Kannada NewsKarnataka NewsLatest

ಬೆಳಗಾವಿಯಲ್ಲಿ ನಾಳೆಯ ಆತಂಕ: ಏನಾಗಲಿದೆ ಒಳಗೆ, ಹೊರಗೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಅಕ್ಷರಶಃ ಸೋಮವಾರದ ಆತಂಕ ಮನೆ ಮಾಡಿದೆ.

ಕನ್ನಡ – ಮರಾಠಿ, ಕರವೇ-ಎಂಇಎಸ್, ಶಿವಾಜಿ- ರಾಯಣ್ಣ, ಕರ್ನಾಟಕ – ಮಹಾರಾಷ್ಟ್ರ, ಕಾಂಗ್ರೆಸ್ – ಬಿಜೆಪಿ, ಅಧಿಕೃತ ಪ್ರತಿಭಟನೆ -ಅನಧಿಕೃತ ಪ್ರತಿಭಟನೆ – ಈ ಎಲ್ಲವೂ ಬೆಳಗಾವಿಯನ್ನು ಕೆಂಡದ ಮೇಲೆ ನಿಲ್ಲುವಂತೆ ಮಾಡಿದೆ.

ಬೆಳಗಾವಿ ಅಧಿವೇಶನ ಆರಂಭದ ದಿನ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಎಂದಿನ ಚಾಳಿಯನ್ನು ಮುಂದುವರಿಸಿ, ಮಹಾಮೇಳಾವ ನಡೆಸಲು ಯತ್ನಿಸಿ ವಿಫಲವಾಗಿತ್ತು. ಆದರೆ ಎಂಇಎಸ್ ಒಳಕುದಿ ತಣ್ಣಗಾಗಿರಲಿಲ್ಲ. ಕನ್ನಡ ಸಂಘಟನೆಯ ಕಾರ್ಯಕರ್ತನೊಬ್ಬ ಮಸಿ ಬಳಿದ ಘಟನೆಯ ಸಿಟ್ಟಿನಿಂದ ಅವರು ಹೊರಬಂದಿರಲಿಲ್ಲ.

ಹಾಗಾಗಿ, ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಲಾಗಿದೆ ಎನ್ನುವ ಒಂದು ವೀಡಿಯೋ ಪ್ರತಿಭಟನೆಗೆ ಸಾಕಿತ್ತು. ರಾತ್ರೋರಾತ್ರಿ ಪ್ರತಿಭಟನೆಗಿಳಿದ ಎಇಎಸ್, ಶಿವಸೇನೆ ಕಾರ್ಯಕರ್ತರು ಹೋಗುವಾಗ ಸುಮ್ಮನೇ ಹೋಗಲಿಲ್ಲ, ಸಿಕ್ಕಿದ ವಾಹನಗಳಿಗೆ ಕಲ್ಲು ತೂರಿ, ಬೆಂಕಿಯನ್ನೂ ಹಚ್ಚಿ ಹೋದರು. ಅಷ್ಟಕ್ಕೂ ನಿಲ್ಲಲಿಲ್ಲ, ಮನೆಯೊಂದರೆದುರು ಇಡಲಾಗಿದ್ದ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ವಿರೂಪಗೊಳಿಸಿ, ಶಾಂತಿಗೆ ಬೆಂಕಿ ಹಚ್ಚುವ ಯತ್ನ ನಡೆಸಿದರು.

ಇದು ಬೆಳಗಾವಿಯಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಕನ್ನಡಿಗರು ಕೆರಳುವಂತಾಯಿತು. ಎಲ್ಲೆಡೆ ಪ್ರತಿಭಟನೆಗಳು ನಡೆದವು. ಶನಿವಾರ, ಭಾನುವಾರವೂ ಪ್ರತಿಭಟನೆ ನಿಲ್ಲಲಿಲ್ಲ. ಆನಗೋಳದಲ್ಲಿ   ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನೆಗೆ ಇದು ಕಾರಣವಾಯಿತು.

ಸೋಮವಾರದ ಆತಂಕವೇನು?

ಬೆಳಗಾವಿಯಲ್ಲಿ ಆರಂಭವಾಗಿರುವ ವಿಧಾನಮಂಡಳದ ಅಧಿವೇಶನ ಸೋಮವಾರ  ಮುಂದುವರಿಯಲಿದೆ. 2ನೇ ವಾರವಾದರೂ ಉತ್ತರ ಕರ್ನಾಟಕದ ವಿಷಯಗಳು ಚರ್ಚೆಗೆ ಬರಬಹುದೆನ್ನುವ ನಿರೀಕ್ಷೆ ಎಲ್ಲರಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಸರಕಾರ ತುದಿಗಾಲಲ್ಲಿ ನಿಂತಿದ್ದು, ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಧಿವೇಶನದ ಕೊನೆಯಲ್ಲಿ ಅದು ಬರಬಹುದು. ಹಾಗಾಗಿ, ಅದಕ್ಕೂ ಮೊದಲು, ಅಂದರೆ ಸೋಮವಾರ ಮಂಗಳವಾರ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯ ಚರ್ಚೆಗೆ ಬರಬಹುದು ಎನ್ನುವ ಬಲವಾದ ವಿಶ್ವಾಸ ಎಲ್ಲರಲ್ಲಿತ್ತು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಈ ನಿರೀಕ್ಷೆ ಎಂದಿನಂತೆ, ಹಿಂದಿನಂತೆ ಹುಸಿಯಾಗುವ ಸಾಧ್ಯತೆಯೇ ಕಾಣುತ್ತಿದೆ.

ಹಾಗಾದರೆ ಬೆಳಗಾವಿಗೆ ಸೋಮವಾರದ ಆತಂಕವೇನು?

ಕನ್ನಡ – ಮರಾಠಿ ವಿಷಯ, ಕರ್ನಾಟಕ ರಕ್ಷಣಾ ವೇದಿಕೆ – ಮಹಾರಾಷ್ಟ್ರ ಏಕೀಕರಣ ಸಮಿತಿ/ ಶಿವಸೇನೆ ವಿವಾದ ಮತ್ತು ಛತ್ರಪತಿ ಶಿವಾಜಿ- ಸಂಗೊಳ್ಳಿ ರಾಯಣ್ಣ, ಕರ್ನಾಟಕ – ಮಹಾರಾಷ್ಟ್ರ ವಿವಾದವಾಗಿ ಬುಗಿಲೆದ್ದಿದ್ದಷ್ಟೇ ಅಲ್ಲ, ಭಾನುವಾರ ಮಧ್ಯಾಹ್ನದ ಹೊತ್ತಿಗೆ ಇದಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಕಾಂಗ್ರೆಸ್ – ಬಿಜೆಪಿ ಕದನವಾಗಿ ತಿರುಗಿದೆ. ಶಿವಾಜಿ ಅವಮಾನದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ. ಇದು ಅಧಿವೇಶನದೊಳಗೆ ಗದ್ದಲಕ್ಕೆ ಕಾರಣವಾಗಬಹುದು. ನಾಡಿನ ಭಾಷೆ, ಗಡಿ ವಿಷಯಕ್ಕೆ ಎಲ್ಲರೂ ಒಂದಾಗುವ ಬದಲು ತಮ್ಮೊಳಗೇ ಆರೋಪ – ಪ್ರತ್ಯಾರೋಪ ನಡೆಸಿ ಕನ್ನಡ ಅಸ್ಮಿತೆಯನ್ನು ಕಡೆಗಣಿಸಬಹುದು.

ಇದರ ಜೊತೆಗೆ ಕೆಲವು ಅಧಿಕೃತ ಪ್ರತಿಭಟನೆಗಳಲ್ಲದೆ, ಸೋಮವಾರ ಅನೇಕ ಅನಧಿಕೃತ (ಪೂರ್ವಾನುಮತಿ ಪಡೆಯದ) ಪ್ರತಿಭಟನೆಗಳೂ ನಡೆಯಲಿದ್ದು,  – ಇವು ಆತಂಕ ಸೃಷ್ಟಿಸಿವೆ.

 

  1. 144ನೇ ಕಲಂ ಅನ್ವಯ ನಗರದಲ್ಲಿ ನಿಷೇಧಾಜ್ಞೆ ವಿಸ್ತರಣೆಯಾಗಿದೆ. ಆದಾಗ್ಯೂ ಈಗಾಗಲೆ ಅನುಮತಿ ಪಡೆದಿರುವ 8 ಪ್ರತಿಭಟನೆಗಳು ಸೋಮವಾರ ನಡೆಯಲಿವೆ.
  2. ಬೆಂಗಳೂರಿನಿಂದ ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳ ಕಾರ್ಯಕರ್ತರು ಪ್ರತಿಭಟನೆಗಾಗಿಯೇ ಬರಲಿದ್ದಾರೆ. ವಾಟಾಳ್ ನಾಗರಾಜ್ ಆ್ಯಂಡ್ ಟೀಮ್, ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ರೈತ ಸಂಘಟನೆಗಳು ಸಹ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಇವ್ಯಾವುವೂ ಅನುಮತಿ ಪಡೆದಿಲ್ಲ. ಹಾಗಾಗಿ ಸಹಜವಾಗಿ ಪೊಲೀಸರು ಇವೆಲ್ಲಕ್ಕೂ ತಡೆಯೊಡ್ಡುವ ಕೆಲಸ ಮಾಡುತ್ತಾರೆ. ಆಗ ಗದ್ದಲ, ಗಲಾಟೆ, ಟ್ರಾಫಿಕ್ ಜಾಂ ಎಲ್ಲವೂ ನಿರೀಕ್ಷಿತ.
  3. ಗಲಭೆಗೆ ಬೆಳಗಾವಿ ಪೊಲೀಸರ ವೈಫಲ್ಯ ಕಾರಣವಾಗಿದ್ದು, ಸೋಮವಾರ ಅಧಿವೇಶನದಲ್ಲಿ ಇದನ್ನು ಎತ್ತುವುದಾಗಿ ಬಿಜೆಪಿ ಶಾಸಕ ಅಭಯ ಪಾಟೀಲ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು, ಜೊತೆಗೆ, ಇದೇ ವಿಷಯದ ಮೇಲೆ ಕಾಂಗ್ರೆಸ್ – ಬಿಜೆಪಿ ಆರೋಪ – ಪ್ರತ್ಯಾರೋಪಗಳು ಸದನದೊಳಗೆ ಕಲಾಪವನ್ನುದಾರಿ ತಪ್ಪಿಸುವ ಸಾಧ್ಯತೆ ನಿಚ್ಛಳವಾಗಿ ಕಾಣುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಏನಾಗಲಿದೆ?  ಸದನದೊಳಗೆ ಏನಾಗಲಿದೆ, ಸದನದೊಳಗಿನ ಗದ್ದಲ – ನಿರ್ಣಯದ ಪರಿಣಾಮ ಹೊರಗಡೆ ಏನಾಗಲಿದೆ ಎನ್ನುವ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.

ಬದುಕು, ಸ್ಥಾನಮಾನ, ಅಧಿಕಾರ ಯಾವುದೂ ಶಾಶ್ವತವಲ್ಲ; ಸಿಎಂ ಬೊಮ್ಮಾಯಿ ಭಾವುಕರಾಗಿದ್ದೇಕೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button