*ಇಮ್ರಾನ್ ಖಾನ್ಗೆ ಭಾರತ ತೊರೆಯುವ ನೋಟಿಸ್*: *ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟ!*

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತ ತೊರೆಯುವಂತೆ ನೀಡಿರುವ ನೋಟಿಸ್ಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಕಾನೂನು ಸಮರ ಆರಂಭಿಸಿದ್ದಾರೆ. ಅಮೆರಿಕದ ಪ್ರಜೆ ಹಾಗೂ ಭಾರತೀಯ ಸಾಗರೋತ್ತರ ಪೌರತ್ವ (OCI) ಕಾರ್ಡ್ದಾರರಾಗಿರುವ ಇಮ್ರಾನ್ ಖಾನ್, ಮುಂಬೈ ಪೊಲೀಸರು ಜಾರಿಗೊಳಿಸಿದ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಪೂರ್ವ ವಿಚಾರಣೆ ನಡೆಸದೆ, ಶೋಕಾಸ್ ನೋಟಿಸ್ ನೀಡದೆ ದೇಶ ತೊರೆಯುವಂತೆ ಆದೇಶಿಸಿರುವುದು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
43 ವರ್ಷದ ಇಮ್ರಾನ್ ಖಾನ್ ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಮತ್ತು ಗೆಳತಿ ಲೇಖಾ ವಾಷಿಂಗ್ಟನ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸ್ ವ್ಯಾನ್ನಲ್ಲಿ ಕುಳಿತಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಇಮ್ರಾನ್ ಖಾನ್, “ನಾನು ಡ್ರೈವ್ಗೆ ಹೋಗುತ್ತಿದ್ದೇನೆ” ಎಂದು ವ್ಯಂಗ್ಯವಾಗಿ ಬರೆದಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಯಾವುದೇ ನಿರ್ದಿಷ್ಟ ಬೇಡಿಕೆಯೊಂದಿಗೆ ಪ್ರತಿಭಟನೆಗೆ ಬಂದಿರಲಿಲ್ಲ. ಮುಂಬೈನಲ್ಲಿ ವಾಸಿಸುವ ವ್ಯಕ್ತಿಯಾಗಿ ಜನರ ಸ್ವಾತಂತ್ರ್ಯವನ್ನು ಏಕೆ ನಿರ್ಬಂಧಿಸಲಾಗುತ್ತಿದೆ ಮತ್ತು ಜನರ ಧ್ವನಿಯನ್ನು ಏಕೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ತಿಳಿಯಲು ಬಂದಿದ್ದಾಗಿ ಹೇಳಿದ್ದರು.
ಇದೀಗ ಹಿರಿಯ ವಕೀಲ ಜುಲ್ಫಿಕರ್ ಮೆಮನ್ ಮತ್ತು ಎಂಝೆಡ್ಎಂ ಲೀಗಲ್ ಸಂಸ್ಥೆಯ ಮೂಲಕ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನಿರ್ದೇಶನವು ಕಾನೂನುಬಾಹಿರ, ತೀವ್ರ ಹಾಗೂ ನ್ಯಾಯಸಮ್ಮತವಲ್ಲದ ಕ್ರಮ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಯಾವುದೇ ವಿಚಾರಣೆ ನಡೆಸದೆ, ಶೋಕಾಸ್ ನೋಟಿಸ್ ನೀಡದೆ ಅಥವಾ ಸ್ಪಷ್ಟನೆ ಸಲ್ಲಿಸಲು ಅವಕಾಶ ಕಲ್ಪಿಸದೆ ಏಕಪಕ್ಷೀಯವಾಗಿ ಆದೇಶ ಹೊರಡಿಸಲಾಗಿದೆ ಎಂಬುದು ಇಮ್ರಾನ್ ಖಾನ್ ಪರ ವಕೀಲರ ಆಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಲಾಗಿದೆ.
ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಠ್ನಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅರ್ಜಿಯ ತುರ್ತು ವಿಚಾರಣೆ ನಡೆಯುವ ನಿರೀಕ್ಷೆಯಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ನೀಡಲಾದ ನೋಟಿಸ್ ಕಾನೂನಿನ ಪ್ರಕಾರ ಸರಿಯೇ ಎಂಬ ಪ್ರಶ್ನೆಗೆ ಹೈಕೋರ್ಟ್ ವಿಚಾರಣೆಯಲ್ಲಿ ಉತ್ತರ ಸಿಗಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



