Latest

ಮೂರು ದಿನ ಆಕೆ ಜೊತೆ, ಮೂರು ದಿನ ಈಕೆ ಜೊತೆ; ಇಬ್ಬರು ಹೆಂಡಿರಿಗೆ ಹಂಚಿಕೆಯಾದ ಮುದ್ದಿನ ಎಂಜಿನಿಯರ್!

ಪ್ರಗತಿವಾಹಿನಿ ಸುದ್ದಿ, ಗುರುಗ್ರಾಮ: ಸೌಂದರ್ಯಕ್ಕೆ ಮಾರು ಹೋಗಿ ಲೆಕ್ಕಾಚಾರ ತಪ್ಪಿ ತಗಲುಹಾಕಿಕೊಂಡರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ಇಲ್ಲೊಬ್ಬ ಎಂಜಿನಿಯರ್ ಸಾಕ್ಷಿಯಾಗಿದ್ದಾರೆ.

ಒಂದು ಮದುವೆಯಾಗಿ ಮಗುವೊಂದರ ತಂದೆಯಾದ ಮೇಲೂ ಮತ್ತೊಂದಕ್ಕೆ ಮರುಳಾಗಿ ಇಬ್ಬರು ಹೆಂಡಿರ ಮುದ್ದಿನ ಗಂಡನಾದ ಎಂಜಿನಿಯರ್ ಒಬ್ಬರು ಇದೀಗ ವಾರದಲ್ಲಿ ಮೂರು ದಿನ ಒಬ್ಬಳ ಜೊತೆ, ಮತ್ತೆ ಮೂರು ದಿನ ಇನ್ನೊಬ್ಬಳ ಜೊತೆ, ಭಾನುವಾರ ತನ್ನಿಷ್ಟದಂತೆ ಪತಿ ಕರ್ತವ್ಯ ನಿಭಾಯಿಸುವ ಫಜೀತಿಗೆ ಒಳಗಾಗಿದ್ದಾರೆ.

ಅವರ ಇಬ್ಬರೂ ಹೆಂಡತಿಯರು ಈ ಕುರಿತು ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಕೊಂಡಿದ್ದಾರೆ.

ಒಂದು ಎರಡಾದದ್ದು ಹೇಗೆ?:

ಗುರುಗ್ರಾಮದ ಈ ಎಂಜಿನಿಯರ್ 2018ರಲ್ಲಿ ಗ್ವಾಲಿಯರ್ ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ. ಈಕೆಯಿಂದ ಒಂದು ಮಗುವನ್ನೂ ಪಡೆದ. ಆದರೆ 2020ರಲ್ಲಿ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಪತ್ನಿಯನ್ನು ತವರಿಗೆ ಕಳುಹಿಸಿದಾಗ ಇತ್ತ ಕಚೇರಿಯಲ್ಲಿ ಮತ್ತೊಂದು ಕಡೆ ಚಿತ್ತ ಹರಿದ ಪರಿಣಾಮ ಸಹೋದ್ಯೋಗಿ ಮಹಿಳೆಯೊಬ್ಬಳೊಂದಿಗೆ ಇನ್ನೊಂದು ವಿವಾಹವಾದ. ಆಕೆಯಿಂದಲೂ ಒಂದು ಮಗು ಪಡೆದ.

ಇತ್ತೀಚೆಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಮೊದಲ ಪತ್ನಿ ಕೆಂಡಾಮಂಡಲವಾಗಿ ಸೀದಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದಳು. ಗ್ವಾಲಿಯರ್ ನ ತನ್ನ ತವರಲ್ಲೇ ಇದ್ದು ಗಂಡನ ಮೇಲೊಂದು ದಾವೆ ಹೂಡಿದಳು.

ನ್ಯಾಯಾಲಯ ಎಲ್ಲವನ್ನೂ ಸರಿಪಡಿಸಲು ಮನವೊಲಿಸುವ ಯತ್ನಕ್ಕೆ ಮುಂದಾಯಿತಾದರೂ ಪತ್ನಿಯರಿಬ್ಬರೂ ಈತನನ್ನು ಬಿಡಲು ತಯಾರಿಲ್ಲ, ಈತ ಪತ್ನಿಯರಿಬ್ಬರನ್ನೂ ಬಿಡಲೊಲ್ಲದ ಹಂತಕ್ಕೆ ತಲುಪಿತು. ಈ ವೇಳೆ ಹೇಗಾದರೊಂದು ಒಪ್ಪಂದ ಏರ್ಪಡಿಸುವ ನ್ಯಾಯಾಲಯದ ಸದುದ್ದೇಶ ಕೊನೆಗೂ ಫಲಿಸಿತು.

ಅದರ ನಂತರ ಪತಿ ತನ್ನ ವಾರವನ್ನು ಇಬ್ಬರು ಹೆಂಡತಿಯರು ಮತ್ತು ಅವರ ಮಕ್ಕಳ ನಡುವೆ ಸಮಾನವಾಗಿ ವಿಭಜಿಸಬೇಕು, ಅಂದರೆ, ಮಹಿಳೆಯರು ಮತ್ತು ಮಕ್ಕಳಿಗೆ ತಲಾ ಮೂರು ದಿನಗಳು ಮತ್ತು ಒಂದು ದಿನ ತನಗಾಗಿ ಮಾತ್ರ ಎಂದು ಸಮಾಲೋಚಕರ ಮಧ್ಯಸ್ಥಿಕೆಯಲ್ಲಿ ನಿರ್ಧರಿಸಲಾಯಿತು. ಇದಲ್ಲದೆ, ಗುರುಗ್ರಾಮ್‌ನಲ್ಲಿ ಎರಡು ಪ್ರತ್ಯೇಕ ಅಪಾರ್ಟ್ಮೆಂಟ್ ಗಳನ್ನು ಪತ್ನಿದ್ವಯರಿಗೆ ನೀಡಲಾಯಿತು.

ಈ ವಿಷಯವೀಗ ಜಾಲತಾಣದಲ್ಲಿ ವ್ಯಾಪಕ ಅಲೆ ಎಬ್ಬಿಸಿದೆ. ಕೆಲವರು ಈ ರೋಸ್ಟರ್ ಪದ್ಧತಿಯ ಸಂಸಾರದ ಒಡೆಯನ ಕತೆ ಕೇಳಿ “ಆಹಾ ಅದೃಷ್ಟವಂತ!” ಎಂದು ಉದ್ಗರಿಸಿದ್ದರೆ, ಮತ್ತಷ್ಟು ಜನ “ಅಯ್ಯೋ ಪಾಪ” ಎಂದಿದ್ದಾರೆ.

https://pragati.taskdun.com/karnatakarain-updatebangalore/
https://pragati.taskdun.com/car-accidentcoupledeathbangalore/

https://pragati.taskdun.com/pakistan-will-not-stop-the-nuclear-missile-program-even-if-there-is-no-money-says-finance-minister-ishaq-dar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button