿಯೂ ಕೂಡ ಪರಿಣಾಮಕಾರಿಯಾದ ಸಮೀಕ್ಷೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಬೇರೆಡೆಯಿಂದ ಬರುವವರ ಮೇಲೆ ನಿಗಾ ಇಟ್ಟು ಗುಣಮಟ್ಟದ ಸಮೀಕ್ಷೆ ನಡೆಸಬೇಕು ಹಾಗೂ ಅದೇ ಗ್ರಾಮದ ಜನತೆ ಬಿಟ್ಟು ಬೇರೆಯವರು ಅಲ್ಲಿ ನೆಲಸಲು ಬಂದರೆ ಅಂತವರನ್ನು ಗುರುತಿಸುವ ಕಾರ್ಯ ಮಾಡಬೇಕು ಹಾಗೂ ಅಂತವರಿಗೆ ಕೋವಿಡ್-೧೯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಸ್ಥಳೀಯ ಜನರಲ್ಲಿ ಜಾಗೃತೆ ಮೂಡಿಸುವುದು, ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೋಗ ಲಕ್ಷಣ ಗುರುತಿಸುವ ಚಾಣಾಕ್ಷತೆಯನ್ನು ಮೈಗೂಡಿಸಿಕೊಳ್ಳಬೇಕು, ಕೋವಿಡ್‌ನೊಂದಿಗೆ ಜೀವನ ಸಾಗಬೇಕಾಗಿರುವುದರಿಂದ ಸಮುದಾಯದವರೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತ ಅರಿವು ಮೂಡಿಸುವ ಕಾರ್ಯ ಆಗಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ಕೆ, ಅವರು ಹೇಳಿದರು.

ಈ ಮಳೆಗಾಲದ ಅವಧಿಯಲ್ಲಿ ಕೆಮ್ಮು, ಜ್ವರ, ಶೀತ ಹೆಚ್ಚಿನ ಜನರಲ್ಲಿ ಕಂಡುಬರುವುದರಿಂದ ಸಮೀಕ್ಷಾ ಕಾರ್ಯದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಪ್ಯಾರಾ ಮೆಡಿಕಲ್ ಸ್ಟಾಪ್‌ಗೆ ಥರ್ಮಲ್ ಸ್ಕ್ಯಾನರ್ ನೀಡಲಾಗುವುದು, ಈಗಾಗಲೇ ೮೦೦ರವರೆಗೆ ಥರ್ಮಲ್ ಸ್ಕ್ಯಾನರ್‌ಗಳಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ಇನ್ನು ಹೆಚ್ಚಿನ ಥರ್ಮಲ್ ಸ್ಕ್ಯಾನರ್‌ಗಳು ಬರಲಿದ್ದು, ಅವುಗಳನ್ನೆಲ್ಲಾ ಸಮರ್ಪಕವಾಗಿ ಬಳಸಿಕೊಂಡು ಪರಿಣಾಮಕಾರಿಯಾದ ಆರೋಗ್ಯ ಸಮೀಕ್ಷೆ ನಡಸಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ,
ಬೇರೆ ರಾಜ್ಯ ಮತ್ತು ದೇಶಗಳಿಂದ ಬಂದವರು ಕಡ್ಡಾಯವಾಗಿ ೭ದಿನ ಸಾಂಸ್ಥಿಕ ಹಾಗೂ ೭ ದಿನ ಹೋಮ್ ಕ್ವಾರಂಟೈನ್‌ನಲ್ಲ್ಲಿರಬೇಕು ಕ್ವಾರಂಟೈನ್ ಅನ್ನು ಸರಿಯಾಗಿ ಪಾಲನೆ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಆಶಾ ಕಾರ್ಯಕರ್ತೆಯರು ಅಪ್ಲಿಕೇಶನಲ್ಲಿ ಅಪಲೋಡ್ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕಾರವಾರ ಎಸಿ ಪ್ರಿಯಾಂಗಾ ಎಂ, ತಹಶೀಲ್ದಾರ್ ರಾಮಚಂದ್ರ ಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button