Kannada NewsKarnataka NewsLatest

*ಅ.20, 21ರಂದು ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ!*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ದುರ್ಗಾ ದೇವಿ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಸಂಚಾರ ನಿರ್ಬಂಧದ ಬಿಸಿ ತಟ್ಟಲಿದೆ. ಹಲಸೂರು ಕೆರೆಯಲ್ಲಿ 20 ಸಾವಿರಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ ನಡೆಯಲಿರುವುದರಿಂದ ಎರಡು ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಹೀಗಾಗಿ ಅಕ್ಟೋಬರ್ 20 ಮತ್ತು 21ರಂದು ಈ ಭಾಗದಲ್ಲಿ ಸಂಚರಿಸುವವರು ಮಾರ್ಗ ಬದಲಾವಣೆ ಗಮನಿಸಿ ಪ್ರಯಾಣಿಸುವುದು ಅಗತ್ಯವಾಗಿದೆ.

ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಅಕ್ಟೋಬರ್ 20 ಮತ್ತು 21ರಂದು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮರುದಿನ ಬೆಳಗಿನ ಜಾವ 6 ಗಂಟೆಯವರೆಗೆ ನಿರ್ದಿಷ್ಟ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೆನ್ಸಿಂಗ್ಟನ್-ಮರ್ಫಿ ರಸ್ತೆ ಜಂಕ್ಷನ್‌ನಿಂದ ಎಂಇಜಿ ಮೂಲಕ ಹಲಸೂರು ಕೆರೆ ಕಡೆಗೆ ಹೋಗುವ ಕೆನ್ಸಿಂಗ್ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಎಂಇಜಿ ಕಡೆಯಿಂದ ಕೆನ್ಸಿಂಗ್ಟನ್-ಮರ್ಫಿ ರಸ್ತೆ ಜಂಕ್ಷನ್ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಅದೇ ರೀತಿ, ತಿರುವಳ್ಳುವರ್ ಪ್ರತಿಮೆ ಜಂಕ್ಷನ್‌ನಿಂದ ಅಣ್ಣಸ್ವಾಮಿ ಮೊದಾಲಿಯಾರ್ ರಸ್ತೆ ಮೂಲಕ ಆರ್‌ಬಿಐ ಜಂಕ್ಷನ್ ಹಾದು ಹಲಸೂರು ಕೆರೆ ಕಡೆಗೆ ಸಾಗುವ ರಸ್ತೆಯಲ್ಲೂ ದ್ವಿಮುಖ ಸಂಚಾರ ನಿರ್ಬಂಧಿಸಲಾಗುತ್ತದೆ. ಹಲಸೂರು ಕೆರೆ ಕಡೆಯಿಂದ ತಿರುವಳ್ಳುವರ್ ಪ್ರತಿಮೆ ಜಂಕ್ಷನ್ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಇರಲಿದೆ.

ಕೆನ್ಸಿಂಗ್ಟನ್ ರಸ್ತೆ ಕಡೆಯಿಂದ ಹಲಸೂರು ಕೆರೆ ಕಡೆಗೆ ತೆರಳುವ ವಾಹನಗಳು ಪರ್ಯಾಯವಾಗಿ ಗುರದ್ವಾರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗಂಗಾಧರ ಚೆಟ್ಟಿ ರಸ್ತೆ, ಡಿಕನ್ಸನ್ ರಸ್ತೆ, ಸೇಂಟ್ ಜಾನ್ಸ್ ರಸ್ತೆ ಹಾಗೂ ಸೇಂಟ್ ಚಾನ್ಸ್ ರಸ್ತೆ ಮೂಲಕ ಶ್ರೀ ಸರ್ಕಲ್, ಲಾವಣ್ಯ ಥಿಯೇಟರ್ ಜಂಕ್ಷನ್ ಮತ್ತು ನಾಗಾ ಜಂಕ್ಷನ್ ಹಾದಿಯಾಗಿ ಪುಲಕೇಶಿನಗರದ ಪ್ರೊಮಿನೇಡ್ ರಸ್ತೆ ಅಥವಾ ವೀಲರ್ ರಸ್ತೆ ಮೂಲಕ ಸಾಗಬಹುದು.

ತಿರುವಳ್ಳುವರ್ ಪ್ರತಿಮೆ ಜಂಕ್ಷನ್‌ನಿಂದ ಹಲಸೂರು ಕೆರೆ ಕಡೆಗೆ ಹೋಗುವ ವಾಹನಗಳು ಗಂಗಾಧರ ಚೆಟ್ಟಿ ರಸ್ತೆ ಮೂಲಕ ತೆರಳಿ, ಆರ್‌ಬಿಎನ್‌ಎಂಎಸ್ ಸಮೀಪ ಎಡಕ್ಕೆ ತಿರುಗಿ ಡಿಕನ್ಸನ್ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ಸೇಂಟ್ ಚಾನ್ಸ್ ರಸ್ತೆ, ಶ್ರೀ ಲಾವಣ್ಯ ಥಿಯೇಟರ್ ಜಂಕ್ಷನ್ ಮತ್ತು ನಾಗಾ ಜಂಕ್ಷನ್ ಮೂಲಕ ಪುಲಕೇಶಿನಗರದ ಮಿಲ್ಲರ್ ರಸ್ತೆ ಅಥವಾ ಹಲಸೂರು ಕೆರೆ ಕಡೆಗೆ ಪ್ರಯಾಣಿಸಬಹುದು.

ಇನ್ನು ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಮುತ್ತಲಿನ ಕೆನ್ಸಿಂಗ್ಟನ್ ರಸ್ತೆ, ಅಣ್ಣಸ್ವಾಮಿ ಮೊದಾಲಿಯಾರ್ ರಸ್ತೆ ಹಾಗೂ ಟ್ಯಾಂಕ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್‌ಗೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ. ವಿಸರ್ಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಪೊಲೀಸ್ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button