Kannada NewsKarnataka News

ಮುಖ್ಯಾಧ್ಯಾಪಕಿ ವರ್ಗಾವಣೆಗೊಳಿಸಿ, ಶಾಲೆ ಉಳಿಸಿ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ : ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಯ ಕನಸು ಕಂಡ ಗ್ರಾಮದ ಹಿರಿಯರಾದ ದಿ. ರಾಚಪ್ಪ ಮಾಟೊಳ್ಳಿ ಅವರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಪ್ರೌಢಶಾಲೆಗೆ ದಾನಮಾಡಿದ್ದಾರೆ. ಶಾಲೆ ಅಭಿವೃಧ್ಧಿ ಕಾಣುವುದರ ಹೊರತಾಗಿ ಸಹಕಾರರಹಿತ ಜನಮನ ವಿರೋಧಿ ಧೋರಣೆಯ  ಮುಖ್ಯೋಪಾಧ್ಯಾಯರಿಂದ ಸರಕಾರಿ ಪ್ರೌಢಶಾಲೆಯ ಹೆಸರು ಕೆಡಿಸುವಂತಾಗಿದೆ. ಮಕ್ಕಳು ಶಾಲೆಯನ್ನು ತೊರೆದು ಬೇರೆ ಶಾಲೆಗಳಿಗೆ ದಾಖಲಾತಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಿಂಗನಮಠ ಗ್ರಾ.ಪಂ. ಅಧ್ಯಕ್ಷ ಡಾ. ಕೆ.ಬಿ.ಹಿರೇಮಠ ಕಳವಳ ವ್ಯಕ್ತ ಪಡಿಸಿದರು.

ತಾಲೂಕಿನ ಲಿಂಗನಮಠ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ  ಗ್ರಾಮದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜ್ಯೋತಿ ಭಂಡಾರಿ ಪೋಲಿಸ್ ಇಲಾಖೆಯ ತನಿಖೆಗೆ ಅಡ್ಡಿಪಡಿಸಿದ್ದರಿಂದ ಅವರನ್ನು ವರ್ಗಾವಣೆ ಮಾಡುವ ಕುರಿತು ಗ್ರಾಮಸ್ಥರಿಂದ ತಹಶಿಲ್ದಾರ ಶಿವಾನಂದ ಉಳ್ಳೆಗಡ್ಡಿ ಅವರಿಗೆ ಮನವಿ ಸಲ್ಲಿಸಿ ಅವರು ಗುರುವಾರ ಮಾತನಾಡಿದರು.

ಲಿಂಗನಮಠ ಗ್ರಾಮದ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ  ಅನೇಕ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆಯಲು ಹೋದಾಗ ಸರಿಯಾಗಿ ಸ್ಪಂದನೆ ನೀಡದೆ, ಸರ್ಕಾರಿ ಸೇವೆಗೆ ಸೇರಲು ಪ್ರಯತ್ನಿಸುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ನಡತೆ ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ  ನೀಡದೆ ಸತಾಯಿಸಿದ್ದಾರೆ. ಮಾಜಿ ಶಾಸಕ ಅರವಿಂದ ಪಾಟೀಲ  ಇವರು ಸ್ವತಃ  ಬಂದು ನಡತೆ ಪ್ರಮಾಣ ಪತ್ರವನ್ನು ಕೊಡಿಸಿರುವ ಉದಾಹರಣೆ ಇದೆ. ಅನಾವಶ್ಯಕವಾಗಿ ಕಾಲಹರಣ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ರೀತಿ ಕಿರುಕುಳ ನೀಡುತ್ತಿದ್ದಾರೆ.

ಮಕ್ಕಳು ಶಾಲೆಯನ್ನು ಬಹಿಷ್ಕರಿಸಿದಾಗ, ಮುಖ್ಯೋಪಾಧ್ಯಾಯರ ವರ್ಗಾವಣೆ ಕುರಿತು ಗ್ರಾಮಸ್ಥರೆಲ್ಲರೂ ಸೇರಿ ಶಿಕ್ಷಣ ಇಲಾಖೆಗೆ ತಿಳಿಸಿದರೂ ಇತ್ತ ಗಮನ ಹರಿಸಿಲ್ಲ. ಈ ವಿಷಯವಾಗಿ ಪಾಲಕರು  ವಿಚಾರಿಸಿದರೆ ಅವರ ಜೊತೆಗೆ  ಸರಿಯಾಗಿ ಸ್ಪಂದಿಸುವುದಿಲ್ಲ.ಅವರು ಶಾಲೆಯ ಸೇವೆಗೆ ಸರಿಯಾದ ಸಮಯಕ್ಕೆ ಹಾಜರಿರುವುದಿಲ್ಲ. ಶಾಲಾ ಸಮಯದಲ್ಲಿ ಹೆಚ್ಚಾಗಿ ಕೋರ್ಟ ಕಚೇರಿಗೆ ಸುತ್ತಾಡುತ್ತಾ ಕಾಲಹರಣ ಮಾಡುತ್ತಾರೆ. ಪಾಲಕರು ಪ್ರೌಢ ಶಾಲೆಗೆ ಭೇಡಿ ನೀಡಲು ಹೋದಾಗ ವೀಡಿಯೊ ರಿಕಾರ್ಡಿಂಗ್ ಮಾಡಿ ಬೆದರಿಸಿ ಕಳುಹಿಸುತ್ತಾರೆ. ಗ್ರಾಮದ ಹಿರಿಯರು ವಿಚಾರಿಸಲು ಹೋದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿ ಬೇದರಿಕೆ ಉಂಟು ಮಾಡಿದ ಘಟನೆ ಸಹ ನಡೆದಿದೆ. ಶಾಲೆ ಸುತ್ತಮುತ್ತ ಯಾರೂ ಹೋಗದ ಹಾಗೆ ವಾತಾವರಣ ನಿರ್ಮಾಣ ಮಾಡಿದ್ದಾರೆ. ಹಾಗೂ ಯಾವುದೇ ಅಧಿಕಾರಿಗಳಿಗೆ ಕ್ಯಾರೆ ಅನ್ನದೇ ರಾಜಕೀಯ ಪ್ರಭಾವ ಬೀರಿ ಇದೇ ಪ್ರೌಢಶಾಲೆಯಲ್ಲಿ ಬೀಡು ಬಿಟ್ಟಿದ್ದು ವಿದ್ಯಾರ್ಥಿಗಳ ಕುಂದು ಕೊರತೆ ಕೇಳುವವರು ಯಾರು ಇಲ್ಲವೇ ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಮುಖ್ಯೋಪಾಧ್ಯಾಯನಿಯ ಕಿರುಕುಳ ತಾಳದೇ ಅಲ್ಲಿದ್ದ ಶಿಕ್ಷಕರು ಕಣ್ಣೀರಿಡುತ್ತ ವರ್ಗಾವಣೆಯನ್ನು ಮಾಡಿಸಿಕೊಂಡು ಬೇರೆಡೆ ಹೋಗಿದ್ದಾರೆ. ಇಂತಹ ಸ್ಥಿತಿಯನ್ನರಿತ ಎಸ್.ಡಿ.ಎಮ್.ಸಿ. ಸಮಿತಿಯವರು ಇವರ ದುರಾಡಳಿತಕ್ಕೆ ಬೇಸತ್ತು ಸಾಕಷ್ಟು ಬಾರಿ ಅವರನ್ನು ವರ್ಗಾವಣೆ ಮಾಡಲು ನಿರ್ಣಯಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಿದ ದಾಖಲೆಗಳು ಸಹ ಇವೆ.  ವರ್ಗಾವಣೆಯಾಗದೇ ಇದ್ದುದರಿಂದ ಅವರ ದಬ್ಬಾಳಿಕೆಗೆ ಸಹಿಸದೆ ಬೇಸತ್ತು ಎಸ್.ಡಿ.ಎಮ್.ಸಿ. ಅಧ್ಯಕ್ಷರು ಹಾಗೂ ಸದಸ್ಯರು ರಾಜಿನಾಮೆ ಕೊಟ್ಟು ಹೋಗಿದ್ದಾರೆ. ಅವರನ್ನು ಸೇವೆಯಲ್ಲಿ ಮುಂದುವರೆಸಿದರೆ ಇದೇ ವರ್ಷವೇ ಶಾಲೆ ಮುಚ್ಚುವ ಪರಿಸ್ಥಿತಿ ಬಂದರು ಬರಬಹುದು ಎನ್ನುತ್ತಿದ್ದಾರೆ ಗ್ರಾಮಸ್ಥರು.

ಅನೇಕ ವಿದ್ಯಾರ್ಥಿಗಳು ಮುಖೋಪಾಧ್ಯಾಯರ ವರ್ತನೆಗೆ ಬೇಸತ್ತು ಬೇರೆ ಶಾಲೆಗಳಿಗೆ ದಾಖಲಾತಿಯನ್ನು ಪಡೆದಿದ್ದಾರೆ.  ಅವರು ತಮ್ಮ ಹುದ್ದೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬೇರೆ ಗ್ರಾಮದ ಮಕ್ಕಳ ದಾಖಲಾತಿಯನ್ನು ಮಾಡಿಸಿದ್ದಾರೆ. ಮಕ್ಕಳ ಶಿಕ್ಷಣದ ಹಕ್ಕುಗಳಿಗೆ ಬೆಲೆಯೇ ಇಲ್ಲವೇ ?ಎಂಬ ಆತಂಕದಲ್ಲಿ ಪಾಲಕರಿದ್ದಾರೆ.

ಕ.ರ.ವೇ ಅಧ್ಯಕ್ಷ ಮಹಾಂತೇಶ ಸಂಗೊಳ್ಳಿ ಮಾತನಾಡಿ, ಅಕ್ಟೋಬರ್ ೨೮ ರಂದು ಲಿಂಗನಮಠ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ದರೋಡೆಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎ.ಎಸ್.ಪಿ. ಪ್ರದೀಪ ಗುಂಟೆ ಇವರ ನೇತೃತ್ವದ ಜಿಲ್ಲಾ ಮಟ್ಟದ ತನಿಖಾತಂಡ ಲಿಂಗನಮಠ ಗ್ರಾಮಕ್ಕೆ ಬಂದು ತನಿಖೆ ನಡೆಸುತ್ತಿದ್ದು ಬ್ಯಾಂಕಿನ ಹಿಂಬದಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಮೈದಾನದಿಂದ ಕಳ್ಳರು ಹಾದು ಹೋಗಿರುವುದನ್ನು ಪೋಲಿಸ್ ಶ್ವಾನದಳದಿಂದ ಪತ್ತೆಯಾಗಿದ್ದು ಈ ಕುರಿತು ಹೆಚ್ಚಿನ ತನಿಖೆಗಾಗಿ  ಪೌಢ ಶಾಲೆ ಆವರಣದಲ್ಲಿರುವ ಸಿ.ಸಿ. ಟಿ.ವಿ. ದೃಶ್ಯಾವಳಿ ಪರಿಶೀಲಿಸಲು ಶಾಲೆಗೆ ಭೇಟಿ ನೀಡಿ ಲಿಖಿತ ಮನವಿ ನೀಡಿದ್ದರೂ  ಪೋಲಿಸ್ ಇಲಾಖೆಯ ತನಿಖಾ ತಂಡಕ್ಕೆ ಸಹಕಾರ ನೀಡದೆ ತನಿಖೆಗೆ ಅಡ್ಡಿಪಡಿಸಿರುತ್ತಾರೆ. ಈ ಮುಖ್ಯೋಪಾಧ್ಯಾಯನಿಯ ವರ್ತನೆಯನ್ನು ಕಂಡು ಗ್ರಾಮಸ್ಥರು ಬ್ಯಾಂಕಿನ ದರೋಡೆ ಪ್ರಕರಣಕ್ಕೂ ಹಾಗೂ ಶಾಲಾ ಮುಖ್ಯೋಪಾಧ್ಯಾನಿಗೂ ಏನಾದರೂ ನಂಟು ಇರಬಹುದು ಎಂದು ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಇಂತಹ ಹಲವಾರು ಸಮಸ್ಯೆಗಳು ಉದ್ಭವಿಸಿದಾಗ ಗ್ರಾಮಸ್ಥರಿಗೆ, ಶಾಲೆಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾದ ಸಹಕಾರ ನೀಡದೆ ತನ್ನ ಕರ್ತವ್ಯದ ನಿರ್ಲಕ್ಷತನ ಎತ್ತಿ ತೋರಿಸುತ್ತಿದ್ದಾರೆ. ಜೊತೆಗೆ  ಇವರು ಲಿಂಗನಮಠ ಪ್ರೌಢ ಶಾಲೆಯ ಕರ್ತವ್ಯಕ್ಕೆ ಸೇರುವ ಮುಂಚೆ ಹಾಗೂ ಸೇರಿದ ನಂತರದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಇಂದಿನ ಸದ್ಯದ ವಿದ್ಯಾರ್ಥಿಗಳ ಸಂಖ್ಯೆ ಪರಿಸ್ಥಿತಿ ಗಮನಿಸಿದರೆ ಅಜಗಜಾಂತರ ಕುಂಠಿತವಾಗಿರುವುದು  ಕಂಡು ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಉಳಿದಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಪ್ರೌಢ ಶಾಲೆಗಳಲ್ಲಿ ದಾಖಲೆ ಪಡೆದಿರುತ್ತಾರೆ. ಬೇರೆ ಶಾಲೆಗಳಿಗೆ ದಾಖಲಾತಿಗಳನ್ನು ಮಾಡಿದ ಮಕ್ಕಳು ಕೂಡ ಕಿಕ್ಕಿರಿದ ಬಸ್ಸುಗಳಲ್ಲಿ ಸಂಚರಿಸಿ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ, ಶಾಲೆಯ ಈ ಪರಿಸ್ಥಿತಿಯನ್ನು ಅವಲೋಕಿಸಿದರೆ ನಮ್ಮೂರಿನ ಗ್ರಾಮದ ಮಕ್ಕಳು ನಮ್ಮೂರಿನಲ್ಲಿ ಶಾಲೆ ಕಲಿತು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ಕೊಟ್ಯಾಂತರ ರೂಪಾಯಿಗಳು ಬೆಲೆ ಬಾಳುವ ಜಮೀನನ್ನು ದೇಣಿಗೆಯಾಗಿ ಕೊಟ್ಟು ಹರ್ಷದಿಂದ ಕನಸು ಕಂಡ ಹಿರಿಯ ಜೀವಿಗಳಿಗೆ ತಣ್ಣೀರು ಎರಚಿದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಆದ್ದರಿಂದ ಇಂತಹ ಮುಖ್ಯೋಪಾಧ್ಯಾಯನಿ  ಗ್ರಾಮಕ್ಕೆ ಹಾಗೂ ಶಿಕ್ಷಣಕ್ಕೆ ಮಾರಕವಾಗಿರುತ್ತಾರೆ.ಇಂತವರು ಶಿಕ್ಷಣ ಇಲಾಖೆಗೆ ಭೂಷಣರೇ ? ಇಂತಹವರು ನಮ್ಮ ಗ್ರಾಮದ ಶಾಲೆಗೆ ಬೇಕೆ? ಎಂದು ತನಿಖೆಗೆ ಬಂದ ಅಧಿಕಾರಿಗಳ ಸಮ್ಮುಖದಲ್ಲಿ ಜಮಾಯಿಸಿದ ನೂರಾರು ಪಾಲಕರು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ವಿಷಯಗಳನ್ನು ಕೂಲಂಕುಷವಾಗಿ ಪರೀಶಿಲಿಸಿ ಒಂದು ವಾರದ ಒಳಗಾಗಿ ಇಲ್ಲಿಂದ ಮುಖ್ಯೋಪಾಧ್ಯಾಯನಿಯ  ವರ್ಗಾವಣೆ ಮಾಡದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button