*ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಟ್ರಕ್*: *12 ಮಂದಿ ಸಾವು, ಹಲವರಿಗೆ ಗಂಭೀರ ಗಾಯ!*

ಪ್ರಗತಿವಾಹಿನಿ ಸುದ್ದಿ: ನವರಾತ್ರಿ ಸಂಭ್ರಮದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಭತ್ತ ತುಂಬಿದ್ದ ಟ್ರಕ್ ಹರಿದ ಪರಿಣಾಮ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ನುಗ್ಗಿದ ಟ್ರಕ್ ದೇವಸ್ಥಾನದ ಗೇಟ್ ಮತ್ತು ಹೊರಗೋಡೆಗೆ ಡಿಕ್ಕಿ ಹೊಡೆದಿದೆ. ಭಾನುವಾರ ಬೆಳಗಿನ ಜಾವ ಸುಮಾರು 1.30ಕ್ಕೆ ಸಂಭವಿಸಿದ ಈ ದುರಂತದಿಂದ ದೇವಸ್ಥಾನದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಛಿನೋರ್ ಕಡೆಯಿಂದ ಬರುತ್ತಿದ್ದ ಟ್ರಕ್ ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭಕ್ತರ ಗುಂಪಿನತ್ತ ನುಗ್ಗಿದೆ. ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದ ರಸ್ತೆಯಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಮುಂದುವರಿದ ಟ್ರಕ್, ರಸ್ತೆಯಲ್ಲಿದ್ದ ಜನರು ಮತ್ತು ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ದೇವಸ್ಥಾನದ ಪ್ರವೇಶದ್ವಾನಕ್ಕೆ ಅಪ್ಪಳಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಅಪಘಾತದಲ್ಲಿ ಒಟ್ಟು 39 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಐದರಿಂದ ಆರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಕೆಲವರಿಗೆ ಮೂಳೆ ಮುರಿತವಾಗಿದೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ವಾಲಿಯರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಅಪಘಾತದ ಮಾಹಿತಿ ಸಿಕ್ಕ ತಕ್ಷಣ ಆಂಬ್ಯುಲೆನ್ಸ್ಗಳು ಮತ್ತು ಪರಿಹಾರ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ನವರಾತ್ರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ಗಳು ಮತ್ತು ಪೊಲೀಸ್ ತಪಾಸಣಾ ಕೇಂದ್ರ ಸ್ಥಾಪಿಸಲಾಗಿತ್ತು. ಹೀಗಿದ್ದರೂ ಟ್ರಕ್ ನಿರ್ಬಂಧಿತ ರಸ್ತೆಗೆ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಹೇಳಿದ್ದಾರೆ.
ಟ್ರಕ್ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ, ಚಾಲಕನ ನಿಯಂತ್ರಣ ಏಕೆ ತಪ್ಪಿತು ಮತ್ತು ವಾಹನ ಎಡಕ್ಕೆ ತಿರುಗಿ ಜನರತ್ತ ನುಗ್ಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪ್ರಾದೇಶಿಕ ಸಾರಿಗೆ ಕಚೇರಿಯ (RTO) ತಂಡವನ್ನು ನಿಯೋಜಿಸಲಾಗಿದೆ. ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಟ್ರಕ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಭತ್ತ ತುಂಬಲಾಗಿತ್ತು. ವಾಹನ ಏಕಾಏಕಿ ನಿಯಂತ್ರಣ ತಪ್ಪಿ ಜನರು ಮತ್ತು ಅಂಗಡಿಗಳ ಮೇಲೆ ಹರಿದಿದೆ.
ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಟ್ರಕ್ನ ತಾಂತ್ರಿಕ ಸ್ಥಿತಿ, ಅತಿಯಾದ ಭಾರ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



