Latest

*ಉದ್ಯಮಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್; ರಾಜ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ*

ಪ್ರಗತಿವಾಹಿನಿ ಸುದ್ದಿ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸುದ್ದಿಯಲ್ಲಿರುವಾಗಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿಯೂ ಅಂತದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಉದ್ಯಮಿ ಶ್ರೇಯಸ್ ನಾಯಕ್ (25) ಎಂಬಾತನ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ. ಉಡುಪಿ ಜಿಲೆಯ ಕುಂದಾಪುರ ತಾಲೂಕಿನ ಅಮವಾಸ್ಯೆಬೈಲು ಠಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತನ್ನ ಪ್ರಭಾವ ಬಳಿಸಿ ಶ್ರೇಯಸ್ ವಿದ್ಯಾರ್ಥಿನಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ, ಕೃತ್ಯದ ವಿಡಿಯೋ ಮಾಡಿಟ್ಟುಕೊಂಡು ಆ ವಿಡಿಯೋಗಳನ್ನು ತನ್ನ ಲ್ಯಾಪ್ ಟಾಪ್ ನಲ್ಲಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ.

ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಇಂತಹ ನೀಚ ಕೃತ್ಯವೆಸಗುತ್ತಿದ್ದಾನೆ. ಬಾಲಕಿಯೊಬ್ಬಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹೆದರಿಸಿ ಪದೇ ಪದೇ ಅತ್ಯಾಚಾರವೆಸಗಿದ್ದಾನೆ.

ಹಾಲಾಡಿ ರಸ್ತೆಯ ಹೆಗ್ಗೊಡ್ಲುವಿನ ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಪದೇ ಪದೇ ಅತ್ಯಾಚಾರಕ್ಕೊಳಗಾದ ಬಾಲಕಿಯೊಬ್ಬಳು ಗರ್ಭವತಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ವಿಕೃತ ಕಾಮಿ ವಿರುದ್ಧ ಪೋಕ್ಸೋ ಪ್ರಕರಣದಡಿ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಶ್ರೇಯಸ್ ಬಂಧನಕ್ಕೆ ತನಿಖಾ ತಂಡ ರಚಿಸಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button