ವಿಕ್ರಮಾದಿತ್ಯ, ಸುವರ್ಣ ವೀಕ್ಷಣೆಗೆ ಜನಸಾಗರ
ಪ್ರಗತಿವಾಹಿನಿ ಸುದ್ದಿ, ಕಾರವಾರ – ಅರಗಾ ಸೀಬರ್ಡ್ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ಶನಿವಾರ ಮುಕ್ತವಾಗಿಸಲಾಗಿತ್ತು.
ಜುಲೈ 26ರ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಸಾರ್ವಜನಿಕರಿಗೆ ಈ ಅವಕಾಶ ಕಲ್ಪಿಸಲಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಭೇಟಿ ನೀಡಿದ್ದರು. ಏಕೈಕ ಯುದ್ಧ ವಿಮಾನ ವಾಹಕ ನೌಕೆ ‘ಐಎನ್ ಎಸ್ ವಿಕ್ರಮಾದಿತ್ಯ’ ಹಾಗೂ ’ಐಎನ್ಎಸ್ ಸುವರ್ಣ’ದ ಒಳ ಹೊಕ್ಕು ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
ಶಾಲಾ ಕಾಲೇಜು ವಿದ್ಯಾರ್ಥಿಗಳೂ ನೌಕಾನೆಲೆಗೆ ಭೇಟಿ ನೀಡಿದ್ದರು. ನೌಕಾನೆಲೆಯ ಅಧಿಕಾರಿಗಳು ಯುದ್ಧದ ಸಂದರ್ಭದಲ್ಲಿ ಈ ನೌಕೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ, ಅದರ ಸಾಮರ್ಥ್ಯ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನೌಕಾಸೇನೆಯ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.
‘ವಿಕ್ರಮಾದಿತ್ಯ ನೌಕೆ ನೇರವಾಗಿ ನೋಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಖುಷಿ ತಂದಿದೆ. ನೌಕಾಸೇನೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದೆವು’ ಎಂದು ನೌಕೆ ವೀಕ್ಷಿಸಿದ ಸಹನಾ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ