Film & EntertainmentKannada NewsKarnataka NewsLatest

*ದುರಂಧರ್‌ ದಾಖಲೆ ಧೂಳಿಪಟ ಮಾಡಿದ ರಾಮಾಯಣ*: *ಮೊದಲ ಸೋಮವಾರದ ಕಲೆಕ್ಷನ್‌ ಎಷ್ಟು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಐದು ದಿನಗಳಲ್ಲೇ ಚಿತ್ರದ ಗಳಿಕೆ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಮೊದಲ ಸೋಮವಾರದ ಕಲೆಕ್ಷನ್ ಸಿನಿರಂಗದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ.

ನವೆಂಬರ್ 9ರ ಸೋಮವಾರದಂದು ಭಾರತದಲ್ಲಿ ಬರೋಬ್ಬರಿ ₹107.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಒಂದೇ ದಿನದಲ್ಲಿ ದೇಶಾದ್ಯಂತ 23,911 ಪ್ರದರ್ಶನಗಳನ್ನು ಕಂಡಿರುವ ಸಿನಿಮಾ, ಈ ಹಿಂದೆ ‘ಧುರಂಧರ್ 2’ ಹೆಸರಿನಲ್ಲಿದ್ದ ಮೊದಲ ಸೋಮವಾರದ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ. ‘ಧುರಂಧರ್ 2’ ಸಿನಿಮಾ ಮೊದಲ ಸೋಮವಾರ ₹60 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು.

ಇದೀಗ ರಾಮಾಯಣ ಸಿನಿಮಾದ ಐದು ದಿನಗಳ ಒಟ್ಟು ಲೆಕ್ಕಾಚಾರವೂ ಅಚ್ಚರಿ ಮೂಡಿಸಿದೆ. ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ₹346.35 ಕೋಟಿ ಹಾಗೂ ಗ್ರಾಸ್ ಕಲೆಕ್ಷನ್ ₹413.90 ಕೋಟಿ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಉತ್ತಮ ಪ್ರದರ್ಶನ ನೀಡಿದ್ದು, ಸೋಮವಾರವೊಂದರಲ್ಲೇ ₹25 ಕೋಟಿ ಗಳಿಸಿದೆ ಎನ್ನಲಾಗಿದೆ. ಇದರೊಂದಿಗೆ ಒಟ್ಟು ವಿದೇಶಿ ಗಳಿಕೆ ₹250 ಕೋಟಿಗೆ ಏರಿಕೆಯಾಗಿದೆ.

ಈ ಲೆಕ್ಕಾಚಾರದ ಪ್ರಕಾರ, ಐದು ದಿನಗಳ ಅಂತ್ಯಕ್ಕೆ ವಿಶ್ವಾದ್ಯಂತ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ₹663.90 ಕೋಟಿ ತಲುಪಿದೆ. ಚಿತ್ರದ ಹಿಂದಿ ಆವೃತ್ತಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಒಟ್ಟಾರೆ ಥಿಯೇಟರ್ ಆಕ್ಯುಪೆನ್ಸಿ ಶೇ.73.6ರಷ್ಟಿತ್ತು ಎನ್ನಲಾಗಿದೆ.,

ಚೆನ್ನೈನಲ್ಲಿ ಶೇ.94, ಬೆಂಗಳೂರಿನಲ್ಲಿ ಶೇ.90.8ರಷ್ಟು ಆಸನಗಳು ಭರ್ತಿಯಾಗಿದ್ದರೆ, ಹೈದರಾಬಾದ್‌ನಲ್ಲಿ ಶೇ.77.5, ದೆಹಲಿ-ಎನ್‌ಸಿಆರ್‌ನಲ್ಲಿ ಶೇ.72.5 ಹಾಗೂ ಮುಂಬೈನಲ್ಲಿ ಶೇ.69.3ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.

ಸುಮಾರು ₹4,000 ಕೋಟಿ ನಿರ್ಮಾಣ ವೆಚ್ಚದ ರಾಮಾಯಣ ಚಿತ್ರ, 2026ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲೂ ಮೂರನೇ ಸ್ಥಾನ ಪಡೆದಿದೆ. ₹1,852 ಕೋಟಿ ಗಳಿಸಿರುವ ‘ಧುರಂಧರ್: ದಿ ರಿವೇಂಜ್’ ಮತ್ತು ₹821 ಕೋಟಿ ಗಳಿಸಿರುವ ‘ಜೈಲರ್ 2’ ಮೊದಲ ಎರಡು ಸ್ಥಾನಗಳಲ್ಲಿವೆ.

ಆರಂಭದ ಐದು ದಿನಗಳಲ್ಲೇ ಭರ್ಜರಿ ಗಳಿಕೆ ಮಾಡಿರುವ ‘ರಾಮಾಯಣ’ ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.

Related Articles

Back to top button