Film & EntertainmentKannada NewsLatestPolitics

*13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್*: *ಪತ್ನಿ ಜೊತೆಗಿನ ಸಂಬಂಧಕ್ಕೆ ಹೊಸ ತಿರುವು*

ಪ್ರಗತಿವಾಹಿನಿ ಸುದ್ದಿ: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ವಿಚಾರ ಮತ್ತೆ ಸುದ್ದಿಯಾಗಿದೆ. ಪತ್ನಿ ಅನ್ನಾ ಕೊನಿಡೇಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಇಬ್ಬರೂ ನಿರ್ಧರಿಸಿದ್ದಾರೆ. ಈ ಮೂಲಕ 13 ವರ್ಷಗಳ ವೈವಾಹಿಕ ಜೀವನದ ಬಳಿಕ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದಾಗಿ ದಂಪತಿ ಜಂಟಿ ಹೇಳಿಕೆ ನೀಡಿದ್ದಾರೆ.

ಜಂಟಿ ಹೇಳಿಕೆಯಲ್ಲಿ ಏನಿದೆ?

ಪವನ್ ಕಲ್ಯಾಣ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಡರಾತ್ರಿ ಹಂಚಿಕೊಂಡಿರುವ ಹೇಳಿಕೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ದಾಂಪತ್ಯ ಜೀವನ ಮುಕ್ತಾಯಗೊಂಡರೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ದಂಪತಿ ತಿಳಿಸಿದ್ದಾರೆ.

ಮಕ್ಕಳಿಗೆ ಸಮರ್ಪಿತ ಪೋಷಕರಾಗಿ ಮುಂದುವರಿಯಲಿದ್ದು, ಅವರ ಸಂತೋಷ ಮತ್ತು ಯೋಗಕ್ಷೇಮವೇ ತಮ್ಮ ಮೊದಲ ಆದ್ಯತೆಯಾಗಿರುತ್ತದೆ. ಈ ವೈಯಕ್ತಿಕ ನಿರ್ಧಾರದ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಇಬ್ಬರು ಮನವಿ ಮಾಡಿದ್ದಾರೆ.

ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದ ಮೂರನೇ ವಿವಾಹವು ಅಂತ್ಯವಾಗಿದೆ. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದ ಪವನ್‌ ಕಲ್ಯಾಣ್‌ ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. ಇವರ ದಾಂಪತ್ಯ ಜೀವನ 2012ರಲ್ಲಿ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು.

ನಂತರ 2013ರಲ್ಲಿ ರಷ್ಯಾ ಮೂಲದ ಅನ್ನಾ ಕೊನಿಡೇಲಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಪೊಲೆನಾ ಅಂಜನಾ ಪವಣೋವಾ ಮತ್ತು ಮಾರ್ಕ್ ಶಂಕರ್ ಪವಣೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಚಿರಂಜೀವಿ ಮತ್ತು ನಾಗೇಂದ್ರ ಬಾಬು ಅವರ ಕಿರಿಯ ಸಹೋದರರಾಗಿರುವ ಪವನ್ ಕಲ್ಯಾಣ್, 1996ರಲ್ಲಿ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಹಲವು ಯಶಸ್ವಿ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದರು.

2008ರಲ್ಲಿ ಪ್ರಜಾರಾಜ್ಯಂ ಪಕ್ಷದ ಯುವ ಘಟಕ ಯುವರಾಜ್ಯಂನ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದರು. ಬಳಿಕ 2014ರ ಮಾರ್ಚ್‌ನಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. 2019ರ ವಿಧಾನಸಭಾ ಚುನಾವಣೆಯಲ್ಲಿ ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರಗಳಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ 2024ರ ಚುನಾವಣೆಯಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜನಸೇನಾ ಪಕ್ಷ ಸ್ಪರ್ಧಿಸಿದ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತು.

2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿಕೂಟದ ಗೆಲುವಿನಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರ ವಹಿಸಿದ್ದರು. ಜೂನ್ 14ರಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಿನಿಮಾ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ಈ ಬೆಳವಣಿಗೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Related Articles

Back to top button