*ಅನುಮತಿ ಇಲ್ಲದೆ ಮದುವೆಯಲ್ಲಿ ಡಿಜೆ ಬಳಕೆ: ಇಬ್ಬರ ಮೇಲೆ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮದುವೆ ಕಾರ್ಯಕ್ರಮಕ್ಕೆ ಡಿಜೆ ಬಳಸಲು ಅನುಮತಿ ನಿರಾಕರಿಸಿದರೂ ಕೂಡ ಡಿಜೆ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡಿ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದವರ ಮೇಲೆ ಬೆಳಗಾವಿಯ ತಿಲಕವಾಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಗೋಳದಲ್ಲಿ ಈ ಘಟನೆ ನಡೆದಿದೆ. ತಿಲಕವಾಡಿಯ ಅನಗೋಳ ಬಡಮಂಜಿನಗರದ ನಿವಾಸಿಯಾದ ಶುಭಂ ನಾರಾಯಣ ಬಡಮಂಜಿ ಎಂಬುವವರು ತಮ್ಮ ಮದುವೆ ಕಾರ್ಯಕ್ರಮದ ಅಂಗವಾಗಿ ಮನೆಯ ಮುಂದೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ಡಿಜೆ ಬಳಸುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆಗೂ ಮುಂಚೆ ಆರೋಪಿಗಳಾದ ಶುಭಂ ನಾರಾಯಣ ಬಡಮಂಜ, ಡಿಕೆ ಮಾಲಿಕ ಶ್ಯಾಮ ಪರಶುರಾಮ ಗೌಂಡವಾಡಕರ ಮದುವೆ ಕಾರ್ಯಕ್ರಮಕ್ಕೆ ಡಿಜೆ ಬಳಸಲು ಅನುಮತಿ ಕೋರಿದರು, ಆದರೆ ಅನುಮತಿ ಕೋರಿರುವ ಪ್ರದೇಶವು ಜನವಸತಿ ಪ್ರದೇಶವಾಗಿದ್ದರಿಂದ ಅಲ್ಲ ವಾಸಿಸುವ ಹಿರಿಯ ನಾಗರಿಕರಿಗೆ, ಸಣ್ಣ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯುಂಟಾಗುತ್ತದೆ ಎಂದು ಅವರ ಅನುಮತಿಯನ್ನು ನೀರಾಕರಿಸಲಾಗಿದೆ.
ಆದರೂ ಡಿಜೆ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡಿದ್ದರಿಂದ ಇಬ್ಬರ ಮೇಲೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಈ ಮೂಲಕ ಪೊಲೀಸ ಇಲಾಖೆಯಿಂದ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆಯುವದು ಮತ್ತು ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿನಂತಿಸಿಕೊಳ್ಳಲಾಗಿದೆ.


