*ಸೋನಿಯಾ ಗಾಂಧಿ ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥನದಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love), ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ.
ದೆಹಲಿಯ ಖಾನ್ ಮಾರ್ಕೆಟ್ನಲ್ಲಿ ಸೋನಿಯಾ ಗಾಂಧಿ ಪುಸ್ತಕ ಮಾರಾಟ ಭರದಿಂದ ಸಾಗಿದೆ. ಭಾರತದ ಆಧುನಿಕ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ, ಭಾವನಾತ್ಮಕ ಮತ್ತು ಆತ್ಮಾವಲೋಕನದ ಚಿತ್ರಣವನ್ನು ಈ ಪುಸ್ತಕ ಒಳಗೊಂಡಿದೆ.
ತಮ್ಮ ಪುಸ್ತಕದಲ್ಲಿ ಸೋನಿಯಾ ಗಾಂಧಿ ಹಲವು ನಾಯಕರ ಬಗ್ಗೆ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಬರೆದಿದ್ದಾರೆ. ಪ್ರಧಾನಿ ಮೋದಿಯವರ ಜೊತೆ ತಮಗೆ ಯಾವುದೇ ನೇರ ಒಡನಾಟವಿರಲಿಲ್ಲ. ಪರಸ್ಪರ ಮುಖಾಮುಖಿಯಾದಾಗಲೆಲ್ಲಾ ಮೋದಿಯವರು ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಈಗ ಮೂರನೇ ಅವಧಿಗೆ ಅಧಿಕಾರದಲ್ಲಿದ್ದಾರೆ. ಇಲ್ಲಿಯವರೆಗೆ ಅವರ ಜೊತೆ ನನಗೆ ಯಾವುದೇ ನೈಜ ಒಡನಾಟ ಬೆಳೆದಿಲ್ಲ. ಸಂಸತ್ ಅಧಿವೇಶನದ ಮುಕ್ತಾಯದ ವೇಳೆ ಅಥವಾ ಪ್ರಮುಖ ಪಕ್ಷಗಳ ನಾಯಕರು ಲೋಕಸಭಾಬ್ ಸ್ಪೀಕರ್ ಕೊಠಡಿಯಲ್ಲು ಸೇರುವಂತಹ ಅಧಿಕೃತ ಸಭೆಗಳಲ್ಲಿ ನಾವು ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಅನೇಕರುಅಲ್ಲಿ ಉಪಸ್ಥಿತರಿರುತ್ತಾರೆ. ಆದರೆ ಮೋದಿ ಅವರು ನನ್ನೆದುರು ಬಂದಾಗ ನಾವು ಔಪಚಾರಿಕವಾಗಿ ’ನಮಸ್ತೆ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಪಕ್ಷಾತೀತವಾಗಿ ನಾಯಕರು ಪರಸ್ಪರ ಸೌಹಾರ್ದಯುತೆಯಿಂದ ಇರುತ್ತಿದ್ದ ಹಿಂದಿನ ದಿನಗಳಿಗಿಂತ ಇದು ಭಿನ್ನವಾಗಿದೆ. ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಬೇರೆಡೆಗೆ ಮುಖತಿರುಗಿಸಲು ಯತ್ನಿಸುತ್ತಾರೆ ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.
ಇನ್ನು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆದ ಬಳಿಕ ಮೋದಿಯವರು ನೀವು ಚೆನ್ನಾಗಿದ್ದೀರಾ? ಎಂದು ವಿಚಾರಿಸುತ್ತಿದ್ದರು. ಅದಕ್ಕೆ ನಾನು ಹೌದು. ಈಗ ನಾನು ಚನ್ನಾಗಿದ್ದೇನೆ ಧನ್ಯವಾದಗಳು ಎಂದು ಉತ್ತರಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಅಂತಹ ಚಿಕ್ಕಪುಟ್ಟ ಸಂಭಾಷಣೆಗಳನ್ನು ಹೊರತುಪಡಿಸಿ ನಾವು ಎಂದಿಗೂ ಸರಿಯಾಗಿ ಮಾತುಕತೆ ನಡೆಸಿಲ್ಲ. ವರ್ಷಗಳ ಕಾಲ ನಾವು ಔಪಚಾರಿಕವಾಗಿ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಮಾತ್ರ ವಿನಿಮಯ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.


