Karnataka News

*ಸಾವನ್ನೇ ಗೆದ್ದು ಬಂದ ಯುವತಿ*

ಪವಾಡ ಸದೃಶ ರೀತಿಯಲ್ಲಿ ಬಚಾವ್


ಪ್ರಗತಿವಾಹಿನಿ ಸುದ್ದಿ:
ಕೆರೆಕೋಡಿ ಬಳಿ ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದ ಯುವತಿ ಸಾವನ್ನಪ್ಪಿದ್ದಾಳೆ ಎಂದೇ ಹೇಳಲಾಗಿತ್ತು. ಆದರೆ ಪವಾಡ ಸದೃಶ ರೀತಿಯಲ್ಲಿ ಆಕೆ ಬದುಕಿ ಬಂದಿದ್ದು, ಪೋಷಕರಿಗೆ ಹೋದ ಜೀವ ಬಂದಂತಾಗಿದೆ.

ನಿನ್ನೆ ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ತುಮಕೂರಿನ ಗುಬ್ಬಿ ಮೂಲದ 19 ವರ್ಷದ ಯುವತಿ ಹಂಸ, ಕುಟುಂಬದವರು, ಸ್ನೇಹಿತರೊಂದಿಗೆ ಮಂದಾರಗಿರಿ ಬೆಟ್ಟಕ್ಕೆ ಹೋಗಿದ್ದಳು. ಬಳಿಕ ಅಲ್ಲಿಯೇ ಸಮೀಪವಿದ್ದ ಮೈದಾಳ ಕೆರೆಕೋಡಿ ನೋಡಲೆಂದು ಹೋಗಿದ್ದಳು. ಈ ವೇಳೆ ಸೆಲ್ಫಿಗೆ ಪೋಜು ನೀಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಕೋಡಿಗೆ ಬಿದ್ದಿದ್ದಾಳೆ.

ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ, ಕಲ್ಲು ಬಂಡೆಗಳ ಕಂದಕಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಯುವತಿಗಾಗಿ ನಿನ್ನೆಯಿಂದ ಹುಡುಕಾಡಿದ್ದರು. ಆದರೆ ಇಂದು ಯುವತಿ ಕಲ್ಲುಬಂಡೆಗಳ ಮಧ್ಯೆ ಸಿಲುಕಿರುವ ರೀತಿಯಲ್ಲಿ ಪತ್ತೆಯಾಗಿದ್ದಾಳೆ. ಯುವತಿ ಉಸಿರಾಡುತ್ತಿದ್ದು, ಜೀವಂತವಾಗಿದ್ದಾಳೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

ಯುವತಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಬಂಡೆಗಲ್ಲುಗಳ ಪ್ರಪಾತಕ್ಕೆ ಬಿದ್ದಿದ್ದರೂ ಯುವತಿ ಪವಾಡ ರೀತಿಯಲ್ಲಿ ಸಾವನ್ನೇ ಗೆದ್ದು ಬಂದಿದ್ದಾಳೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button