*ದೇವಸ್ಥಾನದಿಂದ ವಾಪಸ್ ಬರುವಾಗ ಸೇತುವೆಗೆ ಡಿಕ್ಕಿ ಹೊಡೆದ ಕಾರ್: ಮೂವರ ಸಾವು*

ಪ್ರಗತಿವಾಹಿನಿ ಸುದ್ದಿ: ದೇವಸ್ಥಾನದಿಂದ ವಾಪಸ್ ಬರುವ ವೇಳೆ ಕಾರೊಂದು ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆಂದು ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮೃತರನ್ನು ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಎಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರ ಹೆಸರು ಗೊತ್ತಾಗಿಲ್ಲ.
ದೇವರ ದರ್ಶನ ಮುಗಿಸಿ ವಾಪಸ್ ಮನೆಗೆ ಮರಳುತ್ತಿದ್ದ ವೇಳೆ ಬಳ್ಳಾರಿ ಮತ್ತು ಸಿರುಗುಪ್ಪ ರಸ್ತೆ ಮಧ್ಯ ಬರುವಾಗ ದೇವಿ ನಗರ ಕ್ಯಾಂಪ್ ಹತ್ತಿರ ಚಾಲಕ ನಿದ್ದೆ ಮಂಪರಿನಲ್ಲಿದ್ದ ಹಾಗೂ ಮಂಜುಗಟ್ಟಿದ ವಾತಾವರಣದ ಹಿನ್ನೆಲೆ ರಸ್ತೆ ಕಾಣದೇ ಬೆಳಗ್ಗೆ 5 ಗಂಟೆಗೆ ಕಿರು ಸೇತುವೆಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಉಳಿದ ವಾಹನ ಸವಾರರು ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದು ಕೂಡಲೇ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಳಿಯ ಹಿನ್ನೆಲೆಯಲ್ಲಿ ವಾತಾವರಣ ಸಂಪೂರ್ಣ ಮಂಜುಗಟ್ಟಿತ್ತು.
ಈ ವೇಳೆ ರಸ್ತೆ ಕಾಣದೇ ಕಾರು ಕಿರು ಸೇತುವೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




