ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಭೀಮಗಡ ವನ್ಯಧಾಮದ ಹುಲಿಯೊಂದು ಹಾಡಹಗಲೇ ಜನವಸತಿ ಪ್ರದೇಶ ಪ್ರವೇಶಿಸಿದ ಘಟನೆ ಶುಕ್ರವಾರ ತಾಲೂಕಿನ ಹೆಮ್ಮಡಗಾ ಗ್ರಾಮದಲ್ಲಿ ವರದಿಯಾಗಿದೆ.
ಗ್ರಾಮದ ಹಿಂಭಾಗದ ಅರಣ್ಯ ಪ್ರದೇಶದಿಂದ ಹೆಮ್ಮಡಗಾ ಗ್ರಾಮವನ್ನು ಪ್ರವೇಶಿಸಿದ ಹುಲಿ ಗ್ರಾಮದ ರೈತ ದುಲಭಾ ಮಾದಾರ ಅವರು ತಮ್ಮ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಹೊತ್ತುಕೊಂಡು ಹೋಗಿದೆ.
ಘಟನೆ ನಡೆದ ಸಂದರ್ಭದಲ್ಲಿ ದುಲಭಾ ಅವರು ಇತರೆ ದನಕರುಗಳನ್ನು ಮೇಯಲು ಬಿಟ್ಟಿದ್ದು, ಕೊಟ್ಟಿಗೆಯಲ್ಲಿ ಕರುವೊಂದನ್ನು ಕಟ್ಟಿಹಾಕಿದ್ದರು. ದನದ ಕೊಟ್ಟಿಗೆ ಪ್ರವೇಶಿಸಿ ಕರುವಿನ ಬಳಿ ತೆರಳಿದ ಹುಲಿ ಕರುವನ್ನು ಎಳೆದೊಯ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ನಡೆದ ಈ ಘಟನೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಾಡುಹಗಲೇ ವನ್ಯಜೀವಿಯೊಂದು ಊರನ್ನು ಪ್ರವೇಶಿಸಿ ಸಾಕುಪ್ರಾಣಿಯನ್ನು ಹೊತ್ತೊಯ್ದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವನ್ಯಜೀವಿಗಳಿಂದ ಕಾನನವಾಸಿಗಳಿಗೆ ಉಂಟಾಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಪ್ರದೇಶಿಸದಂತೆ ಕ್ರಮ ಜರುಗಿಸಬೇಕು ಎಂದು ಹೆಮ್ಮಡಗಾ ಗ್ರಾಮಸ್ಥರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ