Latest

ಸಾರಿಗೆ ನೌಕರರ ಮುಷ್ಕರಕ್ಕೆ ಯಶ್ ಬೆಂಬಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಇಂದು 9 ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಸಾರಿಗೆ ಸಿಬ್ಬಂದಿಗಳ ಹೋರಾಟಕ್ಕೆ ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ನಟ ಯಶ್ ಅವರಿಗೆ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉತ್ತರವಾಗಿ ಪತ್ರ ಬರೆದಿರುವ ಯಶ್ ಸಾರಿಗೆ ಸಚಿವರಿಗೆ ನೌಕರರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

ಇಂದು ಯಶ್ ಏನೇ ಆಗಿರಬಹುದು ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ. ಮನೆಯಲ್ಲಿ ನಾನು ತಡ ಮಾಡಿದ್ರೆ ದಿನವೂ ನನ್ನ ಬಸ್ಸಿನಲ್ಲಿಯೇ ಬರುವ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ.. ಆಫೀಸ್‌ಗೆ ಲೇಟ್ ಆಗುತ್ತೇನೋ.. ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ. ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರ ದಿನಚರಿ ಹೀಗೇ ಇರುತ್ತೆ… ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯವಿರಬಹುದು. ರಜೆಗಳಿಗಾಗಿ ನಡೆಯುವ ತಕರಾರುಗಳಿಬಹುದು. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು.

ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು.. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ. ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನ. ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.

ಸಮಾಧಾನ ವಿಷಯ ಅಂದ್ರೆ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬೇಡಿಕೆ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದಾರೆ. ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತವಾಗಿ ಮಾತುಕತೆ ನಡೆಸುವುದು ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ ಎಂದು ಯಶ್ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button