Kannada NewsKarnataka NewsLatestPolitics

ಲಂಚದ ಆರೋಪಕ್ಕೆ ಡಿಸಿ ತಿರುಗೇಟು: ಮತ್ತೊಂದು ವಿಡಿಯೋ ಮೂಲಕ ಕುಮಾರಸ್ವಾಮಿಗೆ ತಿರುಗುಬಾಣ!

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಜಿಲ್ಲಾಧಿಕಾರಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಾಟ್ಸಾಪ್ ಚಾಟ್‌ಗಳ ಸತ್ಯಾಸತ್ಯತೆ ಪರಿಶೀಲಿಸದೆ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ನಿರಪರಾಧಿಗಳನ್ನು ದೂಷಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

ಹಾಸನಾಂಬೆ ದೇವಾಲಯದ ಆವರಣದಲ್ಲೇ ವಿಡಿಯೋ ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ಲತಾಕುಮಾರಿ, ತಮ್ಮ ಸಿಬ್ಬಂದಿಯ ಕುಟುಂಬದವರಿಗೂ ಈ ಆರೋಪಗಳಿಂದ ನೋವಾಗಿದೆ ಎಂದು ಹೇಳಿದ್ದಾರೆ. ಸಿಬ್ಬಂದಿಯೊಬ್ಬರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾಂಗಲ್ಯವನ್ನೇ ಒತ್ತೆಯಿಟ್ಟು ಜೀವನ ನಡೆಸುತ್ತಿದ್ದಾರೆ. ಇಂತಹವರ ಬಗ್ಗೆ ಅಸಂಬದ್ಧ ಆರೋಪಗಳು ಕೇಳಿಬಂದಾಗ ಅವರ ಕುಟುಂಬದವರಿಗೆ ಎಷ್ಟು ನೋವಾಗಬಹುದು ಎಂದು ಪ್ರಶ್ನಿಸಿದ್ದಾರೆ.

ಇನ್ನು ಜಿಲ್ಲಾಧಿಕಾರಿಯ ಒಂದು ದಿನದ ಖರ್ಚು ₹60 ಸಾವಿರ ಎಂದು ಆರೋಪಿಸಿರುವುದಕ್ಕೂ ಅವರು ತಿರುಗೇಟು ನೀಡಿದ್ದಾರೆ. “ನಾನೇನು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಜೀವನ ಮಾಡುತ್ತಿದ್ದೀನಾ? ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿ ದುಡಿಯುವವರಿಗೆ ಇಷ್ಟೊಂದು ಖರ್ಚು ಬೇಕಾಗುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.

ಯಾರೋ ಇಬ್ಬರು ನಡೆಸಿರುವ ವಾಟ್ಸಾಪ್ ಸಂಭಾಷಣೆಯ ಪ್ರಿಂಟ್‌ಔಟ್‌ಗಳನ್ನು ಬಿಡುಗಡೆ ಮಾಡಿ, ಸತ್ಯಾಸತ್ಯತೆ ಪರಿಶೀಲಿಸದೆ ಮಾಧ್ಯಮಗಳಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈ ವಿಚಾರವನ್ನು ತನಿಖೆಗೆ ಒಪ್ಪಿಸಿದರೆ ನಿಜಾಂಶ ಹೊರಬರಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಸಿಬ್ಬಂದಿಗೆ ಧೈರ್ಯದಿಂದ ಇರುವಂತೆ ಹೇಳಿರುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ಅನುಭವಿಸಲೇಬೇಕು ಎಂದಿದ್ದಾರೆ. ತಮ್ಮ ಪಿಎ ವಿಭಾಗದ ಸಿಬ್ಬಂದಿಯಾಗಲಿ ಅಥವಾ ಇತರ ಅಧಿಕಾರಿಗಳಾಗಲಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ಪ್ರಕರಣದಲ್ಲಿ ವ್ಯವಸ್ಥಿತವಾಗಿ ಕೆಲವರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ತಾಳ್ಮೆಯಿಂದ ಕಾಯಬೇಕು. ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡಬಾರದು. ಯಾರನ್ನೂ ಅಪರಾಧಿ ಎಂದು ನಿರ್ಧರಿಸುವ ಅಧಿಕಾರ ಸಾರ್ವಜನಿಕರಿಗೆ ಅಥವಾ ಮಾಧ್ಯಮಗಳಿಗೆ ಇಲ್ಲ ಎಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಹಾಸನದ ಲಂಚದ ಆರೋಪ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ನೇರವಾಗಿ ಪ್ರತಿಕ್ರಿಯಿಸಿದ್ದು, ಇದೀಗ ಎಫ್‌ಎಸ್‌ಎಲ್ ವರದಿ ಹಾಗೂ ಮುಂದಿನ ತನಿಖೆಯತ್ತ ಎಲ್ಲರ ಗಮನ ನೆಟ್ಟಿದೆ.

Related Articles

Back to top button