
*ಸಾವಿರಾರು ಜನರಿಂದ ಅಂತಿಮ ದರ್ಶನ* -*ಸಕಲ ಸರಕಾರಿ ಗೌರವದೊಂದಿಗೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ*
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ : ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ(61) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಸಾರ್ವಜನಿಕ ದರ್ಶನದ ಬಳಿಕ ಅವರ ತೋಟದಲ್ಲಿ ಬುಧವಾರ(ಸೆ.7) ಸಂಜೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.
ತೋಟದಲ್ಲಿರುವ ಅವರ ತಂದೆ ವಿಶ್ವನಾಥ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಕತ್ತಿ ಅವರ ಸಮಾಧಿ ಸ್ಥಳದ ಪಕ್ಕದಲ್ಲಿಯೇ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದಕ್ಕೂ ಮುಂಚೆ ಬೆಲ್ಲದ ಬಾಗೇವಾಡಿ ಬಳಿಯ ವಿಶ್ವರಾಜ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರಿ ಗೌರವವನ್ನು ಸಮರ್ಪಿಸಿ ಉಮೇಶ್ ಕತ್ತಿ ಅವರ ಪತ್ನಿ ಶೀಲಾ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರಕಾರಿ ಗೌರವವನ್ನು ಸಲ್ಲಿಸಲಾಯಿತು.


ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಸಂಜೆ 6 ಗಂಟೆಗೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಸರಕಾರಿ ಗೌರವ ಸಮರ್ಪಿಸಲಾಯಿತು. ತದನಂತರ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಯವರು ಅಂತಿಮ ವಿಧಿವಿಧಾನವನ್ನು ನಡೆಸಿಕೊಟ್ಟರು.
ಇದಾದ ಬಳಿಕ ವಿಶ್ವರಾಜ್ ಸಕ್ಕರೆ ಕಾರ್ಖಾನೆ ಆವರಣದಿಂದ ಅಂತಿಮಯಾತ್ರೆ ಆರಂಭಗೊಂಡ ಅಂತಿಮಯಾತ್ರೆಯು ಬೆಲ್ಲದ ಬಾಗೇವಾಡಿ ಗ್ರಾಮದ ಮೂಲಕ ರಾತ್ರಿ 9.30 ಗಂಟೆಗೆ ತೋಟವನ್ನು ತಲುಪಿತು. ಧಾರ್ಮಿಕ ವಿಧಿವಿಧಾನದ ಬಳಿಕ ಅಂತ್ಯಕ್ರಿಯೆ ಮಾಡಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಅಗಲಿದ ಮುಖಂಡನ ಅಂತಿಮ ದರ್ಶನ ಪಡೆದುಕೊಂಡು ಅಶ್ರುತರ್ಪಣೆ ಸಲ್ಲಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಳಗಾವಿ ಮತ್ತು ಹುಕ್ಕೇರಿಯಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿ, ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿ, ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ಉಮೇಶ ಕತ್ತಿ ವಯಸ್ಸಲ್ಲದ ವಯಸ್ಸಲ್ಲಿ ಇಹಲೋಕ ತ್ಯಜಿಸಿದರು.
ಬೆಳಗಾವಿಯ ಯುಕೆ 27 ಹೊಟೆಲ್, ಯುಕೆ 27 ಸೇರಿದಂತೆ ವಿವಿಧ ಅಪಾರ್ಟ್ ಮೆಂಟ್, ಹುಕ್ಕೇರಿ ತಾಲೂಕಿನ ವಿಶ್ವರಾಜ ಸಕ್ಕರೆ ಕಾರ್ಖಾನೆ, ಹಿರಾ ಶುಗರ್ಸ್, ಹುಕ್ಕೇರಿ ವಿದ್ಯುತ್ ಸಂಘ ಹೀಗೆ ಹಲವಾರು ಉದ್ಯಮಗಳ ಮೂಲಕ ಸಾವಿರಾರು ಜನರಿಗೆ ಬೆಳಕನ್ನು ನೀಡಿದ್ದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆನ್ನುವ ಹೋರಾಟದಲ್ಲಿ ತೊಡಗಿರುವವರಿ ದೊಡ್ಡ ಆಶಾಕಿರಣವಾಗಿದ್ದ ಉಮೇಶ ಕತ್ತಿ ಮರೆಯಾಗಿ ಹೋದರು. ಅವರ ಶರೀರ ಮಣ್ಣಲ್ಲಿ ಮಣ್ಣಾಯಿತು. ಅವರು ಕಟ್ಟಿದ ಸಾಮ್ರಾಜ್ಯ ಮುನ್ನಡೆಸುವ ಹೊಣೆ ಸಹೋದರ ರಮೇಶ ಕತ್ತಿ, ಮಗ ನಿಖಿಲ್ ಕತ್ತಿ, ರಮೇಶ ಕತ್ತಿ ಮಕ್ಕಳಾದ ಪೃಥ್ವಿ ಮತ್ತು ಪವನ್ ಮೇಲಿದೆ.
https://pragati.taskdun.com/latest/umesh-kattifuneralbellada-bagewadibelagavi/
https://pragati.taskdun.com/karnataka-news/death-of-umesh-katti-holiday-for-government-offices-schools-and-colleges-across-belgaum-district-on-wednesday/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ