ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ರಾಜ್ಯದ ಗಡಿ ವಿಚಾರ ಮುಗಿದ ಅಧ್ಯಾಯ. ಎಲ್ಲವೂ ಸರಿಯಾಗಿ ಇತ್ಯರ್ಥವಾಗಿದೆ. ಠಾಕ್ರೆ ಅವರ ಹೇಳಿಕೆ ರಾಜಕೀಯ ಪ್ರೇರಿತ. ರಾಜ್ಯ ಸರ್ಕಾರ ಅನಗತ್ಯವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದೆ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ರಾಜ್ಯಗಳ ವಿಂಗಡನೆಯಾಗುವಾಗ ತೆಗೆದುಕೊಂಡ ಗಡಿ ತೀರ್ಮಾನ ಈಗ ಮುಗಿದ ಅಧ್ಯಾಯ. ಕರ್ನಾಟಕ ಭೂಪಟ ಸ್ಪಷ್ಟವಾಗಿದ್ದು, ನಮ್ಮ ಊರು, ಗ್ರಾಮಗಳೆಲ್ಲ ವಿಂಗಡಣೆ ಆಗಿವೆ. ನಾವು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಮ್ಮಿಂದ ಒಂದಿಂಚೂ ಅವರಿಗೆ ಹೋಗುವುದಿಲ್ಲ, ಅವರಿಂದಲೂ ಒಂದಿಂಚೂ ನಮಗೆ ಬರುವುದಿಲ್ಲ. ಗಡಿ ವಿಚಾರದಲ್ಲಿ ಮಹಾಜನ್ ವರದಿ ಇದೆ. ಎಲ್ಲ ಭಾಗದ ಗಡಿ ನಿಗದಿಯಾಗಿದೆ. ಗೊಂದಲ ಸೃಷ್ಟಿಸಲು, ರಾಜಕೀಯ ಉದ್ದೇಶದಿಂದ ಠಾಕ್ರೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ ಎಂದರು.
ರಾಜ್ಯದಲ್ಲಿನ ಮರಾಠಿಗರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಮರಾಠ ಪ್ರಾಧಿಕಾರ ಅನಗತ್ಯವಾಗಿತ್ತು. ಇದರಿಂದ ಈ ವಿವಾದ ಎದ್ದಿದೆ.
ಈ ಸರ್ಕಾರ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ, ಆ ಭಾಗದ ಜನರಲ್ಲಿ ಗೊಂದಲ ಸೃಷ್ಟಿಸಿದೆ. ವಿಭಿನ್ನ ಅಭಿಪ್ರಾಯ ಮೂಡುವಂತೆ ಬೀಜ ಬಿತ್ತಿರುವುದೇ ರಾಜ್ಯ ಬಿಜೆಪಿ ಸರ್ಕಾರ. ರಾಜ್ಯದಲ್ಲಿರುವ ಮರಾಠ ಭಾಷಿಗರು ನಮ್ಮವರೇ. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಸೌಹಾರ್ದತೆಯಿಂದ ಇರಬೇಕು.
*ನಾಳೆ ರಾಜಭವನ ಚಲೋ*
ಮೂರು ಕರಾಳ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ, ರಾಜ್ಯದಲ್ಲಿ ಕೊರೋನಾ ಪರಿಹಾರ ಹಣ ನೀಡದಿರುವುದು ಹಾಗೂ ಬೆಲೆ ಏರಿಕೆ, ತೆರಿಗೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಜನರ ಧ್ವನಿಯನ್ನು ಎತ್ತಲು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನಾವು ರೈತರ ಪರವಾಗಿ ನಿಲ್ಲುತ್ತೇವೆ. ಕರಾಳ ಕಾಯ್ದೆ ಕಿತ್ತುಹಾಕಬೇಕು ಎಂಬುದು ರೈತರ ಬೇಡಿಕೆ. ಅವರ ಬೇಡಿಕೆ ಈಡೇರುವವರೆಗೆ ನಾವು ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಈ ಹಿನ್ನೆಲೆಯಲ್ಲಿ ಅವರಿಗೆ ಧ್ವನಿಯಾಗಲು ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ನಾವು ಶಿಸ್ತಿನ ಪ್ರತಿಭಟನೆ ಮಾಡಬೇಕಿದ್ದು, ಎಲ್ಲ ವಾಹನಗಳು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಂದು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಬರಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ.
ಈ ಸರ್ಕಾರದಿಂದ ನೊಂದಿರುವ ರೈತರು, ಎಲ್ಲ ವರ್ಗದ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
*ಬ್ಲಾಕ್ ಮೇಲ್, ಸಿಡಿ ವಿಚಾರ*
ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರದಲ್ಲಿ ಅವರು ಮಾಹಿತಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನನಗೂ ಕೆಲವು ವಿಚಾರಗಳು ಗೊತ್ತಿವೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ’ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ