
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ನೇಹಜೀವಿ, ಸಹಕಾರಿ ಧುರೀಣ, ಅರಣ್ಯ, ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವನ್ನು ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಶೋಕ ವ್ಯಕ್ತಪಡಿಸಿದ್ದಾರೆ.
ಉಮೇಶ ಕತ್ತಿಯವರ ಎಲ್ಲ ಪಕ್ಷದವರಿಗೂ ಬೇಕಾಗಿದ್ದಂತೆ, ಎಲ್ಲ ಪಕ್ಷದವರೂ ಅವರನ್ನು ಸಮಾನವಾಗಿ ಪ್ರೀತಿಸುತ್ತಿದ್ದರು. ಅವರೊಬ್ಬ ಕರ್ನಾಟಕ ಕಂಡ ಜನಪ್ರಿಯ ಶಾಸಕ ಹಾಗೂ ಸಚಿವರೆನಿಸಿದ್ದರೆಂಬುದರಲ್ಲಿ ಎರಡುಮಾತಿಲ್ಲ. ಒಂಬತ್ತು ಸಲ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಎಂಟು ಸಲ ಆಯ್ಕೆಯಾದರು. ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಆಯ್ಕೆಯಾಗುವಂಥ ವ್ಯಕ್ತಿತ್ವ ಪಡೆದಿದ್ದರು. ಅವರೊಬ್ಬ ಅಪ್ಪಟ ರಾಜಕಾರಣಿಯಾಗಿದ್ದರು. ತಮ್ಮ ಸಿದ್ಧಾಂತಗಳಿಗೆ ಕೊನೆಯವರೆಗೂ ಬದ್ಧರಾಗಿಯೇ ಉಳಿದರು. ಅವರ ತಂದೆಯವರಾದ ದಿವಂಗತ ವಿಶ್ವನಾಥ ಕತ್ತಿಯವರು ನಮ್ಮ ಸಂಸ್ಥೆಯ ಅಧ್ಯಕ್ಷರಾಗಿದ್ದರು. ವಿಧಾನ ಸಭೆಯ ಸಭಾಪತಿಗಳಾಗಿ ಸೇವೆಸಲ್ಲಿಸಿದ್ದರು. ಸಹಕಾರ ಕ್ಷೇತ್ರದಲ್ಲಿಯೂ ಅಪಾರವಾದ ಕೊಡುಗೆಯನ್ನು ನೀಡಿದ್ದರು. ಅವರ ದಾರಿಯಲ್ಲಿಯೇ ಉಮೇಶ ಕತ್ತಿಯವರು ಮುನ್ನಡೆದವರು.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸದಾ ಹಾತೊರೆಯುತ್ತಿದ್ದ ಉಮೇಶ ಅವರು ಅನ್ಯಾಯವಾದಾಗೊಮ್ಮೆ ಉಗ್ರವಾಗಿ ಪ್ರತಿಭಟಿಸುತ್ತಿದ್ದರು. ಅವರು ಯಾವುದೇ ಮುಲಾಜೂ ಇಟ್ಟುಕೊಳ್ಳುತ್ತಿರಲಿಲ್ಲ. ತಮ್ಮ ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿದ್ದರು. ಅವರದು ನೇರಾನೇರ ಸ್ವಭಾವವಾಗಿತ್ತು. ಏನೇ ಹೇಳಿದರೂ ಎದುರಿಗೆ ಹೇಳುವ ಜಾಯಮಾನ ಅವರದಾಗಿತ್ತು. ಕೆಲವೊಂದು ನೆಲೆಗಳಲ್ಲಿ ಪಕ್ಷಾತೀತವಾಗಿ ಹೋರಾಡುತ್ತಿದ್ದರು.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ನನ್ನೊಂದಿಗೆ ಜೊತೆಯಾಗಿ ಕೆಲಸ ಮಾಡಿದವರು ಕತ್ತಿ. ಅಷ್ಟೇ ಮೃದುಸ್ವಭಾವ ಹಾಗೂ ಸ್ನೇಹಮಯಿಯಾಗಿದ್ದರು.
ನಮ್ಮ ವೀರಶೈವ ಲಿಂಗಾಯತ ಸಮಾಜದಲ್ಲಿ ಪ್ರಬಲ ರಾಜಕಾರಣ ಯಾಗಿ ಗುರುತಿಸಿಕೊಂಡಿದ್ದರು. ನಮ್ಮ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು. ಅನೇಕ ಸಭೆ ಸಮಾರಂಭಗಳಿಗೆ ಸಾಕ್ಷಿಯಾಗಿದ್ದರು. ಗುರುಹಿರಿಯರ ಬಗ್ಗೆ ಸದಾ ಗೌರವದಿಂದ ನಡೆದುಕೊಳ್ಳುತ್ತಿದ್ದ ಉಮೇಶ ಕತ್ತಿ ಅವರ ನಿಧನ ವಾರ್ತೆ ನನಗೆ ತೀವ್ರ ಆಘಾತ ಒದಗಿಸಿದೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನೀಯಲಿ ಎಂದು ಸಮಸ್ತ ಕೆಎಲ್‌ಇ ಪರಿವಾರದ ವತಿಯಿಂದ ಶ್ರದ್ಧಾಂಜಲಿಯನ್ನು ಡಾ.ಪ್ರಭಾಕರ ಕೋರೆಯವರು ಸಲ್ಲಿಸಿದ್ದಾರೆ.
https://pragati.taskdun.com/karnataka-news/umesh-katthi-dies-cm-bommai-deep-condolences-dead-body-to-sankeshwar-on-wednesday/
https://pragati.taskdun.com/karnataka-news/death-of-umesh-katti-holiday-for-government-offices-schools-and-colleges-across-belgaum-district-on-wednesday/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ