ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಪುಟ್ಟ ಕಂದಮ್ಮನ ಎದುರೇ ಮಹಿಳೆಯ ಮೇಲೆ ಪತಿಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿ, ಸಿಗರೇಟ್ ನಿಂದ ಸುಟ್ಟ ಅಮಾನವೀಯ ಘಟನೆ ಕೇರಳದ ತಿರುವನಂತಪುರಂ ನಲ್ಲಿ ಬೆಳಕಿಗೆ ಬಂದಿದೆ.
25 ವರ್ಷದ ಮಹಿಳೆ ಪತಿ ಹಾಗೂ ಮಗನೊಂದಿಗೆ ಇದ್ದಾಗ ಆತನ ಸ್ನೇಹಿತರೇ ಮಹಿಳೆಯನ್ನು ಎಳೆದುಕೊಂಡು ಹೋಗಿ, ನಂತರ ಪುಟ್ಟ ಮಗನೆದುರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ತನ್ನನ್ನು ವಾಹನದಲ್ಲಿ ಎಳೆದು ಕೊಂಡು ಹೋಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಮನಬಂದಂತೆ ಥಳಿಸಿದ ಪರಿಣಾಮ ನಾನು ಪ್ರಜ್ಞಾಹೀನಳಾಗಿದ್ದೆ. ನನ್ನ ಮಗುವಿನ ಅಳು ಶಬ್ದ ಕೇಳಿ ಪ್ರಜ್ಞೆ ಬಂದಿತು. ನನ್ನ ಮೈಮೇಲೆ ಆಗ ಸಿಗರೇಟ್ ಬೆಂಕಿಯಿಂದ ಸುಟ್ಟ ಗಾಯಗಳಿದ್ದವು. ಮೈಮೇಲೆ ಟಾಪ್ ಬಿಟ್ಟರೆ ಬೇರೇನೂ ಇರಲಿಲ್ಲ. ಅಳುತ್ತಿದ್ದ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಮನವಿ ಮಾಡಿದರೂ ಬಿಡಲಿಲ್ಲ. ತಪ್ಪಿಸಿಕೊಂಡುಬಂದು ಮುಖ್ಯರಸ್ತೆ ತಲುಪಿದಾಗ ಬೈಕಿನಲ್ಲಿ ಬಂದ ವ್ಯಕ್ತಿ ಸಹಾಯದಿಂದ ಮಗ ಹಾಗೂ ನಾನು ಮನೆ ತಲುಪಿದ್ದಾಗಿ ವಿವರಿಸಿದ್ದಾರೆ.
ಮಹಿಳೆ, ಪತಿ ಹಾಗೂ ತನ್ನ ಇಬ್ಬರು ಮಕ್ಕಳ ಜತೆ ಪ್ರತಿದಿನದಂತೆ ಸಂಜೆ ತಿರುವನಂತಪುರಂ ಬಳಿಯ ಪುತ್ತುಕುರಿಚಿಯ ಬೀಚ್ ಗೆ ತೆರಳಿದ್ದಾರೆ. ನಂತರ ಪತಿ ಮಹಿಳೆಯನ್ನು ತನ್ನ ಸ್ನೇಹಿತರಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ನಾಲ್ವರು ಸ್ನೇಹಿತರು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಪ್ರತಿ ದಿನ ಸಂಜೆ ಈ ಕುಟುಂಬ ಬೀಚ್‍ಗೆ ತೆರಳುತ್ತಿತ್ತು. ಆದರೆ ಈ ಬಾರಿ ಮಹಿಳೆಯ ಪತಿ ಆತನ ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ಮದ್ಯದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಸಂತ್ರಸ್ತೆಯನ್ನು ತನ್ನ ಸ್ನೇಹಿತರ ಬಳಿ ಬಿಟ್ಟು ಮರಳಿದ್ದಾನೆ. ಅವರು ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ