ಎಂ.ಕೆ.ಹೆಗಡೆ, ಬೆಳಗಾವಿ – ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾಳೆ ಮಹತ್ವದ ದಿನವಾಗಲಿದೆ. ಬುಧವಾರ ಸರ್ವೋಚ್ಛ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ನವದೆಹಲಿ ಹಾಗೂ ಬೆಂಗಳೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದೆ. ತತ್ಪರಿಣಾಮವಾಗಿ ರಾಜಕೀಯ ಪಕ್ಷಗಳಲ್ಲಿ ಹಲವು ಬದಲಾವಣೆಗಳಾಗಲಿವೆ.
ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿರುವ ಕ್ರಮವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಕಾನೂನಿಗಿಂತ ಹೆಚ್ಚಾಗಿ ಜನರ ಭಾವನೆಗೆ ತಕ್ಕಂತೆ ಅವರನ್ನು ಅನರ್ಹಗೊಳಿಸಿದ್ದಾಗಿ ರಮೇಶ್ ಕುಮಾರ್ ಹೇಳಿದ್ದರು. ಸುಪ್ರಿಂ ಕೋರ್ಟ್ ಕೂಡ ತೀರ್ಪು ಕೊಡುವ ಸಂದರ್ಭದಲ್ಲಿ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಸಕರು ಅನರ್ಹರಾಗಿರುವುದರಲ್ಲಿ ಬದಲಾವಣೆ ಇಲ್ಲ. ಆದರೆ ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಅವರು ಸ್ಪರ್ಧಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಹಾಗಾಗಿ ಉಪಚುನಾವಣೆ ಕಣ ಈಗ ರಂಗೇರಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕದಲ್ಲಿ ಅನೇಕ ಪ್ರಮುಖ ಬೆಳವಣಿಗೆಗಳು ನಡೆಯಲಿವೆ.
- 17 ಅನರ್ಹ ಶಾಸಕರು ಗುರುವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅವರಲ್ಲಿ 15 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇನ್ನೆರಡು ಕ್ಷೇತ್ರಗಳ ಚುನಾವಣೆ ಘೋಷಣೆಯಾಗಿಲ್ಲ. ಹಾಗಾಗಿ ಮುನಿರತ್ನ ಮತ್ತು ಪ್ರತಾಪಗೌಡ ನಾಳೆಯೇ ಬಿಜೆಪಿ ಸೇರುತ್ತಾರೋ ಅಥವಾ ಸಧ್ಯಕ್ಕೆ ತಟಸ್ಥರಾಗಿರುತ್ತಾರೋ ಎನ್ನುವುದು ಖಚಿತವಾಗಬೇಕಿದೆ. ಉಳಿದವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ. 3-4 ದಿನದಲ್ಲಿ ಅವರೆಲ್ಲ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರವನ್ನೂ ಸಲ್ಲಿಸಲಿದ್ದಾರೆ.
- ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ನಾಳೆಯೇ ಕಾಂಗ್ರೆಸ್ ಸೇರಲಿದ್ದಾರೆ. ಅವರು ಕಾಂಗ್ರೆಸ್ ನಿಂದ ಕಾಗವಾಡ ಕ್ಷೇತ್ರದ ಅಭ್ಯರ್ಥಿಯಾಗಿ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ರಾಜು ಕಾಗೆ ಅವರನ್ನು ಮನವೊಲಿಸುವ ಯತ್ನಗಳು ಫಲಕೊಡಲಿಲ್ಲ.
- ಶರತ್ ಬಚ್ಚೇಗೌಡ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಹೊಸಕೋಟೆ ಕ್ಷೇತ್ರದಿಂದ ನಾಳೆಯೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಇದರಿಂದಾಗಿ ಬಿಜೆಪಿಯಿಂದ ಸ್ಪರ್ಧಿಸಲಿರುವ ಎಂ.ಟಿ.ಬಿ.ನಾಗರಾಜ ಅವರಿಗೆ ದೊಡ್ಡ ಹೊಡೆತ ಬೀಳಲಿದೆ.
- ಗೋಕಾಕದ ಅಶೋಕ ಪೂಜಾರಿ ಕಾಂಗ್ರೆಸ್ ಸೇರುವ ಅಥವಾ ಬಿಜೆಪಿಯಲ್ಲಿಯೇ ಮುಂದುವರಿಯುವ ಕುರಿತು ನಾಳೆಯೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಸೇರಿದರೆ ಗೋಕಾಕ ಕ್ಷೇತ್ರದ ಟಿಕೆಟ್ ಸಿಗಲಿದೆ ಎನ್ನುವ ಭರವಸೆ ಸಿಕ್ಕರೆ ಅವರು ಸೇರ್ಪಡೆಯಾಗಲಿದ್ದಾರೆ. ಇಲ್ಲವಾದಲ್ಲಿ ಬಿಜೆಪಿಯಲ್ಲಿಯೇ ಮುಂದುವರಿಯುವುದು ಅರಿಗೆ ಅನಿವಾರ್ಯವಾಗಲಿದೆ. ಕಾಂಗ್ರೆಸ್ ಗೋಕಾಕದಿಂದ ಲಖನ್ ಜಾರಕಿಹೊಳಿಗೇ ಟಿಕೆಟ್ ನೀಡುವುದು ಹೆಚ್ಚುಕಡಿಮೆ ನಿರ್ಧಾರವಾದ ವಿಷಯ. ಸತೀಶ್ ಜಾರಕಿಹೊಳಿ ಲಖನ್ ಗೇ ಟಿಕೆಟ್ ಕೊಡುವಂತೆ ಪಟ್ಟಿ ಹಿಡಿದಿದ್ದಾರೆ. ಇದು ಅವರಿಗೆ ದೊಡ್ಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
- ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಲಕ್ಷ್ಮಣ ಸವದಿಗೋ, ಮಹೇಶ್ ಕುಮಟಳ್ಳಿಗೋ ಎನ್ನುವುದು ಬಹುತೇಕ ನಾಳೆಯೇ ನಿರ್ಧಾರವಾಗಲಿದೆ. ಮಹೇಶ ಕುಮಟಳ್ಳಿ ಬಿಜೆಪಿಯಿಂದ ಸ್ಪರ್ಧಿಸಿದರೆ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗಬಹುದು. ಹಾಗಾಗಿ ಮಹೇಶ ಕುಮಟಳ್ಳಿಗೆ ಬೇರೆ ಸ್ಥಾನಮಾನ ನೀಡುವ ಮೂಲಕ ಆ ಕ್ಷೇತ್ರವನ್ನು ಲಕ್ಷ್ಮಣ ಸವದಿಗೆ ಬಿಟ್ಟುಕೊಡುವಂತೆ ಮನವೊಲಿಸಲಾಗುತ್ತದೆಯೋ ಎನ್ನುವುದು ಕೂಡ ನಾಳೆ ಸಂಜೆಯೊಳಗೆ ನಿರ್ಧಾರವಾಗಲಿದೆ.
- ಎಚ್.ವಿಶ್ವನಾಥ ಹುಣಸೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ… ಜಿ.ಟಿ.ದೇವೇಗೌಡರ ಪುತ್ರನಿಗೆ ಮಣೆ ಹಾಕಲಾಗುತ್ತದೆಯೋ ಎನ್ನುವುದು ಸಹ ನಾಳೆ ಸಂಜೆಯೊಳಗೆ ನಿರ್ಧಾರವಾಗಲಿದೆ. ವಿಶ್ವನಾಥ ಈ ಬಾರಿ ಚುನಾವಣೆ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಹಾಗಾದಲ್ಲಿ ಜಿ.ಟಿ.ದೇವೇಗೌಡ ಮಗನೊಂದಿಗೆ ತಾವೂ ಬಿಜೆಪಿ ಸೇರ್ಪಡೆಯಾಗಬಹುದು.
ಒಟ್ಟಾರೆ ಗುರುವಾರ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಇದು ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖವಾದ ದಿನವಾಗಿ ಪರಿಣಮಿಸಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ