Kannada NewsKarnataka NewsLatest
ಎರಡು ಬಸ್ ಗಳ ಮಧ್ಯೆ ಸಿಲುಕಿ ಇಬ್ಬರು ಮಹಿಳೆಯರ ದಾರುಣ ಅಂತ್ಯ

ಪ್ರಗತಿವಾಹಿನಿ ಸುದ್ದಿ, ತುಮಕೂರು: ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಎರಡು ಬಸ್ ಗಳ ಮಧ್ಯೆ ಸಿಲುಕಿ ಇಬ್ಬರು ಮಹಿಳೆಯರು ದಾರುಣ ಅಂತ್ಯ ಕಂಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಗೊರವನಹಳ್ಳಿ ದೇಗುಲಕ್ಕೆ ಭೇಟಿ ನೀಡಲು ಒಟ್ಟು 7 ಮಹಿಳೆಯರ ತಂಡ ಹೊರಟಿತ್ತು. ಈ ಪೈಕಿ ಪಂಕಜಾ (50) ಹಾಗೂ ಪುಟ್ಟತಾಯಮ್ಮ (60) ಎಂಬುವವರು ಮೃತಪಟ್ಟಿದ್ದಾರೆ.
ನಿಲ್ದಾಣದಲ್ಲಿ ಒಂದು ಬಸ್ ನಿಂತಿತ್ತು. ಚಿಕ್ಕಬಳ್ಳಾಪುರ ಡಿಪೊಕ್ಕೆ ಸೇರಿದ ಇನ್ನೊಂದು ಹಿಮ್ಮುಖವಾಗಿ ಚಲಿಸುತ್ತಿತ್ತು. ಈ ವೇಳೆ ಎರಡೂ ಬಸ್ ಗಳ ಮಧ್ಯೆ ಮಹಿಳೆಯರಿರುವುದನ್ನು ಗಮನಿಸದ ಚಾಲಕ ಗೋವಿಂದರಾಜು ಬಸ್ ಹಿಮ್ಮುಖವಾಗಿ ಚಲಾಯಿಸುತ್ತಲೇ ಇದ್ದಾಗ ಇಬ್ಬರೂ ಮಹಿಳೆಯರು ಸಿಲುಕಿಕೊಂಡು ಅಸು ನೀಗಿದರು.
ಸ್ಥಳದಲ್ಲಿರುವ ಜನರು ಕೂಗಿಕೊಂಡರೂ ಚಾಲಕ ಕೇಳಿಸಿಕೊಳ್ಳದೆ ಬಸ್ ಚಲಾಯಿಸುತ್ತಲೇ ಇದ್ದುದಕ್ಕೆ ನಿಲ್ದಾಣದಲ್ಲಿದ್ದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



