*ಬೆಳಗಾವಿಯಲ್ಲಿ ಡ್ರಾಗನ್ ಚಾಕು ಹಿಡಿದು ತಿರುಗುತ್ತಿದ್ದ ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಹೆಚ್ಚುತ್ತಿರುವ ಚಾಕು ಇರಿತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಮಾರ್ಕೆಟ್ ಪೊಲೀಸ್ ಠಾಣೆಯ ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್, ಹರಿತವಾದ ಡ್ರಾಗನ್ ಚಾಕು ಹೊಂದಿದ್ದ ಇಬ್ಬರನ್ನು ಬಂಧಿಸಿದೆ.
ನವೆಂಬರ್ 10ರಂದು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಭರತೇಶ ಕಾಲೇಜಿನ ಕಾರ್ ಪಾರ್ಕಿಂಗ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಕಂಡುಬಂದಿದ್ದಾರೆ.
ಈ ವೇಳೆ ಆರೋಪಿಗಳಾದ ತಿಲಕವಾಡಿಯ ಚೌಗಲೇವಾಡಿ ನಿವಾಸಿ ಯಶ್ ಉದಯ ಹನ್ನಿಕೇರಿ (20) ಹಾಗೂ ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಶಿರೀಶ್ ಅಲಿಯಾಸ್ ಶ್ರೀಕಿರಣ ಚೌಗುಲೆ (23) ಅವರನ್ನು ತಪಾಸಣೆ ನಡೆಸಿದಾಗ, ಅವರ ಬಳಿ ಕಬ್ಬಿಣದ ಹರಿತವಾದ ಡ್ರಾಗನ್ ಚಾಕು ಪತ್ತೆಯಾಗಿದೆ.
ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಕಾನೂನುಬಾಹಿರವಾಗಿ ಚಾಕು ಹೊಂದಿದ್ದ ಆರೋಪದ ಮೇರೆಗೆ ಇಬ್ಬರನ್ನು ಚಾಕು ಸಮೇತ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 237/2026ರ ಅಡಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 25(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 97ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಪಿಎಸ್ಐ ಮಣಿಕಂಠ ಪೂಜಾರಿ ಹಾಗೂ ಮಾರ್ಕೆಟ್ ಠಾಣೆಯ ಸಿಬ್ಬಂದಿ ನಡೆಸಿದ್ದು, ಪೊಲೀಸರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.




